Advertisement
ವಿಶೇಷವೆಂದರೆ ಸ್ವತಃ ಗೃಹ ಸಚಿವರೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ತಮ್ಮ ಕಾರಿನ ಮೇಲೆ “ಲವ್ ಯು ಲೈಫ್’ ಮತ್ತು “ಸೇ ನೋ ಡ್ರಗ್ಸ್’ ಎಂಬ ಘೋಷವಾಕ್ಯ ಇರುವ ಸ್ಟಿಕ್ಕರ್ ಹಾಕಿಕೊಂಡಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಯ ಹೊಯ್ಸಳ ಸೇರಿ ಎಲ್ಲ ವಾಹನಗಳ ಮೇಲೂ ಈ ಸ್ಟಿಕ್ಕರ್ ಅಂಟಿಸಿ ಅಭಿಯಾನ ಆರಂಭಿಸಲಾಗಿದೆ.
Related Articles
Advertisement
ಕೈ ಬ್ಯಾಂಡ್‌ಗಳು: ಶಾಲಾ-ಕಾಲೇಜುಗಳಲ್ಲಿ ಅಭಿಯಾನ ಆರಂಭಿಸಿರುವ ಪೊಲೀಸರು ಎಲ್ಲ ವಿದ್ಯಾರ್ಥಿಗಳಿಗೆ ಈ ಹ್ಯಾಂಡ್ ಬ್ಯಾಂಡ್‌ಗಳನ್ನು ವಿತರಿಸಲಾಗುತ್ತಿದೆ. ಈ ಬ್ಯಾಂಡ್‌ಗಳಲ್ಲಿ ಲವ್ ಯುವರ್ ಲೈಫ್, ಸೇ ನೋ ಡ್ರಗ್ಸ್ ಎಂಬ ಘೋಷವಾಕ್ಯಗಳೊಂದಿಗೆ ಟೋಲ್ ಫ್ರೀ ನಂಬರ್ 1908 ಕೂಡ ಇರುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಲಾಗುವುದು.
ರೇಡಿಯೋ ಜಿಂಗಲ್ಸ್: ನಗರದ 10 ಎಫ್ಎಂ ರೇಡಿಯೋಗಳಲ್ಲಿ ಮಾದಕ ವಸ್ತು ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅಭಿಯಾನದ ಆಡಿಯೋ ತುಣುಕುಗಳು ಪ್ರಸಾರ ಮಾಡಲಾಗುತ್ತದೆ.
ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ: ನಗರ ಪೊಲೀಸ್ ಆಯುಕ್ತರೇ ಖುದ್ದು ನಗರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ನಡೆಯುವ ಅಭಿಯಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಾತ್ಯಕ್ಷಿಕೆ ಮೂಲಕ ಮಾದಕ ವಸ್ತು ಸೇವನೆಯಿಂದ ಏನೇಲ್ಲಾ ಅನಾಹುತ ಸಂಭವಿಸುತ್ತವೆ. ಆರೋಗ್ಯದ ಮೇಲಿನ ಪರಿಣಾಮಗಳು ಹಾಗೂ ತಪ್ಪು ಮಾಡಿದರೆ ಎಷ್ಟು ಪ್ರಮಾಣದಲ್ಲಿ ಶಿಕ್ಷೆ ಹಾಗೂ ದಂಡದ ಮೊತ್ತ ಎಷ್ಟು ಎಂಬುದನ್ನು ತಿಳಿಸುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.
ಪಬ್ ಮತ್ತು ಬಾರ್‌ಗಳಲ್ಲಿ ನೋಟಿಸ್: ನಗರದಲ್ಲಿರುವ ಪಬ್ ಮತ್ತು ಬಾರ್‌ಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಪ್ರಮಾಣ ಹೆಚ್ಚಾಗಿದೆ ಎಂಬ ಮಾಹಿತಿಯಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಬ್ ಮತ್ತು ಬಾರ್‌ಗಳಲ್ಲಿ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಭಿತ್ತಿಪತ್ರ ಅಂಟಿಸಲಾಗುವುದು. ಮಾದಕ ವಸ್ತು ಮಾರಾಟ ಮಾಡಿದರೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 2 ಲಕ್ಷ ರೂ. ದಂಡ. ಸೇವಿಸಿದರೆ 1 ವರ್ಷ ಶಿಕ್ಷೆ, 20 ಸಾವಿರ ದಂಡ ಎಂಬ ಮಾಹಿತಿಯನ್ನೂ ಪ್ರಕಟಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸಾರ್ವಜನಿಕ ಜಾಗೃತಿ: ಸ್ಟಿಕ್ಕರ್ ಜೊತೆಗೆ ರೇಡಿಯೋ ಜಿಂಗಲ್ಸ್, ಕಿರುಚಿತ್ರಗಳು, ಹಾಡುಗಳು, ಬೀದಿ ನಾಟಕಗಳು, ಕೈ ಬ್ಯಾಂಡ್‌ಗಳು. ಜತೆಗೆ ಇದಕ್ಕಾಗಿಯೇ ವಿಶೇಷ ವಾಹನ ಕೂಡ ಸಿದ್ಧವಾಗಿದ್ದು, ನಗರದೆಲ್ಲೆಡೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲಾಗುವುದು. ಒಂದೂವರೆ ನಿಮಿಷಗಳ ಕಿರುಚಿತ್ರಗಳನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರಸಾರ ಮಾಡುವಂತೆ ಮಾಲ್‌ಗಳ ಮಾಲೀಕರಿಗೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
* ಮೋಹನ್ ಭದ್ರಾವತಿ