ಗೌರಿಬಿದನೂರು: ದೇಸಿ ಸಂಸ್ಕೃತಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ನಾರಪ್ಪ ರೆಡ್ಡಿ ತಿಳಿಸಿದರು. ತಾಲೂಕಿನ ಗೊಟ್ಲಗುಂಟೆ ಗ್ರಾಮದಲ್ಲಿ ಗ್ರಾಮೀಣ ಯುವ ಕಲಾ ಸಂಘವು ಹಮ್ಮಿಕೊಂಡಿದ್ದ ದೇಸಿ ಸಂಸ್ಕೃತಿ ಜಾನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ತೊಡಗಿಸಿಕೊಂಡು ದೇಹದ ಶ್ರಮವನ್ನು ಹಾಗೂ ಮಾನಸಿಕ ಒತ್ತಡ ಸರಿದೂಗಿಸಿಕೊಳ್ಳಲು ಸಂಜೆಯ ವೇಳೆಯಲ್ಲಿ ಭಜನೆ, ಕೋಲಾಟ, ನಾಟಕ, ಭಕ್ತಿಸಂಗೀತ, ತತ್ವಪದ ಮುಂತಾದ ಗಾಯನಗಳ ಮೂಲಕ ನೆಮ್ಮದಿ ಪಡೆಯುತ್ತಿದ್ದರು. ಆದರೆ ಇಂದಿನ ಪೀಳಿಗೆ ಯುವಜನರು ಟೀವಿ ಮತ್ತು ಮೊಬೈಲ್‌ಗಳ ಹಾವಳಿಗಳಿಂದ ವೈಯಕ್ತಿಕ ನೆಮ್ಮದಿ, ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಗ್ರಾಮೀಣ ಯುವಕರ ಸಂಘದ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿ, ಎರಡು ಮೂರು ದಶಕಗಳಿಂದ ಗ್ರಾಮೀಣ ಜಾನಪದ ಕಲೆ ಗಾಯನ ನಾಟಕ ಬೀದಿನಾಟಕಗಳು ಮುಂತಾದ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಗ್ರಾಮೀಣ ಯುವಕರ ಸಂಘ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷ ಗಂಗಾಧರಪ್ಪ, ತಾಪಂ ಸದಸ್ಯರಾದ ಸುಧಾ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಶಿಕ್ಷಕರಾದ ಗಂಗರಾಜು, ತಾಲೂಕು ಭೋವಿ ಸಂಘದ ಅಧ್ಯಕ್ಷ ವೆಂಕಟರಮಣಪ್ಪ, ನಾರಾಯಣರೆಡ್ಡಿ, ಗಂಗಾದೇವಮ್ಮ ಉಪಸ್ಥಿತರಿದ್ದರು.
ಸಾಸಲು ಚಿನ್ನಮ್ಮ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕಲಾವಿದರಾದ ನಾಗರಾಜು, ರೈತರು ಹಾಗೂ ಗ್ರಾಮೀಣ ಕಲಾತಂಡದ ಕಾರ್ಯದರ್ಶಿ ಗಂಗರಾಜು, ಮುದ್ದು ಕೃಷ್ಣಪ್ಪ, ಸರೋಜಮ್ಮ, ಪದ್ಮಾವತಮ್ಮ, ಶ್ರೀರಾಮ್, ಶಿವಶಂಕರಪ್ಪ, ನಾಗರಾಜು ಪಾಲ್ಗೊಂಡಿದ್ದರು.