Advertisement

ಭಾರತೀಯ ಸಂಪ್ರದಾಯ ಉಳಿಸಿ -ಬೆಳೆಸಿ: ದೇಸಾಯಿ

05:41 PM Mar 19, 2022 | Shwetha M |

ಮುದ್ದೇಬಿಹಾಳ: ಪಟ್ಟಣದ ಇತಿಹಾಸದಲ್ಲಿ ಬಹಳ ವರ್ಷಗಳ ನಂತರ ಇದೇ ಮೊದಲ ಬಾರಿ ಇತರೆ ಸಮಾಜಗಳ ಸಹಯೋಗದಲ್ಲಿ ತಾಳಬದ್ಧವಾಗಿ ಹಲಗೆ ಬಾರಿಸುವ ಹಲಗೆ ಹಬ್ಬ ಸ್ಪರ್ಧೆ ಏರ್ಪಡಿಸಿ ಹೋಳಿ ಹಬ್ಬಕ್ಕೆ ವಿಶೇಷ ಕಳೆ ತಂದುಕೊಟ್ಟ ವೀರಶೈವ ಲಿಂಗಾಯತ ಸಮಾಜದ ಕ್ರಮಕ್ಕೆ ಸಾರ್ವಜನಿಕರಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.

Advertisement

ಪಟ್ಟಣದ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ಗುರುವಾರ ರಾತ್ರಿ ನಡೆದ ಸ್ಪರ್ಧಾ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಮೆರುಗು ನೀಡಿ, ಹಲಗೆಯ ತಾಳಕ್ಕೆ ತಾವೂ ಕುಣಿದು ಆನಂದಿಸಿದರು.

ಹಲಗೆ ನಿನಾದ ಹೊರಡಿಸುವ ತಂಡದವರಂತೂ ನಾ ಮೇಲು, ನೀ ಮೇಲು ಎನ್ನುವಂತೆ ತರಹೇವಾಗಿ ವಿಧಗಳಲ್ಲಿ, ಒಬ್ಬರ ಮೇಲೆ ಇನ್ನೊಬ್ಬರು ನಿಂತು ಅತ್ಯುತ್ಸಾಹದಿಂದ ಹಲಗೆ ಬಾರಿಸಿ ಹರ್ಷದ ಹೊನಲು ಹರಿಸಿದರು.

ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಹೋಳಿ ಹಬ್ಬದ ಹಳೆ ಕಾಲದ ಸಂಪ್ರದಾಯವನ್ನು ನಾವೆಲ್ಲ ಉಳಿಸಿ ಬೆಳೆಸಬೇಕಿದೆ. ಬಣ್ಣಕ್ಕೆ ಅಂಜಿ ಊರು ಬಿಟ್ಟು ಬೇರೆ ಕಡೆ ಪ್ರವಾಸಕ್ಕೆ ಹೋಗದೆ ಇಲ್ಲೇ ನಿಂತು ಗುಣಮಟ್ಟದ ನೈಸರ್ಗಿಕ ಬಣ್ಣದಾಟದಲ್ಲಿ ಪಾಲ್ಗೊಂಡು ಎಲ್ಲರೂ ಮೆರುಗು ಹೆಚ್ಚಿಸಬೇಕು ಎಂದು ಮನವಿ ಮಾಡಿ ಇದೊಂದು ಸಾಮರಸ್ಯ ಬೆಸೆಯುವ ಹಬ್ಬವಾಗಿದ್ದು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಕರೆ ನೀಡಿದರು.

ವೀರಶೈವ ವಿದ್ಯಾವರ್ಧಕ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಬಿ. ನಾವದಗಿ ಮಾತನಾಡಿ, ಹಲಗೆ ಹಬ್ಬದಂಥ ವಿನೂತನ, ವಿಶಿಷ್ಟ ಕಾರ್ಯಕ್ರಮ ನಮ್ಮೂರಿಗೆ ಮೆರುಗು ತಂದು ಕೊಟ್ಟಂತಾಗಿದೆ ಎಂದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ದಿ ಕರ್ನಾಟಕ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಸತೀಶ ಓಸ್ವಾಲ್‌, ಉದ್ಯಮಿ ಶರಣು ಸಜ್ಜನ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಪ್ರಮುಖರಾದ ಸು ಧೀರ ನಾವದಗಿ, ಮಾರುತಿ ನಲವಡೆ, ಪುರಸಭೆ ಮಾಜಿ ಸದಸ್ಯ ಸತೀಶ ಕುಲಕರ್ಣಿ, ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ, ಬಿಜೆಪಿ ಧುರೀಣರಾದ ಸಿದ್ದರಾಜ ಹೊಳಿ, ರಾಜೇಂದ್ರಗೌಡ ರಾಯಗೊಂಡ, ಚಂದ್ರಶೇಖರ ಕಲಾಲ್‌ ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

ವಿವಿಧೆಡೆಯಿಂದ ಆಗಮಿಸಿದ್ದ 12 ಹಲಗೆ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅತ್ಯುತ್ತಮ ಪ್ರದರ್ಶನ ನೀಡಿದ ಸಿಂದಗಿ ತಾಲೂಕು ಕೊಂಡಗೂಳಿಯ ರಮೇಶ ಕೋರವಾರ ತಂಡ ಪ್ರಥಮ, ಮುದ್ದೇಬಿಹಾಳ ಗಣೇಶ ನಗರದ ಲಕ್ಷ್ಮಣ ಹರಣಶಿಕಾರಿ ನೇತೃತ್ವದ ತಂಡ ದ್ವಿತೀಯ ಮತ್ತು ಮುದ್ದೇಬಿಹಾಳ ಪಿಲೇಕೆಮ್ಮ ನಗರದ ಪರಶುರಾಮ ಹಡಲಗೇರಿ ನೇತೃತ್ವದ ತಂಡ ತೃತೀಯ ಬಹುಮಾನ ಮತ್ತು ಶೀಲ್ಡ್‌ಗಳನ್ನು ಮುಡಿಗೇರಿಸಿಕೊಂಡರು. ವೇದಿಕೆಯಲ್ಲಿದ್ದ ಗಣ್ಯರು ನಗದು ಬಹುಮಾನ ಮತ್ತು ಶೀಲ್ಡ್‌ ನೀಡಿ ಪುರಸ್ಕರಿಸಿದರು. ಬಾಗಲಕೋಟೆಯ ಶಂಕ್ರಪ್ಪ ಹಿರೇಮಠ ತಂಡದ ಮುಖಂಡರು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.

ನಾದಕ್ಕೆ ಹೆಜ್ಜೆ ಹಾಕಿದ ವಕೀಲರು

ನಿರ್ಣಾಯಕರಾಗಿ ಆಗಮಿಸಿದ್ದ ಬಾಗಲಕೋಟೆ ಹಲಗಿ ವಾದನ ತಂಡದವರು ಪ್ರೇಕ್ಷಕರ ಮನರಂಜನೆಗಾಗಿ ಹಲಗೆ ಬಾರಿಸಿದಾಗ ಹೊರಹೊಮ್ಮಿದ ಹಲಗಿ ವಾದನದ ನಾದಕ್ಕೆ ಬಿಜೆಪಿ ಮುದ್ದೇಬಿಹಾಳ ಮಂಡಲದ ಮಾಜಿ ಅಧ್ಯಕ್ಷ ಎಂ.ಡಿ. ಕುಂಬಾರ ವಕೀಲರು ಜೋರಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ಇವರಿಂದ ಪ್ರೇರಿತರಾದ ಇನ್ನೋರ್ವ ವಕೀಲ ಶಿವಾನಂದ ಚಿಲ್ಲಾಳಶೆಟ್ಟರ ಅವರು ಹಲಗೆ ಬಾರಿಸಿ ಸಂತಸ ಹಂಚಿಕೊಂಡದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next