ಮಹದೇವಪುರ: ದಲಿತರೂ ಶಿಕ್ಷಣ ಪಡೆಯುವಂತೆ ಮಾಡಿದ ಮಹಾಚೇತನ ಸಾವಿತ್ರಿಬಾಯಿ ಫುಲೆ ಎಂದು ಪೆರಿಯಾರ್ ವಾದಿಯಾದ ಕಲೈಸೆಲ್ವಿ ತಿಳಿಸಿದರು. ಕ್ಷೇತ್ರದ ಬಿದರಹಳ್ಳಿಯಲ್ಲಿ ಕರ್ನಾಟಕ ದಲಿತ ಮಹಿಳ ಒಕ್ಕೂಟದ ವತಿಯಿಂದ ಸಾವಿತ್ರಿ ಬಾಯಿ ಪುಲೆಯವರ 186ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಜಾಗೃತಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಅತ್ಯುನ್ನತ ನಾಗರಿಕತೆಗಳಲ್ಲಿ ಒಂದಾದ ಸಿಂಧು ಮತ್ತು ಹರಪ್ಪ ನಾಗರಿಕತೆ ಭಾರತದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ್ದ ಜನಾಂಗದವರದ್ದಾಗಿತ್ತು.
ಈ ನಾಗರಿಕತೆಯಲ್ಲಿ ಹೆಣ್ಣಿಗೆ ಗೌರವವಿತ್ತು, ಸಾಮಾಜಿಕ ನ್ಯಾಯವೂ ಇತ್ತು. ಆದರೆ, ಬೇರೆಡೆಯಿಂದ ಬಂದ ಆರ್ಯನ್ನರಾದ ಬ್ರಾಹ್ಮಣರು ಮತ್ತು ಮೇಲ್ವವರ್ಗವೆಂದು ಕರೆದುಕೊಳ್ಳುವ ಜನಾಂಗದವರು, ಪ್ರಪಂಚದ ಪ್ರಾಚೀನ ನಾಗರಿಕ ಜೀವನದ ಮೇಲೆ ದಾಳಿ ಮಾಡಿ ಕೆಳ ವರ್ಗವೆಂಬ ಭೇದ ಸೃಷ್ಟಿಸಿದ್ದಾರೆ. ಮನುಸ್ಮತಿ ಎಂಬ ಗ್ರಂಥವನ್ನು ಸರ್ವೋತ್ಛವೆಂದು ದಲಿತರ ಮೇಲೆ ಹೇರಿದ ಪೇಶ್ವೆಗಳು ತಮ್ಮದೇ ಆದ ದಬ್ಟಾಳಿಕೆಯ ನಿಯಮಗಳಿಂದ ಶೋಷಣೆಯ ಮೆರೆದಿದ್ದಾರೆ ಎಂದರು.
ದಲಿತರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿ, ಹಿಂದುಳಿಯಲು ನೇರ ಕಾರಣರಾಗಿರುವ ಮೇಲ್ವರ್ಗದ ನೀತಿಗೆ ಎದೆಯೊಡ್ಡಿ ನಿಂತು ಸವಾಲೆಸೆದ ವೀರ ಮಹಿಳೆ ಸಾವಿತ್ರಿಬಾಯಿ ಫುಲೆ. ದಲಿತ ಕುಟುಂಬವೊಂದರಲ್ಲಿ ಜನಿಸಿದ ಅವರು ಬ್ರಾಹ್ಮಣರ ಧಮನ ನೀತಿಗಳನ್ನು ವಿರೋಧಿಸುತ್ತ, ದಲಿತ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮತ್ತು ಸ್ವಾಭಿಮಾನದಿಂದ ಜೀವಿಸುವಂತೆ ಮಾಡಿದ ಮಹಾ ಚೇತನವೆಂದು ಬಣ್ಣಿಸಿದರು.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲ್ವಿàರ್ ಮಾತನಾಡಿ, ಅಂಬೇಡ್ಕರರ ತಂದೆಯೂ ಸಹ ಸಾವಿತ್ರಿಬಾಯಿ ಫುಲೆ ನಿರ್ಮಿಸಿದ್ದ ಶಾಲೆಯಲ್ಲೇ ಶಿಕ್ಷಣ ಪಡೆದರು. ಈ ಮೂಲಕ ಸಾವಿತ್ರಿ ಬಾಫುಲೆ ಅಂಬೇಡ್ಕರರಂತಹ ಮಹಾನ್ ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸಲು ಪರೋಕ್ಷವಾಗಿ ಕಾರಣರಾದರು ಎಂದು ತಿಳಿಸಿದರು.
ಮಹಿಳಾ ಒಕ್ಕೂಟದ ಪ್ರಮುಖರಾದ ಅನಿತಾ, ಚನ್ನಸಂದ್ರ ಶೋಭಾ, ವಿಜಯಾಕುಮರಿ, ಎಂ. ಗೋವಿಂದರಾಜು ಸೇರಿದಂತೆ ಅನೇಕರಿದ್ದರು.