Advertisement

ಮಹಾರಾಷ್ಟ್ರ ಬಿಕ್ಕಟ್ಟು: ಅರ್ಜಿಗಳು ವಿಸ್ತೃತ ಪೀಠಕ್ಕೆ?

10:04 PM Jul 20, 2022 | Team Udayavani |

ನವದೆಹಲಿ: ಮಹಾರಾಷ್ಟ್ರದ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿ ಶಿವಸೇನೆ ಮತ್ತು ಅದರ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಗಳು ಹಲವು ಸಾಂವಿಧಾನಿಕ ಪ್ರಶ್ನೆಗಳನ್ನು ಮೂಡಿಸಿರುವ ಕಾರಣ, ಅವುಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ, ವಿಪ್‌ ಉಲ್ಲಂಘಿಸಿರುವ ಉದ್ಧವ್‌ ಬಣದ ಶಾಸಕರ ಅನರ್ಹತೆ ಕೋರಿ ಸಿಎಂ ಏಕನಾಥ ಶಿಂಧೆ ಸಲ್ಲಿಸಿರುವ ಮನವಿಗೆ ಸಂಬಂಧಿಸಿ ಸ್ಪೀಕರ್‌ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂಬ ತನ್ನ ಜು.11ರ ಆದೇಶವನ್ನೂ ನ್ಯಾಯಪೀಠ ವಿಸ್ತರಣೆ ಮಾಡಿದೆ.

ಬುಧವಾರ ಅರ್ಜಿಗಳ ವಿಚಾರಣೆ ಆರಂಭಿಸಿದ ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ, “ಎರಡೂ ಬಣಗಳು ಸಲ್ಲಿಸಿರುವ ಅರ್ಜಿಗಳಲ್ಲಿ ಪಕ್ಷದಲ್ಲಿನ ಬಿರುಕು, ರಾಜಕೀಯ ಪಕ್ಷದ ವಿಲೀನ, ಪಕ್ಷಾಂತರ, ಅನರ್ಹತೆ ಸೇರಿದಂತೆ ಹಲವು ಸಾಂವಿಧಾನಿಕ ವಿಚಾರಗಳು ಇರುವ ಕಾರಣ, ಇವುಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಉತ್ತಮ’ ಎಂದು ಹೇಳಿದೆ.

ಜತೆಗೆ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಎರಡೂ ಕಡೆಯವರಿಗೆ ನೋಟಿಸ್‌ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಆ.1ಕ್ಕೆ ಮುಂದೂಡಿದೆ.

ಬಿರುಸಿನ ವಾದ-ಪ್ರತಿವಾದ:
ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಅವರು ಉದ್ಧವ್‌ ಬಣದ ಪರ ವಾದಿಸಿದರೆ, ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ಶಿಂಧೆ ಬಣದ ಪರ ವಕಾಲತ್ತು ವಹಿಸಿದ್ದರು. ಎರಡೂ ಕಡೆ ಬಿರುಸಿನ ವಾದ-ಪ್ರತಿವಾದಗಳು ನಡೆದವು. “ಹೀಗೆಯೇ ಮುಂದುವರಿದರೆ ಜನಾದೇಶಕ್ಕೆ ಅರ್ಥವೇನಿದೆ? ಪಕ್ಷಾಂತರವನ್ನು ತಡೆಯಲೆಂದೇ ಇರುವ 10ನೇ ಪರಿಚ್ಛೇದವನ್ನು ತಿರುವು-ಮುರುವು ಮಾಡಿ, ಪಕ್ಷಾಂತರಕ್ಕೆ ಕುಮ್ಮಕ್ಕು ನೀಡಲು ಬಳಸಲಾಗುತ್ತಿದೆ’ ಎಂದು ಸಿಬಲ್‌ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹರೀಶ್‌ ಸಾಳ್ವೆ, “ಮುಖ್ಯಮಂತ್ರಿ ಬದಲಾದ ತಕ್ಷಣ ಸ್ವರ್ಗವೇನೂ ಧರೆಗುರುಳುವುದಿಲ್ಲ. ಕೇವಲ 20 ಶಾಸಕರ ಬೆಂಬಲವೂ ಇಲ್ಲದ ವ್ಯಕ್ತಿಯನ್ನು ಕೋರ್ಟ್‌ ಮತ್ತೆ ಗದ್ದುಗೆಗೇರಿಸಬೇಕು ಎಂದು ನೀವು ಬಯಸುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next