ಹೊಸದಿಲ್ಲಿ : ಕೇರಳ ಲವ್ ಜಿಹಾದ್ ಕೇಸಿಗೆ ಸಂಬಂಧಪಟ್ಟು ಹದಿಯಾ ಶಾಫೀನ್ ಳನ್ನು ನವೆಂಬರ್ 27ರಂದು ತನ್ನ ಮುಂದೆ ಹಾಜರುಪಡಿಸುವಂತೆ ಸುಪ್ರೀಂ ಕೋರ್ಟ್ ಇಂದು ಸೋಮವಾರ ಆದೇಶಿಸಿದೆ.
ನವೆಂಬರ್ 27ರಂದು ಹದಿಯಾಳ ವಿಚಾರಣೆಯನ್ನು ರಹಸ್ಯವಾಗಿ ನಡೆಸಬೇಕೆಂದು ಆಕೆಯ ತಂದೆ ಮಾಡಿಕೊಂಡಿರುವ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮುಕ್ತ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ ಎಂದು ಅದು ಹೇಳಿದೆ.
ಹದಿಯಾ ಪ್ರಾಯ ಪ್ರಬುದ್ಧೆಯಾಗಿರುವುದರಿಂದ ಆಕೆಯ ಒಪ್ಪಿಗೆಯೇ ಮೂಲಭೂತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ಮಗಳು ಲವ್ ಜಿಹಾದ್ ಪರಿಣಾಮವಾಗಿ ಮದುವೆಯಾದ ಬಳಿಕ ಆಕೆಯನ್ನು ಇಸ್ಲಾಂ ಗೆ ಬಲವಂತದಿಂದ ಮತಾಂತರಿಸಲಾಗಿದೆ ಎಂದು ಹದಿಯಾಳ ತಂದೆ ಈ ಮೊದಲು ಆರೋಪಿಸಿದ್ದರು.
ಹದಿಯಾಳ ಪ್ರಕರಣದಲ್ಲಿ ಲವ್ ಜಿಹಾದ್ ಅಂಶ ಇದೆಯೇ ಎಂಬುದನ್ನು ತನಿಖೆ ಮಾಡುವಂತೆ ಈ ಮೊದಲು ಸುಪ್ರೀಂ ಕೋರ್ಟ್, ರಾಷ್ಟ್ರೀಯ ತನಿಖಾ ಸಂಸ್ಥೆಗೆ ಆದೇಶಿಸಿತ್ತು. ಇಬ್ಬರು ಪ್ರಾಯ ಪ್ರಬುದ್ಧರು ಪರಸ್ಪರ ಒಪ್ಪಿಗೆಯ ಮೂಲಕ ಆಗಿರುವ ಮದುವೆಯನ್ನು ಹೈಕೋರ್ಟ್ ರದ್ದು ಮಾಡಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
25ರ ಹರೆಯದ ಹದಿಯಾ ಓರ್ವ ಹೋಮಿಯೋಪತಿಕ್ ವೈದ್ಯೆಯಾಗಿದ್ದು ಕಳೆದ ವರ್ಷ ಶಾಫೀನ್ ಜಹಾನ್ ಎಂಬಾತನನ್ನು ಮದುವೆಯಾದ ಬಳಿಕ ಇಸ್ಲಾಂ ಗೆ ಮತಾಂತರಗೊಂಡಿದ್ದಳು.
ಶಾಫೀನ್ ಜಹಾನ್‌ಗೆ ಉಗ್ರ ನಂಟಿದೆ ಎಂದು ಹದಿಯಾಳ ತಂದೆ ಹೇಳಿದ್ದುದನ್ನು ಕೇರಳ ಹೈಕೋರ್ಟ್ ಒಪ್ಪಿತ್ತು. ಹದಿಯಾಳನ್ನು ಆಕೆಯ ಸ್ನೇಹಿತರು ಬಲವಂತದಿಂದ ಇಸ್ಲಾಂ ಗೆ ಮತಾಂತರ ಮಾಡಿರುವುದಾಗಿ ಹದಿಯಾಳ ತಂದೆ ಆರೋಪಿಸಿದ್ದರು.