ಸಿನಿಮಾ ಅಂದರೆ, ಕಲೆ, ಸಂಸ್ಕೃತಿ ಬಿಂಬಿಸುವ ಮಾಧ್ಯಮ ಎಂದೇ ಪರಿಗಣಿಸಲಾಗಿದೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ವಿಷಯಗಳನ್ನು ಬಿಂಬಿಸುವ ಮೂಲಕ ಒಂದಷ್ಟು ಸಂದೇಶ ಸಾರುವ ಚಿತ್ರಗಳು ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ “ನವಿಲ ಕಿನ್ನರಿ’ ಎಂಬ ಚಿತ್ರ ಹೊಸ ಸೇರ್ಪಡೆ ಎನ್ನಬಹುದು. ವೆಂಕಿ ಚೆಲ್ಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹೈದರಾಬಾದ್ ಮೂಲದ ವೆಂಕಿ ಚೆಲ್ಲಾ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಈ ಹಿಂದೆ ಸಾಕಷ್ಟು ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. “ನವಿಲ ಕಿನ್ನರಿ’ ಚಿತ್ರದ ಮೂಲಕ ನಮ್ಮ ಭಾಷೆ, ಕಲೆ, ಸಂಸ್ಕೃತಿ, ಶಿಕ್ಷಣ ಹಾಗೂ ಕನ್ನಡ ಶಾಲೆಗಳನ್ನು ಉಳಿಸಬೇಕೆಂಬ ಕತೆಯನ್ನು ಹೇಳಹೊರಟಿದ್ದಾರಂತೆ. ಈ ವಿಷಯಗಳ ಜೊತೆಗೆ ಅಪ್ಪಟ ಮನರಂಜನೆಯೂ ಚಿತ್ರದಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು.
ಹಾಗಾದರೆ, “ನವಿಲ ಕಿನ್ನರಿ’ ಒಳಗೇನಿದೆ? ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬಳು ಜನರಿಂದ ನಿಂದನೆಗೆ ಒಳಗಾಗುತ್ತಾಳೆ. ಮುಂದೆ ಆಕೆ ನೃತ್ಯ ಕಲಿಯಬೇಕೆಂದು ಹೊರಟಾಗ ಅಲ್ಲೂ ಸಹ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದರೂ, ಆಕೆ ಛಲ ಬಿಡದೆ, ತನ್ನ ಆತ್ಮಸ್ಥೈರ್ಯದಿಂದ ಅದನ್ನೆಲ್ಲಾ ಹೇಗೆ ಮೆಟ್ಟಿ ನಿಲ್ಲುತ್ತಾಳೆ ಮತ್ತು ಸರ್ಕಾರಿ ಶಾಲೆಯಲ್ಲಿರುವ ಸಮಸ್ಯೆ ಹೋಗಲಾಡಿಸಲು ಹೇಗೆ ಹೋರಾಡುತ್ತಾಳೆ ಎಂಬುದು ಕಥೆ. ಇಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ, ಪೋಷಕರಿಗೂ ಒಂದಷ್ಟು ಸಂದೇಶಗಳಿವೆ ಎಂಬುದು ಚಿತ್ರತಂಡದ ಮಾತು.
ಹೈದರಾಬಾದ್‌ನ ಹಿಮಾಂಶಿ ಚಿತ್ರದ ಮುಖ್ಯ ಆಕರ್ಷಣೆ. ಮೂಲತಃ ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಹಿಮಾಂಶಿ ಅವರಿಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕ ಖುಷಿ ಇದೆ. ಇನ್ನು, ನಾಯಕಿಗೆ ಪ್ರೋತ್ಸಾಹ ನೀಡುವ ಪಾತ್ರವನ್ನು ಡಾ. ಹುಲಿಕಲ್ ನಟರಾಜ… ಮಾಡಿದ್ದಾರೆ. ಅವರು ಶಿಕ್ಷಕರಾಗಿದ್ದು, ಸಿನಿಮಾದಲ್ಲೂ ಅದೇ ಪಾತ್ರ ಮಾಡಿದ್ದು ವಿಶೇಷ. ಉಳಿದಂತೆ ಚಿತ್ರದಲ್ಲಿ ಶ್ರೀನಿವಾಸ ಪ್ರಭು, ಸ್ಪಂದನಾ ಪ್ರಕಾಶ್ ಇತರರು ನಟಿಸಿದ್ದಾರೆ. ರಂಜನಿಪ್ರಭು, ವೆಂಕಟೇಶ್ ಗೀತೆಗಳನ್ನು ರಚಿಸಿದ್ದಾರೆ. ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಪ್ರಕಾಶ್ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಶ್ರೀನಿವಾಸ ವಿನ್ನಿಕೋಟ ಛಾಯಗ್ರಹಣವಿದೆ.
“ನವಿಲ ಕಿನ್ನರಿ’ ಚಿತ್ರವನ್ನು ಹುಲಿಕಲ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಶರತ್, ಬಸವಣ್ಣ, ಗಂಗಾಧರಯ್ಯ, ಪ್ರಕಾಶ್ ಅಂಗಡಿ ಮತ್ತು ಸೂರ್ಯಪ್ರಕಾಶ್ ನಿರ್ಮಾಣ ಮಾಡಿದ್ದಾರೆ.