Advertisement

ಎಸ್ಸಿ, ಎಸ್ಟಿ ಜ್ಯೇಷ್ಠತಾ ಕಾಯ್ದೆ ಜಾರಿಗೆ ಭರವಸೆ

09:36 AM Dec 19, 2018 | |

ಬೆಳಗಾವಿ: ಪರಿಶಿಷ್ಟ ಜಾತಿ, ಪಂಗಡದ ನೌಕರರ ಹಿತ ಕಾಪಾಡಲು ಜ್ಯೇಷ್ಠತಾ ಆಧಾರದಲ್ಲಿ ಮೀಸಲಾತಿ ಕಲ್ಪಿಸುವ ಕಾನೂನಿಗೆ ಸಂಬಂಧಪಟ್ಟಂತೆ ಎರಡು ದಿನದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪರಿಶಿಷ್ಟ
ಜಾತಿ, ಪಂಗಡದ ಶಾಸಕರಿಗೆ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

Advertisement

ರಾಷ್ಟ್ರಪತಿ ಅಂಕಿತ ಹಾಕಿರುವ ಕಾಯ್ದೆ ಜಾರಿ ಕುರಿತಂತೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮಂಗಳವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನೂ ಆಹ್ವಾನಿಸಿ, ಬೆಳಗಾವಿ ಅಧಿವೇಶನ ಮುಕ್ತಾಯವಾಗುವ ಮುನ್ನ ಕಾಯ್ದೆ ಜಾರಿಗೊಳಿಸವಂತೆ ಒತ್ತಾಯ ಮಾಡಿದ್ದಾರೆ.

ಈ ಕುರಿತಂತೆ ರಾಜ್ಯ ಸರ್ಕಾರದ ಪರ ಸುಪ್ರೀಂ ಕೊರ್ಟ್‌ನಲ್ಲಿ ವಾದ ಮಾಡುತ್ತಿರುವ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟಗಿ ಅವರ ಅಭಿಪ್ರಾಯ ಪಡೆದು ಅಧಿವೇಶನ ಮುಗಿಯುವ ಮೊದಲೇ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವ ಕಾಯ್ದೆಗೆ ರಾಷ್ಟ್ರಪತಿ ಅಂಕಿತವಾಗಿದ್ದರೂ ಜಾರಿಗೊಳಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಸದನದಲ್ಲಿ ಚರ್ಚಿಸಲು ಬಿಜೆಪಿ ಸದಸ್ಯರು ಬುಧವಾರ
ನಿಲುವಳಿ ಸೂಚನೆ ಮಂಡನೆಗೆ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಮಂಡಿಸುವ ನಿಲುವಳಿ ಸೂಚನೆಗೆ ಪರಿಶಿಷ್ಟ ಜಾತಿ, ಪಂಗಡದ ಶಾಸಕರು ಪಕ್ಷಾತೀತವಾಗಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next