Advertisement

ಉಡುಪಿ: ಸಾವಯವ ಸಂತೆಗೆ ಮತ್ತೆ ಚಾಲನೆ

10:11 AM Dec 17, 2018 | |

ಉಡುಪಿ: ಮಳೆಗಾಲದ ಸಮಸ್ಯೆಯಿಂದ ನಿಲುಗಡೆಗೊಂಡಿದ್ದ ರವಿವಾರದ ಸಾವಯವ ಸಂತೆ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆ ಆವರಣದಲ್ಲಿ ಡಿ. 16ರಂದು ಮತ್ತೆ ಆರಂಭಗೊಂಡಿತು. 

Advertisement

ಬೆಳಗ್ಗೆ 6.30ರಿಂದಲೇ ಗ್ರಾಹಕರು ಆಗಮಿಸಿ ಸಾವಯವ ಉತ್ಪನ್ನಗಳ ಬೇಡಿಕೆಯನ್ನು ಸಾಬೀತುಪಡಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕ ಚಂದ್ರಶೇಖರ್‌ ಮತ್ತಿತರ ಗಣ್ಯರೂ ಆಗಮಿಸಿ ಸಾವಯವ ಉತ್ಪನ್ನಗಳನ್ನು ಖರೀದಿಸಿದರು. 

ಜಿಲ್ಲೆಯ ಐದು ಸಾವಯವ ಗ್ರಾಮಗಳಿಂದ ಸುಮಾರು 50 ಬಗೆಯ ಹಣ್ಣು, ತರಕಾರಿಗಳನ್ನು ರೈತರು ತಂದಿದ್ದರು. ಚಿಕ್ಕ ಮಗಳೂರಿನಿಂದ ಈರುಳ್ಳಿ, ಟೊಮೆಟೊ, ಕ್ಯಾರೆಟ್‌, ಬೀಟ್ರೂಟ್‌, ಅವರೆಕಾಯಿ, ಮೂಲಂಗಿ, ಸೌತೆ ಕಾಯಿ, ಮುಳ್ಳುಸೌತೆಯಂತಹ ಸುಮಾರು 15 ತರಹದ ಉತ್ಪನ್ನಗಳು ಬಂದಿದ್ದವು. ವಿವಿಧ ಬಗೆಯ ಅಕ್ಕಿ, ಸಿರಿಧಾನ್ಯ, ಅವಲಕ್ಕಿ, ಬೇಳೆಕಾಳು, ಸಾಂಬಾರು ಪದಾರ್ಥಗಳು, ಉಪ್ಪು, ಸಕ್ಕರೆ, ಬೆಲ್ಲ ಹೀಗೆ ನಾನಾ ವಿಧದ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಿದರು. ಸುಮಾರು ಶೇ. 90 ಉತ್ಪನ್ನಗಳು ಮಾರಾಟವಾಗಿವೆ. ಉಳಿದ ಸಾಮಗ್ರಿಗಳನ್ನು ಉಡುಪಿಯ ಗೋಮಾತಾ ಟ್ರೇಡರ್ನವರು ಖರೀದಿಸಲಿದ್ದಾರೆ ಎಂದು ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟದ ಸಿಇಒ ಮಂಜುನಾಥ್‌ “ಉದಯವಾಣಿ’ಗೆ ತಿಳಿಸಿದರು. 

ಜನರಿಗೆ ಸಾವಯವದ ಅರಿವು ಆಗಿದೆ
ಜನರಿಗೆ ಸಾವಯವ ಸಂತೆ ಮತ್ತೆ ಆರಂಭಿಸಿದ್ದು ಖುಷಿಯಾಗಿದೆ. ಹಿಂದಿನ ಗ್ರಾಹಕರಲ್ಲದೆ ಹೊಸ ಗ್ರಾಹಕರೂ ಬಂದು ಉತ್ಪನ್ನಗಳನ್ನು ಕೊಂಡೊಯ್ದಿದ್ದಾರೆ. “ಈ ಎರಡು ಮೂರು ತಿಂಗಳಲ್ಲಿ ಸಾವಯವ ಉತ್ಪನ್ನಗಳು ಲಭ್ಯವಾಗದೆ ಇದ್ದದ್ದು ನಮಗೆ ಅರಿವಾಗಿದೆ. ಈ ಅವಧಿಯಲ್ಲಿ ನಮ್ಮ ಆರೋಗ್ಯ ಮತ್ತೆ ಹದಗೆಟ್ಟು ಔಷಧಿಗಳಿಗೆ ಹೆಚ್ಚು ಖರ್ಚಾಯಿತು. ಇನ್ನು ಮುಂದೆ ಸಂತೆಯನ್ನು ನಿಲ್ಲಿಸಬೇಡಿ. ನಿರಂತರವಾಗಿ ಮುಂದುವರಿಸಿ’ ಎಂದು ವಿಶೇಷವಾಗಿ ಮಹಿಳೆಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ದೇವದಾಸ ಹೆಬ್ಟಾರ್‌,  ನಿರ್ದೇಶಕರು, ಉಡುಪಿ, ದ.ಕ., ಚಿಕ್ಕಮಗಳೂರು ಸಾವಯವ ಒಕ್ಕೂಟ. 

Advertisement

Udayavani is now on Telegram. Click here to join our channel and stay updated with the latest news.

Next