ನವದೆಹಲಿ : ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ ಮತ್ತು ಅದು ಏಕೆ ಕಾಲ ಹರಣ ಮಾಡುತ್ತಿದೆ ಎಂದು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಸ್ವಾಮಿ ಅವರ ಮನವಿ ಕೇಂದ್ರವು “ಹೌದು” ಅಥವಾ “ಇಲ್ಲ” ಎಂದು ಹೇಳಬೇಕಾದ ಸಣ್ಣ ವಿಷಯವಾಗಿದೆ ಎಂದು ಹೇಳಿದರು.
”ಪ್ರತ್ಯುತ್ತರ ಸಿದ್ಧವಾಗಿದೆ. ನಾವು ಸಚಿವಾಲಯದಿಂದ ಸೂಚನೆಗಳನ್ನು ಪಡೆಯಬೇಕಾಗಿದೆ”ಎಂದು ಕೇಂದ್ರ ಸರಕಾರದ ವಕೀಲರು ಪ್ರತಿಕ್ರಿಯೆಯನ್ನು ಸಲ್ಲಿಸಲು ಸಮಯ ಕೋರಿದರು.
“ಅರ್ಜಿದಾರರಿಗೆ (ಸ್ವಾಮಿ) ಸಲ್ಲಿಸಬೇಕಾದ ಪ್ರತಿಯೊಂದಿಗೆ ನಾಲ್ಕು ವಾರಗಳಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಲಿ. ಮರುಪ್ರತಿಕ್ರಿಯೆ ಇದ್ದಲ್ಲಿ ಎರಡು ವಾರಗಳಲ್ಲಿ ಸಲ್ಲಿಸಬೇಕು’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತು.
Related Articles
ಇದಕ್ಕೂ ಮೊದಲು ಆಗಸ್ಟ್ 3 ರಂದು, ಆಗಿನ ಸಿಜೆಐ ಎನ್‌ವಿ ರಮಣ ನೇತೃತ್ವದ ಪೀಠವು ನಿವೃತ್ತರಾದ ನಂತರ, ಸ್ವಾಮಿ ಅವರ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಹೇಳಿತ್ತು.