ಪುತ್ತೂರು : ತನ್ನವರನ್ನು ಕಳೆದುಕೊಂಡು, ಸೂರೂ ಇಲ್ಲದೆ ಅನಾಥರಾಗಿ ಕಳೆದ 6 ತಿಂಗಳಿಂದ ನಗರದ ಮಿನಿ ವಿಧಾನ ಸೌಧ ಕಟ್ಟಡದ ಗೋಡೆ ಬದಿಯಲ್ಲಿ ಆಶ್ರಯ ಪಡೆದಿದ್ದ ಸುಳ್ಯಪದವು ಗ್ರಾಮದ ಹುಕ್ರಪ್ಪ ಮೂಲ್ಯ ಅವರಿಗೆ ಆಶ್ರಯ ನೀಡಲು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ದೈಗೋಳಿಯ ಸಾಯಿನಿಕೇತನ ಸೇವಾಶ್ರಮ ಸಂಸ್ಥೆಯವರು ಮುಂದೆ ಬಂದಿದ್ದಾರೆ.
ಪುತ್ತೂರು ನಗರದಲ್ಲಿ ಅಲೆದಾಡುತ್ತಿದ್ದ ಸುಮಾರು 70ರ ಹರೆಯದ ಹುಕ್ರಪ್ಪ ಮೂಲ್ಯರ ಅಸಹಾಯಕತೆ ಹಾಗೂ ತೊಂದರೆಯ ಕುರಿತು ಮಾಧ್ಯ ಮಗಳಲ್ಲಿ ವರದಿ ಪ್ರಕಟವಾಗಿತ್ತು. ಉದ ಯವಾಣಿ ಸುದಿನದಲ್ಲಿ ಡಿ. 8ರಂದು ‘ಎಲ್ಲವನ್ನೂ ಕಳೆದುಕೊಂಡ ಅಜ್ಜನಿಗೆ ಬೇಕು ನೆರವು’ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ಅಜ್ಜ ತೋಡಿಕೊಂಡ ನೋವು, ನೆನಪುಗಳ ಮಾತನ್ನು ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ವರದಿಗಳನ್ನು ಗಮನಿಸಿದ ಸೇವಾಶ್ರಮ ಸಂಸ್ಥೆಯವರು ಅಜ್ಜನ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಸಾಯಿ ನಿಕೇತನ ಸೇವಾಶ್ರಮ ಸಂಸ್ಥೆಯ ಡಾ| ಶಾರದಾ ಹಾಗೂ ಡಾ| ಉದಯ ಕುಮಾರ್ ಅವರು ಶನಿವಾರ ಬೆಳಗ್ಗೆ ಪುತ್ತೂರಿಗೆ ಆಗಮಿಸಿ ಹುಕ್ರಪ್ಪ ಮೂಲ್ಯ ಅವರನ್ನು ಭೇಟಿಯಾಗಿ ಮನವೊಲಿಸಿ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ಸ್ಥಳೀಯ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನೂ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಪ್ರಾಥಮಿಕ ತಪಾಸಣೆಯನ್ನು ನಡೆಸಿ, ಹುಕ್ರಪ್ಪ ಮೂಲ್ಯ ಅವರನ್ನು ಆಶ್ರಮಕ್ಕೆ ವಾಹನದಲ್ಲಿ ಕರೆದೊಯ್ದಿದ್ದಾರೆ.
ದೈಗೋಡಿಯ ಸಾಯಿ ನಿಕೇತನ ಸೇವಾಶ್ರಮದಲ್ಲಿ ಈಗಾಗಲೇ 90 ಮಂದಿ ನಿರ್ಗತಿಕರು, ಮಾನಸಿಕ ತೊಂದರೆಗೊಳಗಾದವರಿಗೆ ಆಶ್ರಯ ನೀಡಲಾಗಿದ್ದು, ಹುಕ್ರಪ್ಪ ಮೂಲ್ಯ ಅವರನ್ನೂ ಸೇರಿಸಿಕೊಳ್ಳಲಾಗದೆ. ಅವರ ಸಮಸ್ಯೆಗಳನ್ನು ಮನಗಂಡು ಧೈರ್ಯ ತುಂಬುವ, ಸೂಕ್ತ ಚಿಕಿತ್ಸೆಗಳನ್ನು ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಆಶ್ರಮದ ಸಂಯೋಜಕರು ತಿಳಿಸಿದ್ದಾರೆ.
ಆಶ್ರಮದಲ್ಲಿ ಆಶ್ರಯ
ಹುಕ್ರಪ್ಪ ಮೂಲ್ಯ ಅವರನ್ನು ಆಸ್ಪತ್ರೆಯಲ್ಲಿ ಪ್ರಾಥಮಿಕವಾಗಿ ತಪಾಸಣೆ ನಡೆಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಆಶ್ರಮಕ್ಕೆ ಕರೆ ತಂದಿದ್ದೇವೆ. ಇನ್ನು ಯಾವ ರೀತಿಯ ಟ್ರೀಟ್‌ಮೆಂಟ್ ಬೇಕೆಂದು ಗಮನಿಸಿ ಮುಂದುವರೆಯುತ್ತೇವೆ. ಅಸಹಾಯಕರು, ನಿರ್ಗತಿಕರಿಗೆ ಆಶ್ರಯ ನೀಡುವುದೇ ನಮ್ಮ ಕೆಲಸ. ಅವರು ಸ್ವಸ್ಥಗೊಂಡ ಬಳಿಕ ಮನೆಯವರು ಅಥವಾ ಸಂಬಂಧಪಟ್ಟವರು ಸಂಪರ್ಕಿಸಿದರೆ ಕಳುಹಿಸಿಕೊಡುತ್ತೇವೆ. ಪುನರ್ವಸತಿಗೂ ವ್ಯವಸ್ಥೆ ಮಾಡುತ್ತೇವೆ.
– ಡಾ| ಶಾರದಾ
ಸಾಯಿ ನಿಕೇತನ ಸೇವಾಶ್ರಮ