ಹೊಸದಿಲ್ಲಿ : ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ತಡೆಯಲು ವಿಫಲವಾದ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ವಿಧಿಸಿರುವ 100 ಕೋಟಿ ರೂ. ದಂಡವನ್ನು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್ ಇಂದು ಬುಧವಾರ ಮೇಘಾಲಯ ಸರಕಾರಕ್ಕೆ ಆದೇಶಿಸಿದೆ.
ಅಕ್ರಮ ಗಣಿಗಾರಿಕೆಯ ಮೂಲಕ ಸಂಗ್ರಹಿಸಲಾಗಿರುವ ಕಲ್ಲಿದ್ದಲನ್ನು ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಒಪ್ಪಿಸುವಂತೆ ಜಸ್ಟಿಸ್ ಅಶೋಕ್ ಭೂಷಣ್ ಮತ್ತು ಜಸ್ಟಿಸ್ ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಮೇಘಾಲಯ ಸರಕಾರಕ್ಕೆ ಅಪ್ಪಣೆ ಮಾಡಿತು.
ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಈ ಅಕ್ರಮ ಕಲ್ಲಿದ್ದಲನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ರಾಜ್ಯ ಸರಕಾರದಲ್ಲಿ ಠೇವಣಿ ಇರಿಸಬೇಕು ಎಂದು ಕೋರ್ಟ್ ಹೇಳಿತು.
ಖಾಸಗಿ ಮತ್ತು ಸಮುದಾಯ ಒಡೆತನದ ಭೂಮಿಯಲ್ಲಿ ಸಂಬಂಧಿತ ಪ್ರಾಧಿಕಾರಿಗಳ ಅನುಮತಿಗೆ ಅನುಗುಣವಾಗಿ ಕಲ್ಲಿದ್ದಲು ಗಣಿಗಾರಿಕೆಯನ್ನು ಮುಂದುವರಸಿಕೊಂಡು ಹೋಗುವುದಕ್ಕೆ ಸುಪ್ರೀಂ ಕೋರ್ಟ್ ಇದೇ ವೇಳೆ ಅನುಮತಿ ನೀಡಿದೆ.
ಕಳೆದ ಜನವರಿ 4ರಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಮೇಘಾಲಯ ಸರಕಾರಕ್ಕೆ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ತಡೆಯಲು ವಿಫಲವಾದುದಕ್ಕೆ 100 ಕೋಟಿ ರೂ. ದಂಡ ಹೇರಿತ್ತು.