ಹೊಸದಿಲ್ಲಿ: ‘ಹಲಾಲ್’ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸುವ ನವೆಂಬರ್ 18 ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಮಿಯತ್ ಉಲಮಾ ಇ ಮಹಾರಾಷ್ಟ್ರ ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡು ಉತ್ತರಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಏಕೆ ಪರಿಗಣಿಸಬೇಕು ಎಂದು ನ್ಯಾಯಾಲಯವು ಅರ್ಜಿದಾರರನ್ನು ಆರಂಭದಲ್ಲಿ ಪ್ರಶ್ನಿಸಿತು. ಈ ವಿಷಯವು ಪ್ಯಾನ್ ಇಂಡಿಯಾ ಶಾಖೆಗಳನ್ನು ಹೊಂದಿದ್ದು, ಅಂತಾರಾಜ್ಯ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದೆ ಎಂದು ಅರ್ಜಿದಾರರು ವಾದಿಸಿ, ರಾಜಕೀಯ ಪಕ್ಷದ ಸದಸ್ಯರು ದೂರುಗಳನ್ನು ಸಲ್ಲಿಸುತ್ತಿದ್ದಂತೆ ಕರ್ನಾಟಕ ಮತ್ತು ಬಿಹಾರ ಸರಕಾರಗಳು ಕಾನೂನು ಕ್ರಮವನ್ನು ಪ್ರಾರಂಭಿಸಿದವು ಎಂದು ಹೇಳಿದರು.
ಅರ್ಜಿದಾರರ ಪರ ಹಿರಿಯ ವಕೀಲ ರಾಜು ರಾಮಚಂದ್ರನ್, ”ನಿಷೇಧ ಸಲ್ಲಿಸಿದ್ದು ಧಾರ್ಮಿಕ ಸಮುದಾಯದ ಮೇಲೆ ಪರಿಣಾಮ ಬೀರುವ ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ” ಎಂದು ಹೇಳಿದರು.
ಉತ್ತರಪ್ರದೇಶ ಸರಕಾರ ತತ್ ಕ್ಷಣವೇ ಜಾರಿಗೆ ಬರುವಂತೆ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ನಿಷೇಧಿಸಿತ್ತು. ಇದರ ವಿರುದ್ದದ ಮನವಿಯನ್ನು ಮುಂದಿನ ದಿನಾಂಕದಂದು ಪರಿಗಣಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.