ಹೊಸದಿಲ್ಲಿ : ಬಹುಕೋಟಿ ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದಲ್ಲಿ ಸಿಬಿಐ ಮುಂದೆ ತನಿಖೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಇಂದು ಕೋಲ್ಕತ ಪೊಲೀಸ್ ಕಮಿಷನರ್ ಗೆ ಆದೇಶಿಸಿರುವುದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರಕ್ಕೆ ಒದಗಿರುವ ಭಾರೀ ಕಾನೂನು ಪ್ರಹಾರವಾಗಿದೆ, ಜತೆಗೆ ಸಿಬಿಐ ಗೆ ಒದಗಿರುವ ನೈತಿಕ ವಿಜಯವಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ಬಿಜೆಪಿ ಇಂದು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದೆ.
ಸುಪ್ರೀಂ ಕೋರ್ಟ್ ಇಂದು ನೀಡಿರುವ ಮಹತ್ವದ ಆದೇಶದಲ್ಲಿ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಮೇಘಾಲಯದ ರಾಜಧಾನಿಯಲ್ಲಿ ಶಿಲಾಂಗ್‌ನಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ. ಆದರೆ ಅವರನ್ನು ಬಂಧಿಸುವುದಾಗಲೀ, ಅವರ ಮೇಲೆ ಬಲ ಪ್ರಯೋಗಿಸುವುದಾಗಲೀ ಮಾಡಬಾರದು ಎಂದು ಸಿಬಿಐ ಗೆ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು “ಲಕ್ಷಾತರ ಜನಸಾಮಾನ್ಯರನ್ನು ಲೂಟಿ ಮಾಡಲಾಗಿರುವ ಹಗರಣದಂತಹ ವಿಷಯಗಳನ್ನು ಯಾರೂ ರಾಜಕೀಯಗೊಳಿಸಬಾರದು’ ಎಂದರಲ್ಲದೆ ಆ ರೀತಿಯ ವರ್ತನೆ ತೋರಿರುವ ಪಶ್ಚಿಮ ಬಂಗಾಲ ಸರಕಾರವನ್ನು ತೀವ್ರವಾಗಿ ಟೀಕಿಸಿದರು.
ಶಾರದಾ ಮತ್ತು ರೋಸ್ ವ್ಯಾಲಿ ಚಿಟ್ ಫಂಡ್ ಅಕ್ರಮದಲ್ಲಿ ಲಕ್ಷಾಂತರ ಸಣ್ಣ ಹೂಡಿಕೆದಾರರ ಹಣವನ್ನು ಲೂಟಿ ಮಾಡಲಾಗಿದೆ; ಹಾಗಿರುವಾಗ ಈ ಮಹಾ ಅನ್ಯಾಯದ ವಿರುದ್ಧ ತನಿಖೆ ನಡೆಸುವುದು ನ್ಯಾಯ ಸಮ್ಮತವಲ್ಲವೇ ? ಎಂದು ರವಿ ಶಂಕರ್ ಪ್ರಸಾದ್ ಪ್ರಶ್ನಿಸಿದರು.
‘ಆದರೆ ಲಕ್ಷಾಂತರ ಜನಸಾಮಾನ್ಯರ ಹಣವನ್ನು ಕೊಳ್ಳೆ ಹೊಡೆಯಲಾಗಿರುವ ಈ ಹಗರಣದ ಬಗ್ಗೆ ಮಮತಾ ಮೌನ ವಹಿಸುವುದು ಏಕೆ ? ನ್ಯಾಯೋಚಿತ ರೀತಿಯಲ್ಲಿ ಈ ಹಗರಣದ ತನಿಖೆ ಆಗಬೇಕಿದೆ. ಸುಪ್ರೀಂ ಕೋರ್ಟ್ ಆದೇಶಿಸಿರುವ ಪ್ರಕಾರ ಕೋಲ್ಕತ ಪೊಲೀಸ್ ಕಮಿಷನರ್ ಈಗಿನ್ನು ಶಿಲಾಂಗ್ ನಲ್ಲಿ ಸಿಬಿಐ ಮುಂದೆ ತನಿಖೆಗೆ ಹಾಜರಾಗುತ್ತಾರೆ; ಏಕೆಂದರೆ ಪಶ್ಚಿಮ ಬಂಗಾಲದಲ್ಲಿ ತನಿಖೆಗೆ ಸೂಕ್ತ ವಾತಾವರಣ ಇಲ್ಲವಾಗಿದೆ’ ಎಂದು ಪ್ರಸಾದ್ ಹೇಳಿದರು.