ಕುಳಗೇರಿ ಕ್ರಾಸ್ ( ಬಾಗಲಕೋಟೆ) : ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಂತೆ ಸ್ತ್ರೀ ಯರು ಕೂಡ ಶಿಕ್ಷಣವನ್ನು ಪಡೆಯಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ತಮಗೆ ಬಂಧ ಕಷ್ಟಗಳನ್ನು ಲೆಕ್ಕಿಸದೆ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ದಾರಿಯನ್ನು ಹಾಕಿ ಕೊಟ್ಟ ಸಾವಿತ್ರಿ ಭಾಯಿ ಪುಲೆ ಭಾರತ ದೇಶದ ಮೊದಲ ಶಿಕ್ಷಕಿ. ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳುವಳಿ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿ ಭಾಯಿ ಪುಲೆ ಎಂದು ಬಾಜಪ ಯುವ ಮುಖಂಡ ಉಮೇಶಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ಸುಕ್ಷೇತ್ರ ಬೈರನಹಟಕಟಿ ಗ್ರಾಮದ ದೊರೆಸ್ವಾಮಿ ವಿರಕ್ತ ಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಥಿಕ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿ ಭಾಯಿ ಫುಲೆಯವರ 191ನೇ ಜಯಂತ್ಯೊತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜದ ಕನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ ಜಾತಿ ಪದ್ದತಿಯ ವಿರುದ್ಧ ಹೋರಾಡಿದ ಸಾವಿತ್ರಿ ಭಾಯಿ ಫುಲೆ ಮಹಿಳೆಯರಿಗೋಸ್ಕರ ಸುಮಾರು 14 ಶಾಲೆಗಳನ್ನು ಸ್ಥಾಪಿಸಿ ಆ ಮೂಲಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ ಅಕ್ಷರದವ್ವ ಸಾವಿತ್ರಿ ಭಾಯಿ ಫುಲೆಯವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ಶ್ರೀಮಠದ ಪೂಜ್ಯ ಶಾಂತಲಿಂಗ ಸ್ವಾಮಿಜಿ ಸಾವಿತ್ರಿ ಭಾಯಿ ಫುಲೆ ಕೇವಲ ಒಬ್ಬ ಶಿಕ್ಷಕಿಯಾಗಿರದೆ ಸಾಮಾಜಿಕ ಕಳಕಳಿಯನ್ನುಳ್ಳ ಹಲವಾಕೃತಿಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಾಹಿತ್ಯ ಕ್ಷೇತ್ರದಲ್ಲಿಯು ಚಿರಸ್ಥಾಯಿಯಾಗಿ ಉಳಿದವರು. ಎರಡು ಶತಮಾನದ ಹಿಂದೆಯೇ ಅಂದಿನ ಸ್ಥಾಪಿತ ಸಮುದಾಯದ ಕಟ್ಟುಪಾಡುಗಳನ್ನು ಮುರಿದು ತಳ ಸಮುದಾಯದವರಿಗೆ ಹಾಗೂ ಮಹಿಳೆಯರಿಗೆ ಮುಕ್ತವಾಗಿ ಶಿಕ್ಷಣ ನೀಡಿದ ಅಕ್ಷರದಾತೆ ಎಂದು ಹೇಳಿದರು.
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂದು ದೇಶದ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶ್ರಮಿಸಿ, ಹೆಣ್ಣುಮಕ್ಕಳ ಪಾಲಿಗೆ ಅಕ್ಷರದ ಬೆಳಕು ಕೊಟ್ಟ ಶ್ರೇಷ್ಠ ಚಿಂತಕಿ ಸಾವಿತ್ರಿ ಭಾಯಿ ಫುಲೆ ಅವರು ಸಮಾಜಕ್ಕೆ ಅಕ್ಷರವನ್ನಷ್ಟೇ ಕಲಿಸದೆ ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡುವ ಮೂಲಕ ಮಹಿಳೆಯರ ಧ್ವನಿಯಾಗಿದ್ದರು ಎಂದರು.
ಧಾರವಾಡ ಹಾಲು ಉತ್ಪಾದಕ ಮಹಾಮಂಡಳಿಯ ನಿರ್ದೇಶಕ ಹನುಮಂತಗೌಡ ಹಿರೇಗೌಡ್ರ ಮಾತನಾಡಿದರು. ಲಕ್ಷ್ಮವ್ವ ಕಟ್ಟಿಮನಿ, ನಾಗಪ್ಪ ಬೆನ್ನೂರ, ಬಿ ಬಿ ಐನಾಪೂರ, ಚಂದ್ರು ದಂಡೀನ, ಶಿಕ್ಷಕಿ ಎ ಎನ್ ಸಿಂದಗಿ ಉಪಸ್ಥಿತರಿದ್ದರು.
ಧೀಲಿಪ್ ನದಾಫ್ ಸ್ವಾಗತಿಸಿದರು, ಪ್ರೋ ಆರ್ ಕೆ ಐನಾಪೂರ ನಿರೂಪಿಸಿದರು, ಮಹಾಂತೇಶ ಹಿರೇಮಠ ವಂದಿಸಿದರು.