ವಿಜಯಪುರ: ದಾಸ ಸಾಹಿತ್ಯ ಈವರೆಗೆ ಜೀವಂತಿಕೆ ಉಳಿಸಿಕೊಳ್ಳಲು ಮಹಿಳೆಯರೇ ಪ್ರಮುಖ ಕಾರಣ. ತಾಯಂದಿರು ಮೌಖೀಕವಾಗಿ ಉಳಿಸಿಕೊಂಡು ಬಂದ
ಸಂಪ್ರದಾಯ ಇಂದಿಗೂ ಮುಂದುವರಿದಿದೆ ಎಂದು ಇಂಟ್ಯಾಚ್ ವಿಜಯಪುರ ಅಧ್ಯಾಯದ ಸಂಚಾಲಕ ಸಂಶೋಧಕ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.
ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸ 457ನೆಯ ಆರಾಧನೆ, ವಾದಿರಾಜರ ಜಯಂತಿ ಹಾಗೂ ಕಾಖಂಡಕಿ ಕೃಷ್ಣದಾಸರ ಆರಾಧನೆ ಪ್ರಯುಕ್ತ ಇಂಟ್ಯಾಚ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಾಸರ ಕೀರ್ತನೆಗಳ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ವಿದ್ಯುನ್ಮಾನ ಯುಗದಲ್ಲಿ ನಮ್ಮ ಸಂಸ್ಕೃತಿ ಕುಸಿಯದಂತೆ ನೋಡಿಕೊಳ್ಳುವುದು ತಾಯಂದಿರ ಜವಾಬ್ದಾರಿ ಎಂದರು.
15 ಭಜನಾ ಮಂಡಳಿಗಳ ಸುಮಾರು 160 ಮಹಿಳೆಯರು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವ್ಯಾಸವಿಜಯ ಭಜನಾ ಮಂಡಳಿ ಪ್ರಥಮ, ಶ್ರೀವಾರಿ ಭಜನಾ ಮಂಡಳಿ ದ್ವಿತೀಯ ಹಾಗೂ ಪರ್ಣಿಕಾ ಭಜನಾ ಮಂಡಳಿ ತೃತೀಯ ಪ್ರಶಸ್ತಿ ಪಡೆದರು. ವಿಜೇತ ತಂಡಗಳಿಗೆ ಸ್ಮರಣಿಕೆ-ಪುಸ್ತಕ ಬಹುಮಾನ ನೀಡಲಾಯಿತು.
ಪಂ| ವೇದನಿ ಆಚಾರ್ಯರು ದಾಸಸಾಹಿತ್ಯದ ವೈಶಿಷ್ಟ ಮತ್ತು ಅರ್ಥ ಗರ್ಭಿತ ಸಾಹಿತ್ಯದ ಕುರಿತು ಮಾತನಾಡಿದರು. ಪಂ| ನರಹರಿ ಮುತ್ತಗಿ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಯಿಸಿಕೊಟ್ಟರು. ಟಿಟಿಡಿ ದಾಸಸಾಹಿತ್ಯ ಯೋಜನೆಯ ಅರವಿಂದ ಕುಲಕರ್ಣಿ, ಪ್ರವೀಣ ಜೋಶಿ, ಕೃಷ್ಣಾಜಿ ಕುಲಕರ್ಣಿ, ಆನಂದ ಕುಲಕರ್ಣಿ, ಮಿತಾ ದೇಸಾಯಿ, ಪ್ರಲ್ಹಾದ ಬಾಗೇವಾಡಿ, ಸುಧೀಂದ್ರ ಕುಲಕರ್ಣಿ, ಅರವಿಂದ ಜೋಶಿ ಇದ್ದರು. ಇಂಟ್ಯಾಚ್ ಸಹ ಸಂಚಾಲಕ ಆನಂದ ಜೋಶಿ ಸ್ವಾಗತಿಸಿದರು. ವಿಜಯೀಂದ್ರ ನಾಮಣ್ಣ ವಂದಿಸಿದರು.