ನವದೆಹಲಿ: ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅನಿಯಂತ್ರಿತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಭವಿಷ್ಯಕ್ಕಾಗಿ ಮಾರ್ಗಸೂಚಿಗಳನ್ನು ಕೋರಿ ಕಾಂಗ್ರೆಸ್ ನೇತೃತ್ವದ 14 ಪಕ್ಷಗಳು ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠವು “ಪ್ರಕರಣದ ಸತ್ಯಗಳಿಗೆ ಸಂಬಂಧಿಸದೆ ಸಾಮಾನ್ಯ ಮಾರ್ಗಸೂಚಿಗಳನ್ನು ಹಾಕುವುದು ಅಪಾಯಕಾರಿ” ಎಂದು ಹೇಳಿದೆ.
ಮನವಿಯನ್ನು ಪುರಸ್ಕರಿಸುವಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರಾಸಕ್ತಿಯನ್ನು ಮನಗಂಡ ರಾಜಕೀಯ ಪಕ್ಷಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು.
ವಿರೋಧ ಪಕ್ಷದ ರಾಜಕೀಯ ನಾಯಕರು ಮತ್ತು ಇತರ ನಾಗರಿಕರು ಭಿನ್ನಾಭಿಪ್ರಾಯಕ್ಕೆ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸುವ ವಿರುದ್ಧ ಬಲವಂತದ ಕ್ರಿಮಿನಲ್ ಪ್ರಕ್ರಿಯೆಗಳ ಬಳಕೆಯಲ್ಲಿ ಆತಂಕಕಾರಿ ಹೆಚ್ಚಳವನ್ನು ಮನವಿಯಲ್ಲಿ ಆರೋಪಿಸಲಾಗಿತ್ತು. ಕಾಂಗ್ರೆಸ್ , ಡಿಎಂಕೆ, ಆರ್‌ಜೆಡಿ, ಬಿಆರ್‌ಎಸ್, ತೃಣಮೂಲ ಕಾಂಗ್ರೆಸ್, ಎಎಪಿ, ಎನ್‌ಸಿಪಿ, ಶಿವಸೇನೆ (ಯುಬಿಟಿ), ಜೆಎಂಎಂ, ಜೆಡಿ(ಯು), ಸಿಪಿಐ(ಎಂ), ಸಿಪಿಐ, ಸಮಾಜವಾದಿ, ಮತ್ತು ಜೆ-ಕೆ ಎನ್ ಸಿ ಪಕ್ಷಗಳು ಜಂಟಿಯಾಗಿ ಮನವಿ ಸಲ್ಲಿಸಿದ ಪಕ್ಷಗಳಾಗಿವೆ.