Advertisement

ಭೂತಾಯಿಗಾಗಿ ಸದ್ಗುರು ಬೈಕ್‌ ಸಂಚಾರ; ಈಶಾ ಫೌಂಡೇಶನ್‌ನಿಂದ ಮತ್ತೊಂದು ಆಂದೋಲನ

12:09 AM Mar 21, 2022 | Team Udayavani |

“ಮಣ್ಣಿನಿಂದ ಬಂದ ನಾವು, ಮರಳಿ ಸೇರುವುದೂ ಅದೇ ಮಣ್ಣಿಗೆ. ನಡುವಿನ ಈ ಅವಧಿಯಲ್ಲಿ ನಮಗೆ ಜೀವ ಕೊಟ್ಟ ಮಣ್ಣಿಗಾಗಿ ಏನಾದರೂ ಮಾಡಬೇಕು’ ಎನ್ನುವುದು ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶಯ. “ಕಾವೇರಿ ಕೂಗು’ ಸೇರಿದಂತೆ ಹಲವು ಪರಿಸರ ಜಾಗೃತಿ ಮೊಳಗಿಸಿದ್ದ ಅವರು ಇಂದಿನಿಂದ (ಮಾ.21) ಬೈಕ್‌ ಮೂಲಕ 27 ರಾಷ್ಟ್ರಗಳಲ್ಲಿ, “ಮಣ್ಣು ರಕ್ಷಿಸೋಣ’ ಆಂದೋಲನ ಕೈಗೊಳ್ಳುತ್ತಿದ್ದಾರೆ…

Advertisement

ಬನ್ನಿ, “ಮಣ್ಣು ರಕ್ಷಿಸೋಣ’…
“ಮಣ್ಣು ರಕ್ಷಿಸೋಣ’ ಅಭಿಯಾನ, ಈಶಾ ಫೌಂಡೇಶನ್‌ನ ಪರಿಸರ ಕಾಳಜಿಯ ಮತ್ತೂಂದು ಹೆಜ್ಜೆ. ಮಣ್ಣಿನ ಸವಕಳಿ ಭೂಮಿಗೆ ಎದುರಾಗಿರುವ ಬಹುದೊಡ್ಡ ಆಪತ್ತು. ಜಗತ್ತಿನ ಬಹುತೇಕ ರಾಷ್ಟ್ರಗಳ ಪರಿಸರ ಇದರಿಂದ ಅಪಾರ ನಷ್ಟ ಅನುಭವಿಸುತ್ತಿವೆ ಎನ್ನುವುದನ್ನು ಮನಗಂಡು ಸದ್ಗುರು ಅವರು ಈ ಆಂದೋಲನ ಆರಂಭಿಸಿದ್ದಾರೆ.

100 ದಿನ, 27 ದೇಶ ಸಂಚಾರ
ಮಾರ್ಚ್‌ 21ರಂದು ಲಂಡನ್ನಿನ ಮೂಲಕ ಸದ್ಗುರು ಜಗ್ಗಿ ವಾಸುದೇವ್‌, ಮಣ್ಣಿನ ಸಂರಕ್ಷಣೆಗಾಗಿ ಏಕಾಂಗಿ ಪ್ರಯಾಣ ಆರಂಭಿಸಲಿದ್ದಾರೆ. ಬರೋಬ್ಬರಿ 100 ದಿನಗಳ ಆಂದೋಲನ. 27 ರಾಷ್ಟ್ರಗಳ, 30 ಸಾವಿರ ಕಿ.ಮೀ. ದೂರ ಕ್ರಮಿಸಿ, ಮಾರ್ಗದಲ್ಲಿ ವಿವಿಧ ರಂಗದ ಹಲವು ಗಣ್ಯರನ್ನು ಭೇಟಿಯಾಗುವ ಉದ್ದೇಶ ಸದ್ಗುರು ಅವರದ್ದು. ಈ 100 ದಿನಗಳ ಅವಧಿಯಲ್ಲಿ ಆಯಾ ರಾಷ್ಟ್ರಗಳ ಪ್ರತಿಯೊಬ್ಬರೂ 5-10 ನಿಮಿಷಗಳ ಕಾಲ ಮಣ್ಣಿನ ಸಂರಕ್ಷಣೆ ಕುರಿತು ಚರ್ಚಿಸು ವುದು, ಆಲೋಚಿಸುವುದು ಮಾಡಬೇಕು ಎನ್ನುವುದು ಸದ್ಗುರುಗಳ ಆಶಯ.

ಪ್ರತೀ ದೇಶಕ್ಕೂ ವಿಭಿನ್ನ ನೀಲನಕ್ಷೆ
ಈ 27 ರಾಷ್ಟ್ರಗಳಲ್ಲಿ ಕೃಷಿ ಪದ್ಧತಿ, ಮಳೆ ಬೀಳುವಿಕೆ, ಹವಾಮಾನ ವೈಪರೀತ್ಯ ವಿಭಿನ್ನವಾಗಿದೆ. ಇದಕ್ಕೆ ತಕ್ಕಂತೆ ಮಣ್ಣಿನ ಸವಕಳಿ ಕೂಡ ವಿಭಿನ್ನತೆ ಹೊಂದಿದೆ. ಸದ್ಗುರು ಇದನ್ನೆಲ್ಲ ಸ್ಥೂಲವಾಗಿ ಅಧ್ಯಯನ ನಡೆಸಿ, ಮಣ್ಣಿನ ಸಂರಕ್ಷಣೆ ಕುರಿತು ಪ್ರತಿಯೊಂದು ದೇಶಕ್ಕೂ “ವಿಶೇಷ ನೀತಿ’ ಸಿದ್ಧಪಡಿಸಿದ್ದಾರೆ.

ಗಣ್ಯರೊಂದಿಗೆ ಸದ್ಗುರು ಚರ್ಚೆ
ಮಣ್ಣಿನ ಸಂರಕ್ಷಣೆಗಾಗಿ ಆಯಾ ರಾಷ್ಟ್ರಗಳಿಗೆ ಸಂಬಂಧಿಸಿದ ವಿಶೇಷ ನೀತಿಗಳನ್ನು ಸಮಾಜದ ಗಣ್ಯರು, ರಾಜಕೀಯ ಪ್ರಮುಖರು, ವಿಜ್ಞಾನಿಗಳು- ಮುಂತಾದವರೊಂದಿಗೆ ಚರ್ಚಿಸಲಿದ್ದಾರೆ. ಸಾಮಾಜಿಕ ಜಾಗೃತಿ ಮೂಲಕ ಈಶಾ ಫೌಂಡೇಶನ್‌ ಜತೆಗೂಡಿ ಮಣ್ಣಿನ ಸಂರಕ್ಷಣೆಗೆ ಕೈಜೋಡಿಸಲು ಸದ್ಗುರು ಕೋರಲಿದ್ದಾರೆ.

Advertisement

ಆಂದೋಲನದ ಅಂತರ್ಧ್ವನಿ
“ಮಣ್ಣಿನ ಸವಕಳಿಯಿಂದ ಜೀವವೈವಿಧ್ಯತೆಯ ನಷ್ಟ, ಹವಾಮಾನ ವೈಪರೀತ್ಯ, ಕೃಷಿ ಇಳುವರಿ ಇಳಿಮುಖ, ಪ್ರಕೃತಿ ವಿಕೋಪ- ಮುಂತಾದ ಸಮಸ್ಯೆಗಳೂ ತಲೆದೋರಿವೆ. ಅಲ್ಲದೆ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿದೆ. ಸಾವ ಯವ ಕೃಷಿ ನಮ್ಮ ಮುಂದಿರುವ ಏಕೈಕ ದಾರಿ. ಇದಕ್ಕೆ ಈಗಿನಿಂದಲೇ ಯೋಜನೆ ರೂಪಿಸದಿದ್ದರೆ, ಭವಿಷ್ಯದ ಪೀಳಿಗೆ ನಾನಾ ಸಮಸ್ಯೆ ಎದುರಿಸಬೇಕಾದೀತು.ಈ ಆಂದೋಲನ ಯಾರ ವಿರುದ್ಧವೂ ಅಲ್ಲ. ಇದು ಪ್ರತಿಭಟನೆಯೂ ಅಲ್ಲ. ಒತ್ತಡದ ತಂತ್ರ ಅಲ್ಲವೇ ಅಲ್ಲ. ಇದು ಜನತೆಯ ಇಚ್ಚಾಶಕ್ತಿ’ ಎಂಬುದು ಅವರ ಸ್ಪಷ್ಟನೆ.

ಯುದ್ಧ ನೆರಳಿನಲ್ಲಿ ಸಂಚಾರ
ಸದ್ಗುರು ಅವರು ಸೋಲೊ ಟ್ರಿಪ್‌ ಮೂಲಕ ಲಂಡನ್‌, ಆಮ್‌ಸ್ಟರ್‌ಡಂ, ಬರ್ಲಿನ್‌, ವಿಯಾನ್‌, ರೋಮ್‌, ಪ್ಯಾರಿಸ್‌ನಂಥ ಐರೋಪ್ಯ ರಾಷ್ಟ್ರಗಳನ್ನು ದಾಟಿ ಭಾರತಕ್ಕೆ ಆಗಮಿಸಲಿದ್ದಾರೆ. ಹಿಮಾವೃತ ಪ್ರದೇಶಗಳ ದುರ್ಗಮ ರಸ್ತೆಗಳನ್ನು ಹಾದುಬರುವುದೂ ಒಂದು ಸವಾಲು. ಇದಕ್ಕಿಂತ ಹೆಚ್ಚಾಗಿ, ಯುದ್ಧದ ನೆರಳೂ ಪರೋಕ್ಷವಾಗಿ ಸಂಚಾರಕ್ಕೆ ತಗಲಲಿದೆ. “ರಷ್ಯಾ- ಉಕ್ರೇನ್‌ಗಳ ಮೂಲಕ ಸಂಚಾರ ಕೈಗೊಳ್ಳುವುದಿಲ್ಲ. ಆದರೆ ಯುದ್ಧ ವಲಸೆ ಹೊಂದಿರುವ ರಾಷ್ಟ್ರಗಳ ಮೂಲಕ ನಮ್ಮ ಸಂಚಾರ ಸಾಗಲಿದೆ’ ಎನ್ನುತ್ತಾರೆ, ಸದ್ಗುರು.

ದೋಷಪೂರಿತ ಕೃಷಿ ಪದ್ಧತಿಯು ಫ‌ಲವತ್ತತೆಯ ಭೂಮಿ ಯನ್ನು ಮರುಭೂಮಿ ಆಗಿಸುತ್ತಿದೆ. ಸಾವಯವ ಪದ್ಧತಿಗೆ ನಾವು ಮರಳದ ಹೊರತು, ಈ ಭೂಮಿಗೆ ಉಳಿಗಾಲವಿಲ್ಲ.
-ಸದ್ಗುರು ಜಗ್ಗಿ ವಾಸುದೇವ್‌

Advertisement

Udayavani is now on Telegram. Click here to join our channel and stay updated with the latest news.

Next