ಯಾವುದೇ ವಿಷಯವನ್ನು ತೆಗೆದುಕೊಂಡರೆ, ಅದರಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡು ಇರುತ್ತದೆ.ಆದರೆ ಇದು ಪರಿಸರಕ್ಕೆ ಅನ್ವಯಿಸುವುದಿಲ್ಲ ಎಂಬಂತೆ ಕೆಲವೊಮ್ಮೆ ಭಾಸವಾಗುತ್ತದೆ. ಏನನ್ನೂ ನಿರೀಕ್ಷೆ ಮಾಡದೆ, ತನಗಾಗುತ್ತಿರುವ ತೊಂದರೆಯನ್ನು ಅನುಭವಿಸಿ, ಕೇಡು ಬಯಸಿದರೂ ಒಳಿತು ಮಾಡುವುದೇ ಪರಿಸರ. ಅದಕ್ಕೆ ನಾವು ಪರಿಸರವನ್ನು ತಾಯಿಗೆ ಹೋಲಿಸುವುದು.
ಮನುಷ್ಯನ ಪೂರ್ವಜನ್ಮ ನೋಡಿದಾಗ, ಅವರು ಪರಿಸರ, ಸೂರ್ಯ, ಭೂಮಿ ಹೀಗೆ ಮುಂತಾದ ಪ್ರಕೃತಿಯ ಸ್ವತ್ತನ್ನು ದೇವರೆಂದು ಪೂಜಿಸುತ್ತಿದ್ದರು. ಬರುಬರುತ್ತಾ ಈ ಆಚರಣೆ ದೂರ ಸರಿದಿದೆ. ಅಂದು ಇಲ್ಲದ ಪರಿಸರ ದಿನ ಎಂಬ ಆಚರಣೆ ಇಂದೇಕೆ? ಅಲ್ಲೇ ನಾವು ಅರ್ಥ ಮಾಡಿಕೊಳ್ಳಬೇಕು. ವರ್ಷಪೂರ್ತಿ ನಮ್ಮಿಷ್ಟದಂತೆ ಕಾಲ ಕಳೆಯುವ ನಾವು, ಹುಟ್ಟುಹಬ್ಬದ ದಿನದಂದು ದೇವಸ್ಥಾನಕ್ಕೆ ಹೋಗುವುದು, ತಂದೆ ತಾಯಿ ಆಶೀರ್ವಾದ ಪಡೆಯುವುದು, ಅನಾಥಾಶ್ರಮ ಮುಂತಾದಲ್ಲಿ ದಾನ ಕೊಡುವುದು ಹೀಗೆ ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡುತ್ತೇವೆಯಲ್ಲವೇ? ಹಾಗೆಯೇ ದಿನದಿಂದ ದಿನಕ್ಕೆ ನಶಿಸುತ್ತಿರುವ ಪರಿಸರವನ್ನು ಒಂದು ದಿನವಾದರೂ ಹೊಸ ಗಿಡವನ್ನು ನೆಟ್ಟು, ಪರಿಸರವನ್ನು ಬೆಳೆಸುವಲ್ಲಿ ಭಾಗಿಯಾಗಿ ಒಟ್ಟಾಗಿ ಸೇರಿ ಪರಸರವನ್ನು ಉಳಿಸಿ, ಬೆಳೆಸುವ ಆಚರಣೆಯೇ ಜೂನ್ 5.
ಇನ್ನು ಪರಿಸರವನ್ನು ಬೆಳೆಸುವ, ಸಂರಕ್ಷಿಸುವ ವಿಷಯಕ್ಕೆ ಬಂದರೆ, ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು ಈ ಗಾದೆಯನ್ನು ನಾವೆಲ್ಲರೂ ಕೇಳಿರುತ್ತೇವೆ. ಈಗಿರುವ ಪರಿಸ್ಥಿತಿಯಲ್ಲಿ ಈ ಮಾತು ಅಕ್ಷರಶಹ ಸತ್ಯ. ಏಕೆಂದರೆ, ಹಿಂದೆ ಮನುಷ್ಯರಾಗಿದ್ದ ನಾವು ಸಮಯ ಕಳೆದಂತೆ ಕ್ರೂರಿಗಳಂತೆ ವರ್ತಿಸುತ್ತಿದ್ದೇವೆ. ಪ್ರಕೃತಿಯಿಂದ ನಾವು ಎಂಬುದನ್ನು ಮರೆತು ನಮ್ಮಿಂದ ಪ್ರಕೃತಿಯೆಂದು ಭಾವಿಸುತ್ತಿದ್ದೇವೆ. ಪರಿಸರ ಬೆಳೆಸುವ, ಉಳಿಸುವ ಹೊಣೆಯನ್ನು ಎಷ್ಟರ ಮಟ್ಟಿಗೆ ರೂಢಿಸಿಕೊಂಡಿದ್ದೇವೆ? ಶೂನ್ಯ ಎಂದರೆ ತಪ್ಪಾಗದು.
ಮಿತಿ ಮೀರಿದ ದುರಾಸೆಯಿಂದಾಗಿ ನಾವು ಪ್ರಕೃತಿಗೆ ಕೊಡುಗೆಯಾಗಿ ಕೊಟ್ಟಿದ್ದು ಮಾತ್ರ ವಾಯು ಮಾಲಿನ್ಯ, ಜಲ ಮಾಲಿನ್ಯ ಹೀಗೆ ಮುಂತಾದವುಗಳು. ಕೆರೆ, ಕಾಲುವೆಗಳನ್ನು ಮುಚ್ಚಿ, ಆಕಾಶಕ್ಕೆ ಮುಟ್ಟಿಕುವಷ್ಟು ದೊಡ್ಡ ಕಟ್ಟಡ ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನದಿ, ಸಮುದ್ರವನ್ನು ನಮ್ಮದೇ ರಾಜ್ಯಭಾರ ಮಾಡಿಕೊಂಡು ಕಸದ ತೊಟ್ಟಿ ಮಾಡಿ ಜಲಚರಗಳ ಸಾವಿಗೆ ಕಾರಣರಾಗುತ್ತಿದ್ದೇವೆ. ಮುಗ್ದ ಮೂಕ ಪ್ರಾಣಿ, ಪಕ್ಷಿಗಳನ್ನು ನಿರ್ಜೀವ ವಸ್ತುಗಳಂತೆ ವರ್ತಿಸಿಕೊಳ್ಳುತ್ತಿದ್ದೇವೆ.
ಪರಿಸರವು ಎರಡು ಮುಖದ ನಾಣ್ಯದ ಹಾಗೆ. ಪ್ರೀತಿ, ಮಮತೆ, ವಾತ್ಸಲ್ಯವು ಒಂದು ಶಾಂತತೆಯ ಮುಖವಾದರೆ. ಸುನಾಮಿ, ಭೂಕಂಪ, ಚಂಡಮಾರುತ ಹೀಗೆ ಮುಂತಾದ ಪ್ರಕೃತಿವಿಕೋಪಗಳು ಹಾನಿ ಮಾಡಿದ ಮನುಕುಲಕ್ಕೆ ತಕ್ಕ ಪಾಠ ಕಲಿಸುವ ಇನ್ನೊಂದು ರೌದ್ರ ಮುಖವಾಗಿದೆ. ನಾವು ಒಂದು ಕೈಯಲ್ಲಿ ಏನನ್ನು ಕೊಡುತ್ತೇವೋ ಅದೇ ನಮಗೆ ಮರಳಿ ಬರುವುದು. ಅಂದರೆ, ನಾವು ಪರಿಸರಕ್ಕೆ ಒಳಿತು ಮಾಡಿದರೆ, ಶಾಂತವಾಗಿರುವ ಪಕೃತಿಯು ನಮಗೊಲಿಯುತ್ತದೆ. ಕೇಡು ಬಯಸಿದರೆ, ಅದೇ ಪ್ರಕೃತಿಯ ರೌದ್ರಾವತಾರವನ್ನು ಕಾಣಬಹುದಾಗಿದೆ. ಆಯ್ಕೆ ನಮ್ಮದೇ.
ಪರಿಸರ, ಅರಣ್ಯ ಪ್ರದೇಶ, ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ಅಭಿಯಾನಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆಯಾದರೂ, ಅದರಲ್ಲಿ ನಮ್ಮ ಪಾಲು ಸಹ ಅತ್ಯಗತ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನಮ್ಮಿಂದ ಅಳಿಲುಸೇವೆಯಾದರೆ ಪರಿಸರವನ್ನು ಉಜ್ವಲ ರೀತಿಯಲ್ಲಿ ಕಾಣಬಹುದು. ಹೀಗೆ ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೊಂದು ದಿನ ನಮ್ಮ ಜೀವಕ್ಕೆ ತೊಂದರೆಯಾಗಿ, ಮನುಕುಲವೇ ನಾಶವಾಗಿ, ಮನುಷ್ಯನಿಲ್ಲದ ಭೂಮಿಯಾಗುತ್ತದೆ. ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ಪರಿಸರ ದಿನಾಚರಣೆಯ ನಿಲುವು.
ಸುಚಿತ್ರ ಬಿ.ಎಸ್., ಕೌಲಾಲಂಪುರ ಮಲೇಷಿಯಾ