Advertisement

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ; ಕೇಂದ್ರಕ್ಕೆ ಸುಪ್ರೀಂ ನೋಟಿಸ್

08:40 AM Jan 25, 2019 | Sharanya Alva |

ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ(ಪಿಐಎಲ್) ಅರ್ಜಿಯನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್ ಶುಕ್ರವಾರ, ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಕೇಂದ್ರಕ್ಕೆ ನೋಟಿಸ್ ನೀಡಿದೆ.

Advertisement

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟೀಸ್ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಹಿಂದುಳಿದ ಮೇಲ್ವರ್ಗದ ಬಡವರಿಗೆ ಸಂವಿಧಾನ ತಿದ್ದುಪಡಿ ಮೂಲಕ ಶೇ.10ರಷ್ಟು ಮೀಸಲಾತಿ ನೀಡಲು ಅನುವು ಮಾಡಿಕೊಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಪಿಐಎಲ್ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಪ್ರಕರಣದ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ. ಆ ಹಿನ್ನೆಲೆಯಲ್ಲಿ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿರುವುದಾಗಿ ಸುಪ್ರೀಂಪೀಠ ತಿಳಿಸಿದೆ.

ಮೇಲ್ವರ್ಗದ ಬಡವರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ 124ನೇ ಸಂವಿಧಾನ ತಿದ್ದುಪಡಿ ಮಸೂದೆ ಜನವರಿ 9ರಂದು ರಾಜ್ಯಸಭೆಯಲ್ಲಿ 165 ಮತಗಳಿಂದ ಅಂಗೀಕಾರವಾಗಿದ್ದರೆ, ಲೋಕಸಭೆಯಲ್ಲಿ 323 ಮತಗಳಿಂದ ಅಂಗೀಕಾರವಾಗಿತ್ತು. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಏಳು ಮಂದಿ, ಲೋಕಸಭೆಯಲ್ಲಿ ಮೂರು ಸಂಸದರು ವಿರೋಧ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next