Advertisement

ಹೇಳಿದ್ದೊಂದು; ಸರಕಾರಕ್ಕೆ ಕೊಟ್ಟಿದ್ದೇ ಮತ್ತೂಂದು!

07:55 AM Aug 14, 2017 | |

ಮಹಾನಗರ: ಎತ್ತಿನಹೊಳೆ ಯೋಜನೆಗೆ ಕರಾವಳಿಯಾದ್ಯಂತ ವಿರೋಧ‌ ವ್ಯಕ್ತವಾಗುತ್ತಿರುವಾಗಲೇ, ಮತ್ತೆ ಆತಂಕ ವನ್ನು ಹೆಚ್ಚಿಸುವ ಹೊಸ ಯೋಜನೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್‌ಸಿ) ಸರಕಾರಕ್ಕೆ ಸಲ್ಲಿಸಿದೆ. ಕರಾವಳಿಯ ಜೀವನದಿ ನೇತ್ರಾವತಿಯ ಮೇಲೆಯೇ ಕಣ್ಣಿಟ್ಟು ಸಮುದ್ರಕ್ಕೆ ಸೇರುವ ನೀರನ್ನು ಬೆಂಗಳೂರಿಗೆ ಕುಡಿಯಲು ಬಳ ಸುವ ಪ್ರಸ್ತಾವನೆಯ ಸಾಧ್ಯತಾ ವರದಿ ಯನ್ನು ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್‌ಸಿ) ಸಿದ್ಧಪಡಿಸಿದೆ.

Advertisement

ಈ ವರದಿ ಸಲ್ಲಿಸಿದ ವಿಜ್ಞಾನಿ ಪ್ರೊ| ಟಿ.ಜಿ. ಸೀತಾರಾಮ್‌ ಅವರು ಈ ಹಿಂದೆ ಮಂಗಳೂರಿಗೆ ಆಗಮಿಸಿ, ಸಮುದ್ರದೊಳಗೆ ಅಣೆಕಟ್ಟು ಮಾದರಿ ಕಟ್ಟಿ ನೀರು ಸಂಗ್ರಹಿಸಿ ಜನರಿಗೆ ಸರಬರಾಜು ಮಾಡುವ ವಿನೂತನ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ವಿಚಿತ್ರವೆಂದರೆ, ಈ ವಿಜ್ಞಾನಿ ಮಂಗಳೂರಿನಲ್ಲಿ ಹೇಳಿದ್ದೇ ಒಂದಾದರೆ, ತಾವು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸಂಪೂರ್ಣ ವಿರುದ್ಧವಾದ ಮಾಹಿತಿಯನ್ನು ನೀಡಿರುವುದು ಆತಂಕವನ್ನು ಹೆಚ್ಚಿಸಿದೆ. 
 
ಇದೇ ವರ್ಷದ ಫೆ. 7ರಂದು ಮಂಗಳೂರಿಗೆ ಆಗಮಿಸಿದ್ದ ಪ್ರೊ| ಟಿ.ಜಿ. ಸೀತಾರಾಮ್‌ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಯೋಜನೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಜಾರಿಗೊಳಿಸಬಹುದು ಎಂದಿದ್ದರು. ಆದರೆ, ಇತ್ತೀಚೆಗಷ್ಟೇ ಆ. 7ರಂದು ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸಮುದ್ರದೊಳಗೆ ಅಣೆಕಟ್ಟು ಕಟ್ಟುವ ಬಗ್ಗೆ ಉಲ್ಲೇಖವಿಲ್ಲ.

ನೇತ್ರಾವತಿ ನದಿಯಿಂದ 120 ಟಿಎಂಸಿ ನೀರು ಲಭ್ಯವಾಗುತ್ತಿದೆ ಎಂದು ಮಂಗಳೂರಿನಲ್ಲಿ ಅಂದು ಹೇಳಿದ್ದ ಅವರು, ಮೊನ್ನೆ 350 ಟಿಎಂಸಿಯಷ್ಟು ಮಳೆ ನೀರು ಲಭ್ಯವಾಗುತ್ತದೆ ಎಂದಿದ್ದಾರೆ. ಈ ಮೂಲಕ ಮೊದಲು ಮಂಗಳೂರಿ ನಲ್ಲಿ ಹೇಳಿರುವುದಕ್ಕೂ, ಇತ್ತೀಚೆಗೆ ಬೆಂಗಳೂರಿನಲ್ಲಿ ಹೇಳಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಫೆ.7ರಂದು ಮಂಗಳೂರಿನಲ್ಲಿ ಪ್ರೊ| ಟಿ. ಜಿ. ಸೀತಾರಾಮ್‌ ಅವರು ಮಾತನಾಡುವಾಗ ಹೇಳಿದ್ದಿಷ್ಟು; ಒಟ್ಟು ಮಂಗಳೂರಿಗೆ 1 ಟಿಎಂಸಿ ನೀರು ಅಗತ್ಯವಿದೆ. ಆದರೆ ನೇತ್ರಾವತಿ, ಗುರುಪುರ ಹಾಗೂ ಕುಮಾರಧಾರ ನದಿಗಳಿಂದ ಮಳೆಗಾಲದ 4 ತಿಂಗಳಿನಲ್ಲಿ 120 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದರಲ್ಲಿ 20ರಿಂದ 25 ಟಿಎಂಸಿ ನೀರು ಸಂಗ್ರಹಿಸಿದರೂ ಕರಾವಳಿ ಸಹಿತ ಹೊರ ಭಾಗದ ಪ್ರದೇಶಗಳ ಜನರಿಗೆ ನೀರು ಸರಬರಾಜು ಮಾಡಬಹುದು. ಅದರಲ್ಲೂ 90 ಟಿಎಂಸಿ ನೀರು ಸಂಗ್ರಹಿಸಿದರೆ ಇಡೀ ರಾಜ್ಯಕ್ಕೆ ಇಲ್ಲಿಂದಲೇ ನೀರು ಪೂರೈಸಬಹುದು. ನೆದೆರ್ಲಾಂಡ್‌, ಸೌತ್‌ ಕೊರಿಯಾ, ಹಾಂಕಾಂಗ್‌, ಚೀನಾ, ಸಿಂಗಪುರ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂತಹ ಪರಿಕಲ್ಪನೆ ರಾಜ್ಯದಲ್ಲೂ ಸುಲಭವಾಗಿ ಜಾರಿಗೊಳಿಸಬಹುದು. 

ಯೋಜನೆಯ ರೂಪ
ಅಂದು ಅವರು ಹೇಳುವ ಪ್ರಕಾರ, ನೇತ್ರಾವತಿ ಸೇರುವ ಜಾಗದಿಂದ ಮುಂಭಾಗದ ಸಮುದ್ರದಲ್ಲಿ ಸುಮಾರು 14 ಕಿ.ಮೀ ಉದ್ದ ಹಾಗೂ ಅಷ್ಟೇ ಕಿ.ಮೀ ಅಗಲದ (ಅದರ ಅರ್ಧದಷ್ಟು) ಅಣೆಕಟ್ಟು ಮಾದರಿಯ ತಡೆಗೋಡೆ ನಿರ್ಮಿಸ‌ಲಾಗುತ್ತದೆ. ಆ ಭಾಗದ ಉಪ್ಪು ನೀರನ್ನು ಸಮುದ್ರಕ್ಕೆ ಹೊರಚೆಲ್ಲಿ, ನದಿಯಿಂದ ಸಹಜವಾಗಿ ಹರಿದು ಸಮುದ್ರ ಸೇರುವ ಸಿಹಿ ನೀರನ್ನು ಸಂಗ್ರಹಿಸುವುದು. ಹೀಗೆ ಸಂಗ್ರಹಿಸಿದ್ದನ್ನು ನೀರಾವರಿ, ಕೈಗಾರಿಕೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸುವುದು. ಸಮುದ್ರದೊಳಗೆ ಈ ಯೋಜನೆ ಬರುವುದರಿಂದ ಇಲ್ಲಿ ಸಿಹಿ ನೀರಿನ ಮೀನುಗಾರಿಕೆಗೆ ಅವಕಾಶವಿರಲಿದೆ. ಗುಣಮಟ್ಟದ ಮರಳು ಲಭ್ಯವಾಗಲಿದೆ. ಜಲಾಶಯದ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸಬಹುದು. ಜತೆಗೆ ಜಲಾಶಯಕ್ಕೆ ಬಡಿಯುವ ಸಮುದ್ರದ ಅಲೆಗಳಿಂದ ಜಲವಿದ್ಯುತ್‌ ಕೂಡ ಉತ್ಪಾದಿಸಬಹುದು. ಲಕ್ಷಾಂತರ ಕೋಟಿ ರೂ.ಖರ್ಚು ಮಾಡಿ ಬೇರೆ ಬೇರೆ ಯೋಜನೆ ಸಿದ್ಧಪಡಿಸುವ ಬದಲು ಈ ಯೋಜನೆಯನ್ನು ಕೇವಲ 2,200 ಕೋ.ರೂ.ಗಳಲ್ಲಿ ರೂಪಿಸಬಹುದು ಎಂದಿದ್ದರು ಅವರು.

ಯೋಜನೆಯ ಮೂಲಕ ಹಣ ಮಾಡುವ ಯೋಚನೆ..! 
ಎಸಿ ರೂಮ್‌ನಲ್ಲಿ ಕುಳಿತು, ಯಾವುದೇ ಅನುಭವಗಳಿಲ್ಲದೇ ಕೇವಲ ಯೋಜನೆಗಳ ಮೂಲಕ ಹಣ ಮಾಡುವ ಯೋಚನೆಯಲ್ಲಿಯೇ ಮುಳುಗಿ ಹೋದ ಕೆಲವರಿಂದಾಗಿ ಇಂದು ನಮ್ಮ ಜೀವ ನದಿ ಬರಡಾಗುತ್ತಿದೆ. ಎತ್ತಿನಹೊಳೆಯಲ್ಲಿ ನೀರಿಲ್ಲ ಎಂದು ನಾವೆಲ್ಲ ಗಟ್ಟಿಯಾಗಿ ಹೇಳಿದರೂ ಕೇಳದ ಆಡಳಿತ ವ್ಯವಸ್ಥೆಗೆ ಈಗ ನೀರಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ನೇತ್ರಾವತಿ ಸಮುದ್ರ ಸೇರುವ ಜಾಗಕ್ಕೆ ಆಘಾತ ನೀಡಲು ಹೊಸ ಪ್ರಸ್ತಾವನೆಯನ್ನು ಸ್ವೀಕರಿಸಿದೆ. ಕರಾವಳಿಯ ಬದುಕಿನ ಮೇಲೆ ಇದೀಗ ನೇರ ಪ್ರಹಾರಕ್ಕೆ ವೇದಿಕೆ ಸಿದ್ದವಾಗುತ್ತಿದ್ದು, ಇದನ್ನು ವಿರೋಧಿಸಬೇಕಿದೆ.
– ದಿನೇಶ್‌ ಹೊಳ್ಳ, ಸಹ್ಯಾದ್ರಿ ಸಂಚಯ ಪ್ರಮುಖರು

Advertisement

ಗೊಂದಲ ಹಾಗೂ ವೈಜ್ಞಾನಿಕ ರಹಿತ ಯೋಜನೆ
ಪ್ರೊ| ಟಿ.ಜಿ. ಸೀತಾರಾಮ್‌ ಅವರು ಮಂಗಳೂರಿನಲ್ಲಿ ಮಾತನಾಡಿದಾಗಲೇ, ಅಲ್ಲಿ ಉಪಸ್ಥಿತರಿದ್ದ ಎನ್‌ಐಟಿಕೆ ನಿವೃತ್ತ ಪ್ರೊಫೆಸರ್‌ ಪ್ರೊ| ಎಸ್‌.ಜಿ.ಮಯ್ಯ ಅವರು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ‘ಇದು ವೈಜ್ಞಾನಿಕವಾಗಿ ಸರಿಹೊಂದುವ ಯೋಜನೆಯಲ್ಲ. ಇದರಲ್ಲಿ ಹಲವು ಗೊಂದಲಗಳು ಹಾಗೂ ಅಪಾಯಗಳಿವೆ. ಇಲ್ಲಿನ ಭೌಗೋಳಿಕ ಅಂಶಗಳು ಈ ಪ್ರಸ್ತಾವಕ್ಕೆ ತಕ್ಕುದಲ್ಲ. ಹೊರದೇಶದಲ್ಲಿ ಇದು ಸಾಧ್ಯವಾದರೂ, ಇದು ಇಲ್ಲಿಗೆ ಒಪ್ಪುವುದಿಲ್ಲ. ಇಲ್ಲಿನ ಮಣ್ಣಿನ ಸವೆತ ಹಾಗೂ ಉಪ್ಪು ನೀರಿನ ಅಂಶಗಳ ಬಗ್ಗೆ ಗಹನವಾದ ಅಧ್ಯಯನ ಮಾಡಬೇಕಿದೆ. ಇಲ್ಲಿನ ಯಾವುದೇ ಅಂಶಗಳನ್ನು ಇಲ್ಲಿದ್ದುಕೊಂಡು ಅಧ್ಯಯನ ಮಾಡದೆ, ಕೇವಲ ದೂರದೂರಿನಲ್ಲಿ ಕುಳಿತು ಹೊಸ ಹೊಸ ಸಂಶೋಧನೆ ಮಾಡುವವರೇ ಅಧಿಕವಿದ್ದಾರೆ ಎಂದು ಅವರು ಹೇಳಿದ್ದರು.

ನೀರಿಲ್ಲ ಎಂದ ವಿಜ್ಞಾನಿ..! 
ಎತ್ತಿನಹೊಳೆಯಲ್ಲಿ ಸರಕಾರ ಭಾವಿಸಿದಷ್ಟು ನೀರು ಲಭ್ಯವಿಲ್ಲ. ಅದರ ವೆಚ್ಚ ಕೂಡ ಇದರಿಂದ ದುಪ್ಪಟ್ಟಾಗಲಿದೆ. ಹೀಗಾಗಿ ಈ ಯೋಜನೆಯಿಂದ ಯಾವುದೇ ಲಾಭ‌ವಾಗಲಾರದು. ಇದಕ್ಕಾಗಿ ನೇರವಾಗಿ ಸಮುದ್ರ ಸೇರುವ ನೀರನ್ನೇ ಬಳಸಿದರೆ ಕಡಿಮೆ ಹಣದಲ್ಲಿ ಅತ್ಯಂತ ಯಶಸ್ವಿ ಹಾಗೂ ರಾಜ್ಯದ ಎಲ್ಲಾ ಜನರಿಗೂ ಲಭ್ಯವಾಗುವ ನೀರು ಸಿಗಲಿದೆ ಎಂದಿದ್ದವರು ಪ್ರೊ| ಟಿ.ಜಿ. ಸೀತಾರಾಮ್‌.   

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next