ಶ್ರೀರಂಗಪಟ್ಟಣ: ಪಟ್ಟಣದ ಪುರಸಭೆ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಆರ್.ಯಶೋಧ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಬಜೆಟ್ ಸಭೆಯಲ್ಲಿ 18.45 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಆರಂಭಿಕ ಶುಲ್ಕ 227.83 ಲಕ್ಷ ರೂ., 1049.05 ಲಕ್ಷ ರೂ. ನಿರೀಕ್ಷಿತ ಜಮಾ, 1258.43 ಲಕ್ಷ ರೂ. ನಿರೀಕ್ಷಿತ ಖರ್ಚು ಸೇರಿ ಒಟ್ಟು 18.45 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯ್‌ಕುಮಾರ್, ಪುರಸಭೆ ಸದಸ್ಯರು ಹಾಜರಿದ್ದರು.
ಪುರಸಭೆ ಸದಸ್ಯ ಎಸ್.ಪ್ರಕಾಶ್ ಮಾತನಾಡಿ, ಪುರಸಭೆ ವತಿಯಿಂದ ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕ ಶೌಚಾಲಗಳನ್ನು ಸರಿಯಾಗಿ ಸುಚಿತ್ವ ಕಾಪಾಡದಿದ್ದರೂ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ. ಸರಿಯಾದ ಶುಲ್ಕ ಪಡೆಯುವಂತೆ ಸೂಚಿಸಬೇಕು.
ಪಟ್ಟಣದ ನಾಗರಿಕರು ಉದ್ದೇಶಿತ ಚಂದಗಾಲು ಬಳಿಯ ಕಾವೇರಿ ನದಿಯಿಂದ ದಿನದ ಇಪ್ಪತ್ನಾಲ್ಕು ಗಂಟೆ ಕುಡಿಯುವ ನೀರಿನ ಯೋಜನೆ ವಿರೋಧ ವ್ಯಕ್ತಪಡಿಸಿದರೂ ಶಾಸಕರ ಕುಮ್ಮಕ್ಕಿನಿಂದ ಅದೇ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೀರಿ.
ಈ ಬಗ್ಗೆ ಹೋರಾಟ ಮಾಡಲು ಸಾರ್ವಜನಕರು ಮುಂದಾದರೆ ಹೋರಾಟ ಮಾಡುವವರನ್ನು ಬಂಧಿಸುತ್ತೇವೆ ಎಂದು ಹೋರಾಟವನ್ನು ಹತ್ತಿಕುವ ಕೆಲಸಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯ ವೆಂಕಟೇಶ್, ನಂದೀಶ್, ನಳಿನಮ್ಮ, ಪದ್ಮಮ್ಮ ಧ್ವನಿಗೂಡಿಸಿದರು.