Advertisement
ನೆಲದ ಮಹಡಿಯ ಗೋಡೆಗಳಿಗೆ ಒಂದಷ್ಟು ಪಾಯ ಹಾಕುವುದು ಅನಿವಾರ್ಯ. ಅದರಲ್ಲೂ ಮನೆ ನೆಲದ ಮಟ್ಟದಿಂದ ಒಂದೆರಡು ಅಡಿ ಎತ್ತರದಲ್ಲಿದ್ದರೆ, ನಾಲ್ಕಾರು ವರಸೆ ಸೈಜು ಕಲ್ಲಿನ ಇಲ್ಲವೆ ಇಟ್ಟಿಗೆಯ ಪಾಯ ಹಾಕುವುದು ಇದ್ದದ್ದೇ. ಯಾವುದೇ ಪಾಯ ಗಟ್ಟಿಮುಟ್ಟಾದ ಮಣ್ಣಿನ ಪದರದ ಮೇಲೆ ಇರಬೇಕಾದ ಕಾರಣ. ಕಡೆ ಪಕ್ಷ ಮೂರು -ನಾಲ್ಕು ಅಡಿ ಅಗೆದು ಪಾಯ ಹಾಕಲಾಗುತ್ತದೆ. ಅಲ್ಲಿಗೆ ಗೋಡೆಗೆ ಕಲ್ಲಿನದ್ದಾದರೆ, ಐದಾರು ವರಸೆ ಪಾಯ ಬಂದಹಾಗೆ ಆಯಿತು. ಸಾಮಾನ್ಯವಾಗಿ ಕಾಲಂ ಬೀಮ್ ಇರುವ ಮನೆಗಳಲ್ಲಿ, ಗೋಡೆಗಳು ಸೂರಿನ ಭಾರ ಹೊರದ ಕಾರಣ, ಪಾಯದ ಅಗಲವನ್ನು ಕಡಿಮೆ ಮಾಡಲಾಗುತ್ತದೆ. ಆದರೆ ಆಳವನ್ನು ಕಡಿಮೆ ಮಾಡಲಾಗಲ್ಲ. ಹೇಗಿದ್ದರೂ ಪಾಯ ಆಳವಾಗಿ ಇರುವುದರಿಂದ, ಅದನ್ನೇ ಒಂದು ಅಡಿಷ್ಟು ಹೆಚ್ಚುವರಿಯಾಗಿ ಅಂದರೆ ಮಾಮೂಲಿ ಒಂದೂವರೆ ಅಡಿ ಅಗಲಕ್ಕೆ ಬದಲು ಎರಡೂವರೆ ಅಡಿ ಅಗಲಕ್ಕೆ ಮಾಡಿಕೊಂಡರೆ, ಮನೆಯ ಭಾರವನ್ನು ಗೋಡೆಗಳೂ ಒಂದು ಮಟ್ಟದವರೆ ಹೊರಲು ಸಹಕಾರಿಯಾಗಿರುತ್ತದೆ.
Related Articles
ಮನೆಯ ಗೋಡೆಗಳು ಸಾಮಾನ್ಯವಾಗಿ ಅಡ್ಡಕ್ಕೆ ಹಾಗೂ ಉದ್ದಕ್ಕೆ ಇದ್ದು, ಇವೆರಡರಲ್ಲಿ ಒಂದಾದರೂ ನೆಲಮಟ್ಟದಿಂದ ಮೇಲು ಮಹಡಿಯವರೆಗೂ ಮುಂದುವರಿದರೆ, ಈ ಗೋಡೆಗಳ ಭಾರದಲ್ಲಿ ಬಹುಪಾಲು ಅವುಗಳಿಗೆ ಹಾಕುವ ಪಾಯದ ಮೇಲೆಯೇ ಬರುವಂತೆಯೂ ಮಾಡಬಹುದು. ನಾನಾ ಕಾರಣಗಳಿಂದಾಗಿ, ಅದರಲ್ಲೂ ಮುಖ್ಯವಾಗಿ ನೆಲಮಹಡಿಗೆ ಆರ್‌ಸಿಸಿ ಸೂರು ಹಾಕದೆ ಇರುವುದರಿಂದ, ಅನಿವಾರ್ಯವಾಗಿ ಪಾರ್ಟಿಷನ್ ಗೋಡೆಗಳಿಗೂ ಒಂದಷ್ಟು ಪಾಯ ಹಾಕಲಾಗುತ್ತದೆ. ಇದೇ ಪಾಯವನ್ನು ಸ್ವಲ್ಪ ಅಂದರೆ ಕಡೇಪಕ್ಷ ಆರು ಇಂಚಿನಷ್ಟಾದರೂ ಹೆಚ್ಚಿಸಿ, ಒಂದೂವರೆ ಅಡಿ ಅಗಲಕ್ಕೆ ಬದಲಾಗಿ ಎರಡು ಅಡಿಗಳಷ್ಟು ಹಾಕಿದರೆ, ಇವೂ ಕೂಡ ಮನೆಯ ಹೊರೆಯನ್ನು ಸಾಕಷ್ಟು ಇಳಿಸಲು ಸಯಾಯಕಾರಿ.
Advertisement
ಸೈಜ್ ಕಲ್ಲಿನ ಪಾಯವ ನಾಲ್ಕಾರು ವರಸೆಗಿಂತ ಹೆಚ್ಚಿದ್ದರೆ, ಅವುಗಳ ಮೇಲೆ ಬರುವ ಭಾರದ ಲೆಕ್ಕಾಚಾರ ಆಧರಿಸಿ, ಪ್ರತಿ ಮೂರು ಇಲ್ಲವೆ ನಾಲ್ಕು ವರಸೆಗಳಿಗೆ ಮೂರು ಇಂಚಿನ ಕಾಂಕ್ರಿಟ್ ಪದರ ಹಾಕಿದರೆ, ಅದರ ಭಾರ ಹೊರುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹೀಗೆ ಹಾಕುವ ಮುಖ್ಯ ಉದ್ದೇಶ- ಕಲ್ಲಿನ ವರಸೆಗಳು ಮುಂದೆ ಹಾಗೂ ಹಿಂದೆ ಸದೃಢವಾಗಿದ್ದು, ಮಧ್ಯಭಾಗದಲ್ಲಿ ಬೌಲ್ಡರ್ ಕಲ್ಲು ಇತ್ಯಾದಿಯಿಂದ ತುಂಬಲ್ಲಪಟ್ಟು, ಕೆಲವೊಮ್ಮೆ ಠೊಳ್ಳಾಗಿ ಇರುವುದೂ ಉಂಟು. ಒಂದು ಪದರ ಕಾಂಕ್ರಿಟ್ ಹಾಕಿದರೆ, ಈ ಎಲ್ಲ ನ್ಯೂನತೆಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಾಯಕಾರಿ. ಕಲ್ಲಿನ ಪಾಯದ ಎರಡೂ ಮುಖಗಳು ಬೆಸೆದುಕೊಳ್ಳಲು, ಪ್ರತಿ ಮೂರು ನಾಲ್ಕು ಕಲ್ಲಿಗೆ ಒಂದೊಂದು ಬಾಂಡ್ ಕಲ್ಲನ್ನು ಹಾಕಲು ಮರೆಯಬಾರದು.ಈ ಕಲ್ಲುಗಳು ಸಾಮಾನ್ಯವಾಗಿ ಒಂದೂವರೆ ಅಡಿಯಿಂದ ಎರಡು ಅಡಿ ಉದ್ದದ್ದು, ಪಾಯದ ಎರಡೂ ಬದಿಗಳನ್ನು ಬೆಸೆಯಲು ಉಪಯುಕ್ತವಾಗುತ್ತದೆ. ಕೆಲವೊಮ್ಮೆ ಎರಡು ಅಡಿ ಉದ್ದದ ಕಲ್ಲು ಬಾಂಡ್ ಮಾಡಲು ಸಿಗದಿದ್ದರೆ, “ಕತ್ತರಿ ಬಾಂಡ್’ ಅಂದರೆ ಎರಡು ಬಾಂಡ್ ಕಲ್ಲುಗಳು ಪಕ್ಕಪಕ್ಕದಲ್ಲಿ, ಒಂದೊಂದು ಒಂದೊಂದು ಮುಖದಿಂದ ಬಂದು ಬೆಸೆಯುವಂತೆ ಹಾಕಿ, ಕಲ್ಲಿನ ಪಾಯವನ್ನು ಬಲಗೊಳಿಸಬಹುದು. ಲೋಡ್ ಬೇರಿಂಗ್ ಗೋಡೆಯ ಇತರೆ ಲಾಭಗಳು
ಸಾಮಾನ್ಯವಾಗಿ ಕಾಲಂ ಬೀಮ್ ಸ್ಟ್ರಕ್ಚರ್‌ಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಗೋಡೆಗಳಿಗೆ ಪಾಯವನ್ನು ಹಾಕಲಾಗುತ್ತದೆ. ಆದರೆ ಇವೂ ಕೂಡ ಒಂದಷ್ಟು ಭಾರ ಹೊರುತ್ತದೆ ಎಂದಾದರೆ, ಅವುಗಳನ್ನೂ ಕೂಡ ಹೆಚ್ಚುವರಿ ಕಾಳಜಿಯಿಂದ ಮಾಡಲಾಗುತ್ತದೆ. ಕೆಲವೊಮ್ಮೆ “ಹೇಗಿದ್ದರೂ ಭಾರಹೊರಲ್ಲ’ ಎಂದು ತೀರ ಕಡಿಮೆ ಅಂದರೆ ಮಣ್ಣಿನ ಮಟ್ಟದಿಂದ ಕೆಳಗೆ ಒಂದೆರಡು ಅಡಿ ಮಾತ್ರ ಪಾಯ ಹಾಕಿದರೆ, ಅದರ ಕೆಳಗಿನಿಂದ ಇಲಿ ಹೆಗ್ಗಣಗಳು ಕೊರೆದುಕೊಂಡು ಒಳಬಂದು, ಬಿಲಮಾಡಿಕೊಂಡರೆ ಪಾಯಕ್ಕೆ ಹಾನಿ ಆಗುವುದರ ಜೊತೆಗೆ ನೆಲಮಟ್ಟದ ಹಾಸುಗಳು ಸಡಿಲವಾಗಿ, ನಡೆದಾಡಿದರೆ “ಡಬ್ ಡಬ್’ ಎಂದು ಶಬ್ಧ ಬರಲು ಶುರುಮಾಡಬಹುದು. ಅದೇ ರೀತಿಯಲ್ಲಿ ಗೆದ್ದಲು ಹಾಗೂ ಇತರೆ ಕ್ರಿಮಿ ಕೀಟಗಳಿಗೆ ಮನೆಯ ಕೆಳಗೆ ಪ್ರವೇಶ ಸುಲಭದಲ್ಲಿ ನೀಡಿದಂತೆ ಆಗುತ್ತದೆ. ಮಳೆ ನೀರಿನಿಂದ ಉಂಟಾಗುವ ಹಾಗೂ ನೆಲದಿಂದ ಮೇಲೇಳುವ ತೇವವೂ ಗೋಡೆ ಹಾಗೂ ನೆಲಹಾಸನ್ನು ಹಾನಿಮಾಡಬಹುದು. ಇದೆಲ್ಲವನ್ನೂ ತಪ್ಪಿಸಲು ಕಡೆಪಕ್ಷ ಮನೆಯ ಹೊರಗಿನ ಗೋಡೆಗಳಿಗೆ ಸಾಕಷ್ಟು ಆಳದ ಪಾಯವನ್ನು ಹಾಕುವುದು ಅನಿವಾರ್ಯ. ಇದನೇ° ಸ್ವಲ್ಪ ಹಿಗ್ಗಿಸಿದರೆ, ಮನೆಯ ಎಲ್ಲಹೊರೆಯೂ ಕಾಲಂಗಳೇ ಹೊರುವುದು ತಪ್ಪುವುದರೊಂದಿಗೆ, ದೀರ್ಘಕಾಲ ಬಾಳುವ ಮನೆಯೂ ನಮ್ಮದಾಗುತ್ತದೆ. ಹೆಚ್ಚಿನ ಮಾತಿಗೆ ಫೋನ್ 98441 32826 – ಆರ್ಕಿಟೆಕ್ಟ್ ಕೆ ಜಯರಾಮ್