Advertisement
ಈಗ ಕಾಲ ಹೇಗೆ ಬದಲಾಗಿದೆ ಎಂದರೆ ಹಳೆಯ ಕಾಲದ ಎಷ್ಟೋ ಆರ್ಥಿಕ ವಿಷಯಗಳು ಬದಲಾವಣೆಯ ಹೊಡೆತದಿಂದ ಈಗ ಸಮರ್ಪಕ ಆಗದೇ ಇರಬಹುದು. ಬಾಡಿಗೆಗೆ ಮನೆ ಕಟ್ಟಿಸಿ ಕೊಟ್ಟರಾಯಿತು ಬಿಡಿ ಎನ್ನುವ ಮಾತು ಈಗ ಸೂಕ್ತವಾದದ್ದಲ್ಲ. ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆ ಬಿಡು ಎನ್ನುವ ನಿಶ್ಚಿಂತೆ ಈಗ ಹೆಚ್ಚಿನವರಿಗೆ ಇಲ್ಲ. ಮಕ್ಕಳ ಖರ್ಚುಗಳನ್ನು ಅವರು ನಿಭಾಯಿಸಿಕೊಳ್ಳುವುದೇ ಕಷ್ಟವಾಗಿರುವಾಗ ಅವರು ಇಳಿವಯಸ್ಸಿನ ತಂದೆ ತಾಯಿಯರನ್ನು ಆರೈಕೆ ಮಾಡುವ, ನೋಡಿಕೊಳ್ಳುವ ಜವಾಬ್ದಾರಿ ಹೊರುವುದು ವಿರಳ. ಬ್ಯಾಂಕಿನಿಂದ ಬದುಕುವ ಬಡ್ಡಿ ಹಣದಲ್ಲಿ ಬದುಕ ಬಹುದಾ? ಎಂದರೆ, ಅದು ಹೇಗೆ ಸಾಕಾಗತ್ತೆ? ಮತ್ತೆ ಮರು ಪ್ರಶ್ನೆ ಏಳುತ್ತದೆ. ಅಂದರೆ ಆಯಾ ಕಾಲದ ಅಗತ್ಯಕ್ಕೆ ಅನುಗುಣವಾಗಿ ಹಣಕಾಸು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ಉಳಿತಾಯ ಮಾತ್ರ ಎಲ್ಲ ಕಾಲಕ್ಕೂ ಅನ್ವಯಿಸುವ ಪರಮ ಸತ್ಯ. ಮೇಲ್ನೋಟಕ್ಕೆ ಉಳಿತಾಯ ಎಂದರೆ ದುಡ್ಡು ಉಳಿಸುವುದು ಎನ್ನಿಸುತ್ತದೆ. ನಿಜ ಏನೆಂದರೆ, ಉಳಿತಾಯ ಎನ್ನುವುದು ಒಂದು ಮನೋಭಾವನೆ. ಅಗತ್ಯ, ಅನಗತ್ಯ ಖರ್ಚುಗಳ ಬಗೆಗೆ ಇರುವ ಸ್ಪಷ್ಟ ಅರಿವು. ಈ ಅರಿವು ಮೂಡಲು ಮನಸ್ಸು ಹದಗೊಳ್ಳಬೇಕು. ಹದಗೊಳ್ಳುವುದು ಹೇಗೆ? ವಿವೇಕದಿಂದಲೇ ಹೊರತು ಬೇರೆ ದಾರಿ ಇಲ್ಲ. ಹಣಕಾಸಿನ ನಿರ್ವಹಣೆಯ ವಿಷಯದಲ್ಲಿಯೂ ಮನೆಯೇ ಮೊದಲ ಪಾಠ ಶಾಲೆ. ಎಷ್ಟು ಚಿಕ್ಕ ಸಂಬಳ, ಒಬ್ಬರ ದುಡಿಮೆ, ಸಣ್ಣ ವ್ಯವಹಾರ ಇದ್ದಾಗಲೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಎಷ್ಟೋ ಉದಾಹರಣೆಗಳಿವೆ. ಹೀಗೆ ಬರೆಯುವಾಗ ನೆನಪಾದವಳೇ ಪುಷ್ಟಲತಾ. ಹುಬ್ಬಳ್ಳಿಯಿಂದ ಬರುವಾಗ ಟ್ರೇನ್‌ನಲ್ಲಿ ಆಕೆ ಸಹ ಪ್ರಯಾಣಿಕಳು. ಸಹಜವಾಗಿ ನಮ್ಮ ಮಾತು ಕೆಲಸ, ಮನೆ, ಮಕ್ಕಳು ಎಂದು ಹೊರಳಿತು. ಪುಷ್ಪಲತಾ ಚನ್ನಪಟ್ಟಣದಲ್ಲಿ ಚಿಕ್ಕ ಫ್ಯಾನ್ಸಿ ಸ್ಟೋರ್ ಇಟ್ಟುಕೊಂಡಿದ್ದಾಳೆ. ಒಬ್ಬನೇ ಮಗ. ಈಗ ಮೆಡಿಕಲ್ ಓದುತ್ತಿದ್ದಾನೆ. ಅವನಿಗೆ ಸಿಕ್ಕಿದ್ದು ಸರ್ಕಾರಿ ಸೀಟು. ಪುಷ್ಟಲತಾ ಹೈಸ್ಕೂಲು ಮುಗಿಸಿದ್ದಾಳೆ ಅಷ್ಟೇ. ಅವಳ ಕಥೆ ಕೇಳಿ ನನ್ನೊಳಗಿನ ಪ್ರಶ್ನೆಗೆ ಅವಳೇ ಕೊಟ್ಟ ಉತ್ತರ: ಮಗ ಹುಟ್ಟಿದ ಒಂದು ವರ್ಷಕ್ಕೆ ಅವನ ಹೆಸರಿನಲ್ಲಿ, ಅವನಿಗೆ ಓದುವುದಕ್ಕೆ ಆಗುತ್ತದೆ ಎಂದು ಹಣ ಇಡುತ್ತ ಬಂದೆ. ಎಷ್ಟೇ ಕಷ್ಟ ಬಂದಾಗಲೂ ಆ ಹಣ ತೆಗೆಯಲಿಲ್ಲ. ನನ್ನ ಗೆಳತಿಯರು, ನೆಂಟರೆಲ್ಲ ಮನೆ ಕಟ್ಟಿಸಿದರು, ಬಂಗಾರ ಮಾಡಿಸಿಕೊಂಡರು. ನನಗೆ ಇವ್ಯಾವುದರ ಮೇಲೂ ಆಸೆ ಇಲ್ಲ. ಮಗ ಚೆನ್ನಾಗಿ ಓದಿ, ಒಳ್ಳೆಯ ವ್ಯಕ್ತಿಯಾಗಿ ಇರಬೇಕು. ನಾಲ್ಕು ಜನರಿಗೆ ಸಹಾಯಮಾಡಬೇಕು ಇದಿಷ್ಟೇ ಆಸೆ ನನ್ನದಾಗಿತ್ತು. ಮಗನೂ ಚೆನ್ನಾಗಿ ಓದಿದ, ದರ ಪರಿಣಾಮವಾಗಿಯೇ ಈಗ ಮೆಡಿಕಲ್ ಸೇರಿದ್ದಾನೆ… ಅವಳ ಮುಖದ ಸಂತೃಪ್ತಿಯ ಹಿಂದೆ ಖಚಿತ ಗುರಿ, ಭವಿಷ್ಯದ ಬಗೆಗಿನ ಸ್ಪಷ್ಟ ಯೋಜನೆ ಎದ್ದು ಕಾಣುತ್ತಿತ್ತು.