Advertisement

ಆನೆ ಕಾರಿಡಾರ್‌ ರಚನೆ: ಮತ್ತೆ ಕರ್ನಾಟಕಕ್ಕೆ ತರಾಟೆ 

06:00 AM Jul 13, 2018 | |

ನವದೆಹಲಿ: “ರಾಜ್ಯ ಸರ್ಕಾರಗಳ ಆದೇಶ ಪಾಲನೆ ವಿಚಾರದಲ್ಲಿ ನಾವಂತೂ ಭರವಸೆ ಕಳೆದುಕೊಂಡಿದ್ದೇವೆ, ನೀವು ಅಸಹಾಯಕ ಸ್ಥಿತಿಗೆ ತಲುಪಿದ್ದೀರಾ…?’ ಇದು ಆನೆ ಕಾರಿಡಾರ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಕೇಳಿದ ಬಗೆ. ದಿನೇ ದಿನೆ ಹೆಚ್ಚುತ್ತಿರುವ
ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ನ್ಯಾ. ಮದನ್‌ ಬಿ.ಲೋಕುರ್‌ ಮತ್ತು ನ್ಯಾ. ದೀಪಕ್‌ ಗುಪ್ತಾ ಅವರಿದ್ದ ದ್ವಿಸದಸ್ಯ ಪೀಠ, ಕರ್ನಾಟಕವೂ ಸೇರಿ 13 ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿತು. 

Advertisement

ದೇಶದ ಒಟ್ಟು 27 ಗಂಭೀರ ಆನೆ ಕಾರಿಡಾರ್‌ಗಳು 22 ರಾಜ್ಯಗಳ ಪರಿಧಿಯೊಳಗೆ ಬರುತ್ತವೆ. ಸುಪ್ರೀಂಕೋರ್ಟ್‌ನ ಆದೇಶದ ನಂತರವೂ 13 ರಾಜ್ಯಗಳು ಆನೆ ಕಾರಿಡಾರ್‌ ರಚಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಪೀಠದ ಮುಂದೆ ಅಸಹಾಯಕ ಸ್ಥಿತಿ ವ್ಯಕ್ತಪಡಿಸಿತು. ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ದ್ವಿಸದಸ್ಯ ಪೀಠ, “”ನಾವೇನು ಮಾಡುವುದು? ಯಾವ ರಾಜ್ಯ ಸರ್ಕಾರಗಳೂ ಭಾರತ ಸರ್ಕಾರದ
ಮಾತು ಕೇಳುತ್ತಿಲ್ಲ. ನಿನ್ನೆ(ಬುಧವಾರ) ಕೂಡ ಇದೇ ಪರಿಸ್ಥಿತಿ ಎದುರಾಗಿತ್ತು. ಇಂದೂ ಆ ಪರಿಸ್ಥಿತಿ ಮುಂದುವರಿದಿದೆ. ಇದು ನಿರಾಶಾದಾಯಕ ಸ್ಥಿತಿ. ಇದಕ್ಕೊಂದು ಪರಿಹಾರ ಕಾಣಲೇಬೇಕು. ಭಾರತ ಸರ್ಕಾರವೂ ಅಸಹಾಯಕ ಸ್ಥಿತಿಗೆ ಬಂದಿದೆಯೇ?” ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ
ಸಾಲಿಸಿಟರ್‌ ಜನರಲ್‌ ಎ.ಎಲ್‌.ಎಸ್‌. ನಾಡಕರ್ಣಿಗೆ ಕೇಳಿತು.

ಏ. 23 ರಂದೇ ಸುಪ್ರೀಂಕೋರ್ಟ್‌ ಆನೆ ಕಾರಿಡಾರ್‌ ರಚಿಸುವ ಬಗ್ಗೆ ನಾಲ್ಕು ವಾರಗಳಲ್ಲಿ ಅಭಿಪ್ರಾಯ ತಿಳಿಸಿ ಎಂದು 19 ರಾಜ್ಯಗಳಿಗೆ ಸೂಚಿಸಿತ್ತು. ಆದರೆ, ಕೋರ್ಟ್‌ಗೆ 3 ರಾಜ್ಯಗಳು, ಕೇಂದ್ರದ ಮುಂದೆ 5 ರಾಜ್ಯಗಳು ತಮ್ಮ ಅಭಿಪ್ರಾಯ ತಿಳಿಸಿವೆ. ಆದರೆ, 13 ರಾಜ್ಯಗಳು, ಭಾರತ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಆದೇಶ ಉಲ್ಲಂಘನೆ ಮಾಡಿವೆ ಎಂದು ನಾಡಕರ್ಣಿ ಪೀಠದ ಮುಂದೆ ಹೇಳಿದರು. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಪೀಠ, “”ಅವರು ಭಾರತ ಸಂವಿಧಾನದ ಬಗ್ಗೆಯೂ ಅಸಡ್ಡೆ ತೋರಿದ್ದಾರೆ” ಎಂದಿತು. ಜತೆಯಲ್ಲೇ ವಾದ ಮುಂದುವರಿಸಿದ ನಾಡಕರ್ಣಿ ಅವರು, ಈ ರಾಜ್ಯಗಳಲ್ಲಿ ರಸ್ತೆ, ರೈಲು ಅಥವಾ ವಿದ್ಯುತ್‌ ಶಾಕ್‌ನಿಂದಾಗಿ ಹಲವಾರು ಆನೆಗಳು ಸತ್ತಿವೆ ಎಂಬುದನ್ನು ಪೀಠದ ಮುಂದೆ ಹೇಳಿದರು. 

“”ಭಾರತ ಸರ್ಕಾರ ಏನು ಬೇಕಾದರೂ ಹೇಳಲಿ, ನಾವು ನಮ್ಮ ಪಾಡಿಗೆ, ನಮಗೆ ಬೇಕಾದಂತೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಗಳು ಹೇಳಲು ಶುರು ಮಾಡಿದರೆ ಅದು ಅಪಾಯಕಾರಿ. ಅಲ್ಲಿಗೆ ಇಡೀ ವ್ಯವಸ್ಥೆಯೇ ಬಿದ್ದು ಹೋಗಿದೆ ಎಂದರ್ಥ. ಇದೊಂದು ರೀತಿ ವಿಚಿತ್ರ ಸನ್ನಿವೇಶ” ಎಂದೂ
ಕೋರ್ಟ್‌ ಅಭಿಪ್ರಾಯ ಪಟ್ಟಿತು. ಈ ಸಂದರ್ಭದಲ್ಲಿ ಕರ್ನಾಟಕ, ಉತ್ತರಾಖಂಡ, ಒಡಿಶಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್‌, ರಾಜಸ್ಥಾನ ರಾಜ್ಯಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ವೆಂಬುದನ್ನು ನಾಡಕರ್ಣಿ ಪೀಠದ ಗಮನಕ್ಕೆ ತಂದರು. ಅಲ್ಲದೇ, ಈಗಾಗಲೇ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು, ಆನೆ ಕಾರಿಡಾರ್‌ಗಳನ್ನು ರಚಿಸಲು ಸಲಹೆಗಳಿಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next