Advertisement

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಖಾಯಂಗೊಳಿಸಿದ ಸುಪ್ರೀಂ

02:42 PM Jul 09, 2018 | Team Udayavani |

ನವದೆಹಲಿ:ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಲ್ಲಿ ಮೂವರು ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.

Advertisement

ಗಲ್ಲುಶಿಕ್ಷೆ ಬಗ್ಗೆ  ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಅಪರಾಧಿಗಳಾದ ಮುಕೇಶ್ (29ವರ್ಷ), ಪವನ್ ಗುಪ್ತಾ (22) ಹಾಗೂ ವಿನಯ್ ಶರ್ಮಾ (23) ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಜಾಗೊಳಿಸಿ, ಗಲ್ಲುಶಿಕ್ಷೆಯನ್ನು ಎತ್ತಿಹಿಡಿದಿದೆ.

2017ರ ಮೇ 5ರಂದು ಸುಪ್ರೀಂಕೋರ್ಟ್ ನೀಡಿದ್ದ ಗಲ್ಲುಶಿಕ್ಷೆ ತೀರ್ಪಿನ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದು ನಾಲ್ಕನೇ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ (31) ಅರ್ಜಿ ಸಲ್ಲಿಸಿಲ್ಲ. ಅಕ್ಷಯ್ ಕುಮಾರ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿಲ್ಲ, ನಾವು ನಂತರ ಸಲ್ಲಿಸುತ್ತೇವೆ ಎಂದು ಅಕ್ಷಯ್ ಪರ ವಕೀಲ ಎಪಿ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ:

2012ರ ಡಿಸೆಂಬರ್ 16ರ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ಮೃಗೀಯ ರೀತಿಯಲ್ಲಿ ಅತ್ಯಾಚಾರ ಎಸಗಿದ್ದರು. ಸಾವು-ಬದುಕಿನ ನಡುವೆ ಹೋರಾಟ ನಡೆಸಿ 2012ರ ಡಿಸೆಂಬರ್ 29ರಂದು ಸಿಂಗಾಪುರ್ ಆಸ್ಪತ್ರೆಯಲ್ಲಿ ನಿರ್ಭಯಾ ಇಹಲೋಕ ತ್ಯಜಿಸಿದ್ದಳು.

Advertisement

ಪ್ರಕರಣದಲ್ಲಿ ಆರು ಮಂದಿ ಅಪರಾಧಿಗಳಾಗಿದ್ದರು. ಮುಖ್ಯ ಆರೋಪಿ ರಾಮ್ ಸಿಂಗ್ 2013ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.

ಮತ್ತೊಬ್ಬನನ್ನು ಬಾಲಾಪರಾಧಿ ಎಂದು ಕೋರ್ಟ್ ಘೋಷಿಸಿ, ಮೂರು ವರ್ಷ ಶಿಕ್ಷೆ ವಿಧಿಸಿತ್ತು. ಉಳಿದ ನಾಲ್ವರು ಅಪರಾಧಿಗಳಿಗೆ 2013ರ ಸೆಪ್ಟೆಂಬರ್ 13ರಂದು ದೆಹಲಿಯ ತ್ವರಿತ ವಿಚಾರಣಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ದೆಹಲಿ ಹೈಕೋರ್ಟ್ ಕೂಡಾ ನಾಲ್ವರ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪನ್ನು ಎತ್ತಿಹಿಡಿದಿತ್ತು. ಕಳೆದ ವರ್ಷ ಮೇ 5ರಂದು ಸುಪ್ರೀಂಕೋರ್ಟ್ ಕೂಡಾ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಏತನ್ಮಧ್ಯೆ ಮೂವರು ಅಪರಾಧಿಗಳು ಮರಣದಂಡನೆ ಶಿಕ್ಷೆ ಕುರಿತು ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next