ಹೊಸದಿಲ್ಲಿ : ಅತ್ಯಂತ ಮಹತ್ವದ ತೀರ್ಪೊಂದರಲ್ಲಿ ಸುಪ್ರೀಂ ಕೋರ್ಟ್, ಬಂಡಾಯ ಪೀಡಿತ ರಾಜ್ಯವಾಗಿರುವ ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರಿಂದ ನಡೆದಿದೆ ಎಂದು ಆಪಾದಿಸಲಾಗಿರುವ 250ಕ್ಕೂ ಅಧಿಕ ನ್ಯಾಯಾಂಗೇತರ ಹತ್ಯೆಗಳ ಬಗ್ಗೆ ಸಿಬಿಐ ತನಿಖೆ ಆದೇಶಿಸಿದೆ.
ಸರಕಾರದ ಸಶಸ್ತ್ರ ಬಲದಿಂದ ಮಣಿಪುರದಲ್ಲಿ 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ ಎನ್ನಲಾಗಿರುವ ನ್ಯಾಯಾಂಗೇತರ ಹತ್ಯೆಗಳ ತನಿಖೆಗೆ ಅಧಿಕಾರಿಗಳ ತಂಡವೊಂದನ್ನು ರೂಪಿಸುವಂತೆ ಸಿಬಿಐ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
2018ರ ಜನವರಿಯಲ್ಲಿ ಸಿಬಿಐ ತನ್ನ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಿದೆ.
ಈ ವರ್ಷ ಎಪ್ರಿಲ್‌ನಲ್ಲಿ ಸೇನೆಯು ಸುಪ್ರೀಂ ಕೋರ್ಟಿಗೆ “ಮಣಿಪುರದಲ್ಲಿ ಸೇನಾ ಸಿಬಂದಿಗಳ ವಿರುದ್ಧದ ಆರೋಪಿತ ಅತಿರೇಕಗಳ ಬಗ್ಗೆ ನಡೆಸಲಾಗಿದ್ದ ನ್ಯಾಯಾಂಗ ತನಿಖೆಗಳು ಪೂರ್ವಗ್ರಹ ಪೀಡಿತವಾಗಿವೆ ಮತ್ತು ಸ್ಥಳೀಯ ಕಾರಣಗಳಿಗಾಗಿ ಸೇನೆಯ ಮೇಲೆ ಗೂಬೆ ಕೂರಿಸಲಾಗಿದೆ’ ಎಂದು ಹೇಳಿತು.
ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ಮಣಿಪುರದಲ್ಲಿ ನಡೆದಿದೆ ಎನ್ನಲಾಗಿದ್ದ ನಕಲಿ ಎನ್‌ಕೌಂಟರ್‌ಗಳ ಬಗ್ಗೆ ತನಿಖೆಯನ್ನು ಆದೇಶಿಸಿತ್ತು.
ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯಡಿ, ಪ್ರಕ್ಷುಬ್ದ ಪ್ರದೇಶಗಳಲ್ಲಿ ಸೇನೆ ಅತಿಯಾದ ಪ್ರಮಾಣದಲ್ಲಿ ಬಲಪ್ರದರ್ಶನ ಮಾಡುವುದು ಮತ್ತು ಪ್ರತಿಶಕ್ತಿಯನ್ನು ಪ್ರಯೋಗಿಸುವುದಕ್ಕೆ ಆಸ್ಪದ ಇಲ್ಲ ಎಂದು ಸುಪ್ರೀಂ ಕೋರ್ಟ್ ಆ ಸಂದರ್ಭದಲ್ಲಿ ಸೇನೆಗೆ ಸ್ಪಷ್ಟಪಡಿಸಿತ್ತು.