ನವದೆಹಲಿ: ಮದ್ಯದಲ್ಲಿ ವಿಷ ಬೆರೆಸಿ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರನ್ನು ಹತ್ಯೆ ಮಾಡಿದ್ದ ಗೋವಾದ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡವನ್ನು ಧ್ವಂಸಗೊಳಿಸಬೇಕೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್ ಜಿಟಿ) ನೀಡಿರುವ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 09) ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ:ಭಾರಿ ಮಳೆಗೆ ಕೊಚ್ಚಿಹೋದ ಸೋಗಲಿ-ಮೂಕಿಹಾಳ ಹಳ್ಳದ ಸೇತುವೆ: ಸಂಪರ್ಕ ಕಡಿತ
ಕರಾವಳಿ ತೀರ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿರುವ ಗೋವಾದ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡವನ್ನು ಧ್ವಂಸಗೊಳಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಇಂದು ಬೆಳಗ್ಗೆ ಉತ್ತರ ಗೋವಾದ ಅಂಜುನಾದಲ್ಲಿರುವ ರೆಸ್ಟೋರೆಂಟ್ ಕಟ್ಟಡ ಒಡೆಯುವ ಕೆಲಸ ಆರಂಭಿಸಿತ್ತು. ಏತನ್ಮಧ್ಯೆ ಕರ್ಲೀಸ್ ರೆಸ್ಟೋರೆಂಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಶೀಘ್ರ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸಬೇಕೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿದ್ದು, ಇದರೊಂದಿಗೆ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸುವ ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ ಎಂದು ವರದಿ ತಿಳಿಸಿದೆ.