Advertisement

ಹಿಂದೂ ವಿರೋಧಿ ಅಂತಾರೆ!

01:08 AM Jul 18, 2019 | Team Udayavani |

ಬೆಂಗಳೂರು: “ಒಂದು ರಸ್ತೆಯಲ್ಲಿ ಒಂದು ಕಡೆ ಮಾತ್ರ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ತಿಳಿಸಲು ಹೋದರೆ, ನಮ್ಮನ್ನೇ “ಹಿಂದೂ ವಿರೋಧಿಗಳು’ ಎನ್ನುತ್ತಾರೆ’ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ವಿಷಾದ ವ್ಯಕ್ತಪಡಿಸಿದರು.

Advertisement

ಮಲ್ಲೇಶ್ವರದ ನಗರ ಆರೋಗ್ಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಪರಿಸರ ಜಾಗೃತಿ ಮೂಡಿಸಲು ಬಿಬಿಎಂಪಿ ಹಮ್ಮಿಕೊಂಡಿದ್ದ ಶಾಲಾ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಬಾರಿ ಗಣೇಶ ಚತುರ್ಥಿ ವೇಳೆ ರಸ್ತೆಗಳಲ್ಲಿ ಮೂರರಿಂದ ನಾಲ್ಕು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ’ ಎಂದು ಶಿಕ್ಷಕರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮೇಯರ್‌, “ಮನವಿ ಮಾಡಿದರೆ ನಮ್ಮನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಾರೆ. ಮಣ್ಣಿನ ಗಣಪತಿಯೂ ಶ್ರೇಷ್ಠ ಎನ್ನುವುದನ್ನು ಸಾರ್ವಜನಿಕರೇ ತಿಳಿದುಕೊಳ್ಳಬೇಕು. ಅರಿವು ಮೂಡಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ, ನೀರಿನ ಮಿತ ಬಳಕೆ, ಪ್ಲಾಸ್ಟಿಕ್‌ ಬಳಕೆ ನಿಷೇಧ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಮೂರ್ತಿ ಬಳಕೆ ಹಾಗೂ ಕಸ ವಿಂಗಡಣೆ ಮಾಡುವ ಬಗ್ಗೆ ನಿತ್ಯ ಎರಡು ನಿಮಿಷಗಳ ಕಾಲ ಶಾಲೆಗಳಲ್ಲಿ ಅರಿವು ಮೂಡಿಸಬೇಕು. ಆಗ ಮಕ್ಕಳು ಇದನ್ನು ಪಾಲಿಸುತ್ತಾರೆ. ಉಳಿದವರಿಗೂ ತಿಳಿಸುತ್ತಾರೆ’ ಎಂದರು.

ಈ ಅಂಶಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಹೀಗಾಗಿ, ಎಲ್ಲ ಶಾಲಾ ಮಕ್ಕಳ ಸಹಕಾರ ಅವಶ್ಯಕತೆಯಿದೆ. ಪಾಲಿಕೆಯ ಪಶ್ಚಿಮ ವಲಯದಲ್ಲಿ 33 ಬಿಬಿಎಂಪಿ ಹಾಗೂ ಸುಮಾರು 140 ಖಾಸಗಿ ಶಾಲೆಗಳಿದ್ದು, ಎಲ್ಲರೂ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದರು.

Advertisement

ಬಿಬಿಎಂಪಿ ವತಿಯಿಂದ ನಗರದ ಎಂಟು ವಲಯಗಳಲ್ಲೂ ಜಾಥಾ ಆಯೋಜಿಸಲಾಗುತ್ತಿದೆ. ಈ ಸಂಬಂಧ ದಕ್ಷಿಣ ವಲಯದಲ್ಲಿ ಜು.20ರಂದು ಎಲ್ಲ ಶಾಲಾ ಮಕ್ಕಳ ಸಹಯೋಗದಲ್ಲಿ ಜಾಥಾ ನಡೆಯಲಿದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ ಮುಂದಿನ ವಾರ ಜಾಥಾ ನಡೆಯಲಿದ್ದು, ಈ ಬಗ್ಗೆ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗುವುದು ಎಂದರು. ಸಭೆಯಲ್ಲಿ ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ, ಶಾಲಾ ಮುಖ್ಯಸ್ಥರು ಮತ್ತಿತರರು ಹಾಜರಿದ್ದರು.

ಶಾಲಾ ಮುಖ್ಯಸ್ಥರ ಗೈರು: ಮೇಯರ್‌ ಅಸಮಾಧಾನ: ಸಭೆಗೆ ನಿರೀಕ್ಷಿತ ಮಟ್ಟದಲ್ಲಿ ಶಾಲಾ ಮುಖ್ಯಸ್ಥರು ಹಾಜರಾಗದೆ ಇರುವುದಕ್ಕೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅಸಮಾಧಾನ ವ್ಯಕ್ತಪಡಿಸಿದರು. “ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕರೆದಿರುವ ಸಭೆಗೆ ಗೈರಾಗುವುದು ಸರಿಯಲ್ಲ. ಈ ಭಾಗದಲ್ಲಿ 140 ಖಾಸಗಿ ಶಾಲೆಗಳು ಮತ್ತು 33 ಬಿಬಿಎಂಪಿ ಶಾಲೆಗಳಿವೆ. ಬಹುತೇಕರು ಹಾಜರಾಗದೆ ಇರುವುದು ಬೇಸರ ತಂದಿದೆ ಮಾಡಿದೆ ಎಂದರು.

ಶಾಲಾ ಮುಖ್ಯಸ್ಥರು ನೀಡಿದ ಸಲಹೆಗಳು
-ಗಣಪತಿ ಹಬ್ಬಕ್ಕೆ ರಾಜಕೀಯ ನಾಯಕರು ಹಣ ನೀಡುವುದು ನಿಲ್ಲಲಿ, ಇದರಿಂದಲೇ ಪಿಒಪಿ ಗಣಪತಿ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಬೇಕು.

-ಶಾಲಾ ಮಕ್ಕಳಿಗೆ ಸ್ಟೀಲ್‌ ಬಾಟಲ್‌ ಮಾತ್ರ ಬಳಸುವಂತೆ ಸೂಚಿಸಬೇಕು.

-ಸ್ಲಂ ಪ್ರದೇಶಗಳಲ್ಲೂ ಪರಿಸರ ಜಾಗೃತಿ ಹೆಚ್ಚಾಗಬೇಕು.

-ಮಳೆ ನೀರು ಕೋಯ್ಲು ಪದ್ಧತಿ ಅಳವಡಿಸಿಕೆಗೆ ಅನುದಾನಿತ ಶಾಲೆಗಳಿಗೂ ಪಾಲಿಕೆ ನೆರವು ನೀಡಬೇಕು.

-ಪಿಒಪಿ ಗಣಪತಿ ಪೂಜೆಗೆ ಅಸಹಕಾರ ಚಳವಳಿ ರೀತಿಯಲ್ಲೇ ವಿರೋಧ ವ್ಯಕ್ತಪಡಿಸಬೇಕು.

ಪಿಒಪಿ ಗಣಪತಿ ಮೂರ್ತಿಗಳಿಗೆ ಕಡಿವಾಣ: ಗಣೇಶ ಚರ್ತುಥಿಯ ವೇಳೆ ಬಳಸುವ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣಪತಿ ಮೂರ್ತಿಗಳಿಂದ ಪರಿಸರದ ಮೇಲೆ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ ಈಗಲಿಂದಲೇ ಕಾರ್ಯಪ್ರವೃತ್ತವಾಗಿದೆ. ನಗರದ ಹೊರವಲಯಗಳಿಂದ ಬರುವ ಪಿಒಪಿ ಗಣಪತಿ ಮೂರ್ತಿಗಳಿಗೆ ಕಡಿವಾಣ ಹಾಕುವುದಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ನಿರ್ಮಾಣ ಹಂತದಲ್ಲೇ ಪಿಒಪಿ ತಾಯರಿಕೆಯ ಮೇಲೆ ಬಿಬಿಎಂಪಿ ಕಣ್ಣಿಟ್ಟಿದೆ. ಬುಧವಾರ ಪಾಲಿಕೆ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ನೇತೃತ್ವದಲ್ಲಿ ಮೂರು ತಂಡಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕುಂಬಳಗೊಡಿಗೆ ಭೇಟಿ ನೀಡಿದ್ದು, ಪಿಒಪಿ ಗಣಪತಿ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ನಗರದಲ್ಲಿ ಮಾರಾಟ ಮಾಡಬಾರದು ಎಂದು ಮೂರ್ತಿ ತಯಾರಕರಿಗೆ ಸೂಚಿಸಿದ್ದಾರೆ.

ಕುಂಬಳಗೊಡಿನಲ್ಲಿ ಈಗಾಗಲೇ ಒಂದು ಸಾವಿರ ಪಿಒಪಿ ಗಣಪತಿ ಮೂರ್ತಿಗಳು ತಯಾರಾಗಿವೆ. ಈ ಮೂರ್ತಿಗಳನ್ನು ನಗರಕ್ಕೆ ತರಬಾರದು. ತಂದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈಗ ಇರುವ ಪೊಲೀಸ್‌ ಚೆಕ್‌ ಪೋಸ್ಟ್‌ಗಳ ಮೂಲಕವೇ ಮೂರ್ತಿಗಳನ್ನು ನಗರದ ಒಳಗೆ ತೆಗೆದುಕೊಂಡು ಬರುವುದನ್ನು ತಡೆಯುವುದರ ಬಗ್ಗೆ ಚರ್ಚೆ ನಡೆದಿದೆ.

ಪೊಲೀಸ್‌, ಆರ್‌ಟಿಒ ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಬರೆದು, ಪಿಒಪಿ ಗಣಪತಿ ಮೂರ್ತಿಗಳು ನಗರ ಪ್ರವೇಶಿಸದಂತೆ ತಡೆಯಲು ಸಹಕರಿಸುವಂತೆ ಮನವಿ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next