ಮೈಸೂರು: ಸವಿತಾ ಸಮಾಜದವರು ತಮ್ಮ ಜೀವನ ಚರಿತ್ರೆ ಅರಿಯದೆ ಕುಬ್ಜರಾಗಿ ಇಂದಿಗೂ ಸಹ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಸಾಗಲಾರದಷ್ಟು ನಿರ್ಗತಿಕರಾಗಿದ್ದೇವೆ ಎಂದು ಚಿಂತಕ ಎಸ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ತಿಳಿದವನು ಮಾತ್ರ ಇತಿಹಾಸ ಸೃಷ್ಟಿಸಬಲ್ಲ. ಸಮಾಜದ ಬಗ್ಗೆ ಅರಿವೇ ಇಲ್ಲದೆ ಸಮಾಜದ ಪರಿವರ್ತನೆ ಹೇಗೆ ಸಾಧ್ಯ. ಹೀಗಾಗಿ ಮೊದಲು ನಮ್ಮ ಸಮಾಜದ ಮೂಲ ತತ್ವವನ್ನು ಮೊದಲು ತಿಳಿದುಕೊಳ್ಳಬೇಕು. ಕ್ಷೌರಿಕ ಸಮಾಜದ ಮಹಾ ಪದ್ಮಾನಂದ ಎಂಬ ದೊರೆ ಭಾರತದ ಮೊಟ್ಟ ಮೊದಲ ಚಕ್ರವರ್ತಿ.
ಅತ್ಯಂತ ಬಲ ಸೈನ್ಯ ಹೊಂದಿದವರಿಗೆ ನಂದಿ ಎಂದು ಕರೆಯುತ್ತಿದ್ದರು. ಕ್ಷೌರಿಕ ಸಮಾಜದ ಅತೀ ದೊಡ್ಡ ಕ್ಷತ್ರಿಯ ರಾಜ ಅಶೋಕ ಚಕ್ರವರ್ತಿ, ಇವತ್ತು ಸಹ ತ್ರಿವರ್ಣ ಧ್ವಜದ ಮಧ್ಯದಲ್ಲಿ ಇರುವ ಅಶೋಕ ಚಕ್ರ ನಮ್ಮದು. ನಮ್ಮಲ್ಲಿ ಬಲ, ತಾಕತ್ತು, ನುಡಿಯುವ ಶಕ್ತಿ, ಒಗ್ಗಟ್ಟು ನಮ್ಮ ಸಮಾಜದ ಜನರಲ್ಲಿ ಇಲ್ಲ ಎಂದರು.
ವೃತ್ತಿಗೆ ಸಂಭಾವನೆ ತೆಗೆದುಕೊಳ್ಳಬೇಕೆ ವಿನಃ ಭಿಕ್ಷೆ ಬೇಡಬಾರದು, ನಾವು ನೀಡುವವರಾಗಬೇಕು. ಹರಿಯುವ ನದಿ ಒಟ್ಟಾಗಿ ಹರಿಯುವಾಗ ಅದಕ್ಕೆ ವೇಗ, ಶಕ್ತಿ ಬರುತ್ತದೆ. ಹಾಗೆಯೇ ನಮ್ಮ ಸಮಾಜದವರು ನದಿಯ ಹಾಗೆ ಹರಿದರೆ ಸಮಾಜದಲ್ಲಿ ಅದ್ಭುತ ಶಕ್ತಿಗಳಾಗುತ್ತೇವೆ. ಶಿವನ ಬಲಗಣ್ಣಿನಿಂದ ಸೂರ್ಯತೇಜನಾದ ಮಗುವೇ ಸವಿತಾ ಮಹರ್ಷಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಸವಿತಾ ಮಹರ್ಷಿ ಸಮಿತಿ ಜಿಲ್ಲಾ ಅಧ್ಯಕ್ಷ ಎನ್.ಆರ್.ನಾಗೇಶ್, ಪುರಸಭೆ ಸದಸ್ಯೆ ಸೌಮ್ಯಾರಾಣಿ, ಸವಿತಾ ಸಮಾಜ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಶಿವಣ್ಣ, ಜೆ.ಇ ನಿವೃತ್ತ ಅಧಿಕಾರಿ ಶಿವರಾಜು, ಸವಿತಾ ಸಮಾಜ ಯುವಜನ ಸಂಘದ ಅಧ್ಯಕ್ಷ ಎಸ್.ಕುಮಾರ್ ಹಾಗೂ ಸವಿತಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.