Advertisement

ಮಾತೃಭಾಷೆ ಉಳಿಸಿ, ಬೆಳೆಸಿ: ಶಕುಂತಳಾ

11:57 AM Nov 02, 2017 | Team Udayavani |

ಪುತ್ತೂರು: ಬೆಂಗಳೂರು, ಮಂಗಳೂರಿನಲ್ಲೂ ಕನ್ನಡ, ತುಳು ಮಾಯವಾಗುತ್ತಿದೆ. ಇದೇ ರೀತಿ ಮುಂದುವರಿದರೆ
ಕರ್ನಾಟಕದಲ್ಲೇ ನಾವು ಪರಕೀಯರಾಗಿ ಬಾಳುವ ಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಖೇದ ವ್ಯಕ್ತಪಡಿಸಿದರು.

Advertisement

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ ಬುಧವಾರ
ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇವತ್ತು ಬೆಂಗಳೂರಿನಲ್ಲಿ ಹೋಗಿ ಕನ್ನಡ ಹುಡುಕುವ ಸ್ಥಿತಿ ಇದೆ. ಮಂಗಳೂರಿನಲ್ಲಿ ಹೋಗಿ ತುಳು ಹುಡುಕುವ ಸ್ಥಿತಿ ಇದೆ. ಮುಂದೊಂದು ದಿನ ಈ ರಾಜ್ಯದಲ್ಲಿ ಕರ್ನಾಟಕವನ್ನೇ ಹುಡುಕುವ ಸ್ಥಿತಿ ಬಾರದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹಿರಿಯರು ಕನ್ನಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇನ್ನು ಕೂಡ ಹಿರಿಯರಿಂದಲೇ ಕನ್ನಡದ
ಸೇವೆ ನಿರೀಕ್ಷಿಸಲಾಗದು. ಅದೇ ರೀತಿ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಕನ್ನಡ ಬೆಳೆಸುವ ಮಕ್ಕಳನ್ನು ತಯಾರು ಮಾಡಬೇಕಿದೆ ಎಂದರು.

ಮಾತೆಯರಿಂದ ರಕ್ಷಣೆ ಸಾಧ್ಯ
ವಕೀಲ ಮಹೇಶ್‌ ಕಜೆ ಮಾತನಾಡಿ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಮತ್ತು ಕನ್ನಡತನವನ್ನು ಸಂರಕ್ಷಿಸಲು ಸಾಧ್ಯವಿದೆ
ಎಂದಾದರೆ ಅದು ಮಾತೆಯರಿಂದ ಮಾತ್ರ ಸಾಧ್ಯ. ಮಕ್ಕಳಿಗೆ ಕನ್ನಡ ಸಂಸ್ಕೃತಿಯನ್ನು ಉಣ ಬಡಿಸುವ ಮೂಲಕ ಎಳವೆಯಲ್ಲೇ ಕನ್ನಡತನ ಮೂಡಿಸಲು ಸಾಧ್ಯವಿದೆ ಎಂದರು. ಕನ್ನಡ ನಾಡು ಎಂಬುದು ಕೇವಲ ಮಣ್ಣಲ್ಲ. ಅನುಭವಿಸಿದವರಿಗೆ ಅದು ಹೃದಯದ ತುಡಿತ. ಅಂತರ್‌ ದೃಷ್ಟಿಯಿಂದ ನೋಡಿದರೆ ಕರ್ನಾಟಕ ಎಂಬುದು ಒಂದು ದಿವ್ಯ ಮಂತ್ರ ಎಂದರು.

ಆಗಸ್ಟ್‌ 15ರಂದು ನಮಗೆ ಸಿಕ್ಕಿದ ಸ್ವಾತಂತ್ರ್ಯ ಸಂಭ್ರಮದ ಜತೆಗೆ ವಿಭಜನೆಯ ನೋವನ್ನೂ ನೀಡಿತು. ಆದರೆ ಕನ್ನಡ ರಾಜ್ಯೋತ್ಸವದ ನವೆಂಬರ್‌ ಒಂದು ಕೇವಲ ಏಕೀಕರಣದ ಸಂಭ್ರಮ ನೀಡಿತು. ಕರ್ನಾಟಕವನ್ನು ಕಟ್ಟುವುದು ಗಡಿಯಿಂದಲ್ಲ, ಹೋರಾಟ, ಹಾರಾಟದಿಂದಲ್ಲ. ಕನ್ನಡದ ಪುಟ್ಟ ಪುಟ್ಟ ಮನಸ್ಸುಗಳನ್ನು ಕಟ್ಟುವ ಮೂಲಕ ಕನ್ನಡತನ ಉಳಿಸಲು ಸಾಧ್ಯ ಎಂದರು. 

Advertisement

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ಪುತ್ತೂರು ನಗರ ಯೋಜನ ಪ್ರಾ ಧಿಕಾರದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ತಹಶೀಲ್ದಾರ್‌ ಅನಂತ ಶಂಕರ್‌, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ
ವಂದಿಸಿದರು.

ರಾಜ್ಯೋತ್ಸವದ ಮೆರವಣಿಗೆ
ಸಭಾ ಕಾರ್ಯಕ್ರಮಕ್ಕೆ ಮೊದಲು ದರ್ಬೆ ವೃತ್ತದಿಂದ ಕನ್ನಡ ರಾಜ್ಯೋತ್ಸವದ ಮೆರವಣಿಗೆ ನಡೆಯಿತು. ಹಿರಿಯ ಸಾಹಿತಿ, ವಕೀಲರಾದ ಬಿ. ಪುರಂದರ ಭಟ್‌ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಭುವನೇಶ್ವರಿ ಮಂಟಪ, ಶಾಲಾ ಕಾಲೇಜು ಮಕ್ಕಳ ಸ್ಕೌಟ್ಸ್‌, ಗೈಡ್ಸ್‌, ರೋವರ್, ಚೆಂಡೆ ಇತ್ಯಾದಿಗಳು ಮೆರವಣಿಗೆಯಲ್ಲಿ ಸಾಗಿಬಂದಿತು. 

Advertisement

Udayavani is now on Telegram. Click here to join our channel and stay updated with the latest news.

Next