ನವದೆಹಲಿ:ಇಸ್ರೇಲ್ ಕಂಪನಿಯ ಗೂಢಚರ್ಯ ತಂತ್ರಾಂಶ “ಪೆಗಾಸಸ್” ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು ಸೇರಿದಂತೆ ದೇಶದ 300ಕ್ಕೂ ಅಧಿಕ ಹೆಚ್ಚು ಗಣ್ಯರ ಮೊಬೈಲ್ ಫೋನ್ ಗೆ ಕನ್ನ ಹಾಕಿದ ಆರೋಪದ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ತಜ್ಞರ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ;ಕೋವಿಡ್ 19 ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಳ; ಬಂಗಾಳ ನಗರದಲ್ಲಿ ಲಾಕ್ ಡೌನ್ ಜಾರಿ
ವೈಯಕ್ತಿಕ ನೆಲೆಯಲ್ಲಿ ತಾರತಮ್ಯ ಎಸಗುವ ಬೇಹುಗಾರಿಕೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ(ಅಕ್ಟೋಬರ್ 27) ಸಮಿತಿ ರಚನೆ ವೇಳೆ ಅಭಿಪ್ರಾಯವ್ಯಕ್ತಪಡಿಸಿದೆ. ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ.
ಪೆಗಾಸಸ್ ಕುರಿತು ತನಿಖೆ ನಡೆಸಲು ನಾವು ಹೆಸರಾಂತ ತಜ್ಞರನ್ನು ಸಮಿತಿಗೆ ಆಯ್ಕೆ ಮಾಡಿದ್ದೇವೆ. ಸೈಬರ್ ಸೆಕ್ಯುರಿಟಿ ಮತ್ತು ವಿಧಿವಿಜ್ಞಾನ ಹಿನ್ನೆಲೆ ಹೊಂದಿರುವವರನ್ನು ತಜ್ಞರನ್ನಾಗಿ ಆಯ್ಕೆ ಮಾಡಲಿದ್ದೇವೆ. ಮೂವರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಅಲೋಕ್ ಜೋಶಿ ಕೂಡಾ ಸದಸ್ಯರಲ್ಲಿ ಒಬ್ಬರಾಗಿದ್ದಾರೆ ಎಂದು ಸಿಜೆಐ ತಿಳಿಸಿದ್ದಾರೆ.
ಪೆಗಾಸಸ್ ಕುರಿತು ತನಿಖೆ ನಡೆಸಿ ಎಂಟು ವಾರಗಳಲ್ಲಿ ವರದಿಯನ್ನು ಒಪ್ಪಿಸುವಂತೆ ಸುಪ್ರೀಂಕೋರ್ಟ್ ಸಮಿತಿಗೆ ಅಂತಿಮ ಗಡುವು ವಿಧಿಸಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ಭದ್ರತೆ ಮತ್ತು ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರ ಕೆಲ ಗೂಢಚರ್ಯ ತಂತ್ರಾಂಶ ಬಳಸುತ್ತದೆಯೇ ವಿನಃ, ಯಾವುದೇ ಗಣ್ಯವ್ಯಕ್ತಿಯ ವೈಯಕ್ತಿಕ ಮಾಹಿತಿಗಾಗಿ ತಂತ್ರಾಂಶ ಬಳಸಿಲ್ಲ ಎಂದು ವಾದಿಸಿದ್ದರು.
ಆದರೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಪತ್ರಕರ್ತರು ಸೇರಿ ದೇಶದ 300ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳ ಮೊಬೈಲ್ ಸಂಖ್ಯೆ ಇದ್ದಿರುವುದು ಜಗಜ್ಜಾಹೀರಾಗಿತ್ತು.