ವಿಜಯಪುರ: ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಕೆಲವರು ಹಗಲುಗನಸು ಕಾಣುತ್ತಿದ್ದಾರೆ. ನನಸಾಗದ ಹಗಲು ಕಾಣುವವರಿಗೆ ಬೇಡವೆನ್ನಲಾದೀತೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಬಿಜೆಪಿ ನಾಯಕರ ಹೇಳಿಕೆಗೆ ಕುಟುಕಿದ್ದಾರೆ.
ಮಂಗಳವಾರ ನಗರದಲ್ಲಿರುವ ಐತಿಹಾಸಿಕ ಹಾಸಿಂಪೀರ ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ನಡೆಸಿರುವ ಪ್ರಯತ್ನದ ಫಲವಾಗಿ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಾ.ಪರಮೇಶ್ವರ, ಕೆಲವರು ಹಗಲು ಕನಸು ಕಾಣುತ್ತಿರುತ್ತಾರೆ. ಡೇ ಡ್ರೀಮ್ ಕಾಣುವವರಿಗೆ ಬೇಡ ಎನ್ನಲಾಗದು.
ಕನಸಾಗಿಯೇ ಉಳಿಯುವ ಹಗಲುಗನಸು ಕಾಣುವವರನ್ನು ಅಂಥ ಕನಸು ಕಾಣಲಿ ಎಂದು ಬಿಟ್ಟುಬಿಡಬೇಕು ಎಂದ ಅವರು, ನಾವು ಜೋಡೆತ್ತುಗಳು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷದ ನಾಯಕ ಆರ್. ಆಶೋಕ ಹೇಳಿಕೆಗೆ ಬಹಳ ಸಂತೋಷ ಎಂದಷ್ಟೇ ಪರಮೇಶ್ವರ ನಗೆ ಬೀರಿದರು.
ಹೂಮಳೆ ಸ್ವಾಗತ: ಡಾ.ಜಿ. ಪರಮೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದಾಗ ಹೂಮಳೆ ಗರೆದು ಅದ್ದೂರಿ ಸ್ವಾಗತ ಕೋರಿದರು. ಮಂಗಳವಾರ ಬೆಳಿಗ್ಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ನಗರದಲ್ಲಿನ ಪಕ್ಷದ ಕಛೇರಿ ಭೇಟಿ ನೀಡಿದ್ದರು. ಈ ಹಂತದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಚುವರಾದ ಡಾ.ಜಿ.ಪರಮೇಶ್ವರ, ಜೊತೆಗಿದ್ದ ಜವಳಿ ಸಚಿವ ಶಿವಾನಂದ ಪಾಟೀಲ ಅವರಿಗೆ ಭಾರಿ ಗಾತ್ರದ ಹೂಮಾಲೆ ಹಾಕಲು ಮುಂದಾದಾಗ, ಸಚಿವರು ತಡೆದರು. ಆದರೆ ಸಚಿವರ ಆಕ್ಷೇಪಣೆಗೆ ಮಣಿಯದ ಕಾಂಗ್ರೆಸ್ ಕಾರ್ಯಕರ್ತರು, ಹೂಮಳೆ ಗರೆದು ಜೈಕಾರ ಕೂಗುತ್ತಲೇ ಇದ್ದರು.
ಇದರಿಂದಾಗಿ ಸಚಿವರಾದ ಡಾ.ಪರಮೇಶ್ವರ, ಶಿವಾನಂದ ಪಾಟೀಲ ಕೆಲಕಾಲ ಕಾರಿನಿಂದ ಇಳಿಯದೇ ಕಾರಿನ ಒಳಗೇ ಕುಳಿತಿದ್ದರು. ಬಳಿಕ ಕಾಂಗ್ರೆಸ್ ಕಚೇರಿಗೆ ಬಂದ ಸಚಿವ ದ್ವಯರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.