ಹೊಸದಿಲ್ಲಿ : ಸಲಿಂಗತೆಯನ್ನು ಅಪರಾಧೀಕರಿಸುವ ಐಪಿಸಿ ಸೆ.377ರ ಸಾಂವಿಧಾನಿಕ ಸಿಂಧುತ್ವವನ್ನು ತಾನು ಪುನರ್ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಇಂದು ಸೋಮವಾರ ಹೇಳಿದೆ.
ಸಲಿಂಗಿಗಳು ಪರಸ್ಪರ ಒಪ್ಪಿಗೆಯಿಂದ ಹೊಂದುವ ಲೈಂಗಿಕ ಸಂಬಂಧವನ್ನು ನಿರಪರಾಧೀಕರಿಸಬೇಕು ಎಂಬ ಮನವಿಯನ್ನು ತಾನು ಬೃಹತ್ ಪೀಠಕ್ಕೆ ಶಿಫಾರಸು ಮಾಡುವುದಾಗಿ ಸುಪ್ರೀಂ ಕೋರ್ಟ್ ಇಂದು ಹೇಳಿತು.
ಐಪಿಸಿ ಸೆ.377ರಿಂದ ಉದ್ಭವವಾಗುವ ಸಾಂವಿಧಾನಿಕ ಪ್ರಶ್ನೆಯನ್ನು ಬೃಹತ್ ಪೀಠಕ್ಕೆ ಒಪ್ಪಿಸಿ ಆ ಬಗ್ಗೆ ವಿಸ್ತೃತ ಚರ್ಚೆಯಾಗುವ ಆವಶ್ಯಕತೆ ಇದೆ ಎಂದು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟಿಸ್ ಎ ಎಂ ಖಾನ್ವಿಲ್ಕರ್ ಮತ್ತು ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರು ಅಭಿಪ್ರಾಯ ಪಟ್ಟರು.
ಎಲ್‌ಜಿಬಿಟಿ ಸಮುದಾಯಕ ಐವರು ಸದಸ್ಯರು ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿ ಉತ್ತರ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಜಾರಿ ಮಾಡಿತು.
ತಮ್ಮ ನೈಸರ್ಗಿಕ ಲೈಂಗಿಕ ಆಯ್ಕೆಯ ಹೊರತಾಗಿಯೂ ತಾವು ಪೊಲೀಸರ ಭಯದಲ್ಲಿ ಇರಬೇಕಾದ ಸ್ಥಿತಿ ಇದೆ ಎಂದು ಈ ಐವರು ಅರ್ಜಿದಾರರು ಹೇಳಿದ್ದಾರೆ.
ಐಪಿಸಿ ಸೆ.377ನ್ನು ಅಸಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿ ನವತೇಜ್ ಸಿಂಗ್ ಜೋಹರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.