ಹೊಸದಿಲ್ಲಿ : ವಿವಾದಿತ ರಫೇಲ್ ಕೇಸ್ ಕುರಿತ ತನ್ನ ತೀರ್ಪನ್ನು ಪರಾಮರ್ಶಿಸಬೇಕೆಂದು ಕೋರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ಗುರುವಾರ ಸಮ್ಮತಿಸಿದೆ.
ಕಳೆದ ವರ್ಷ ಡಿ.14ರಂದು ಸುಪ್ರೀಂ ಕೋರ್ಟ್, “ಭಾರತ ಸರಕಾರ ಫ್ರಾನ್ಸ್‌ನಿಂದ 36 ರಫೇಲ್ ಜೆಟ್ ಗಳನ್ನು ಖರೀದಿಸಿದ ನಿರ್ಧಾರ ಪ್ರಕ್ರಿಯೆಯನ್ನು ಶಂಕಿಸಲಾಗದು’ ಎಂದು ತೀರ್ಪು ನೀಡುವ ಮೂಲಕ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಸೇರಿದಂತೆ ಹಲವಾರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಿತ್ತು.
ರಫೇಲ್ ವಿಷಯದಲ್ಲಿ ನಾಲ್ಕು ಮೇಲ್ಮನವಿಗಳನ್ನು ಸಲ್ಲಿಸಲಾಗಿದ್ದು ಇವುಗಳಲ್ಲಿ ಒಂದು ಇನ್ನೂ ದೋಷಯುಕ್ತವಾಗಿರುವ ಕಾರಣ ಅದು ರಿಜಿಸ್ಟ್ರಿಯಲ್ಲೇ ಉಳಿದಿದೆ ಎಂದು ಚೀಫ್ ಜಸ್ಟಿಸ್ ರಂಜನ್ ಗೊಗೋಯ್ ನೇತೃತ್ವದ ಪೀಠ ಹೇಳಿದೆ.
ರಫೇಲ್ ಜೆಟ್ ಡೀಲ್ ಕುರಿತ ತೀರ್ಪಿನ ಪುನರ್ ವಿಮರ್ಶೆ ಕೈಗೊಳ್ಳುವ ಪೀಠದ ಸಂರಚನೆಯನ್ನು ಬದಲಾಯಿಸಬೇಕಾಗಿದೆ. ಅದು ಕಷ್ಟಕರವೇ ಆಗಿದೆ; ಆದರೂ ನಾವು ಅದಕ್ಕಾಗಿ ಏನಾದರೂ ಮಾಡಿಯೇ ತೀರುತ್ತೇವೆ’ಎಂದು ಜಸ್ಟಿಸ್ ಎಲ್ ಎನ್ ರಾವ್ ಮತ್ತು ಸಂಜೀವ್ ಖನ್ನಾ ಅವರನ್ನೂ ಒಳಗೊಂಡಿರುವ ಪೀಠ ಹೇಳಿತು.
ವಕೀಲ ಭೂಷಣ್ ಅವರು ರಫೇಲ್ ಕೇಸ್ ಕುರಿತ ಅರ್ಜಿಗಳ ತುರ್ತು ಲಿಸ್ಟಿಂಗ್ ಕೋರಿದಾಗ ಪೀಠ ಈ ರೀತಿಯ ಉತ್ತರ ನೀಡಿತು.