Advertisement

ಮಾನವೀಯ ಧರ್ಮವನ್ನು ಉಳಿಸಿ: ಸಚಿವ ರಮಾನಾಥ ರೈ

07:50 AM Aug 13, 2017 | |

ಮಡಿಕೇರಿ: ಪ್ರಸ್ತುತ ಸಮಾಜದಲ್ಲಿ ಯಾವುದೋ ಒಂದು ಜಾತಿ, ಭಾಷೆ ಮತ್ತು ಧರ್ಮದೆಡೆಗಿನ ಪ್ರೀತಿಯಷ್ಟೇ ಕಾಣುತ್ತಿದ್ದು, ಮನುಷ್ಯ ಮನುಷ್ಯರ ನಡುವಿನ ಪ್ರೀತಿ, ವಿಶ್ವಾಸ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯ ಸಚಿವ ರಮಾನಾಥ ರೈ, ಎಲ್ಲವನ್ನೂ ಮೀರಿದ ಮಾನವೀಯ ಧರ್ಮದ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು ಎಂದು ಕರೆ ನೀಡಿದ್ದಾರೆ.

Advertisement

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜದಲ್ಲಿ ನಡೆದ‌ 2016 ಮತ್ತು 2017ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಆರು ಮಂದಿ ಗಣ್ಯರಿಗೆ ಪ್ರದಾನಿಸಿ ಅವರು ಮಾತನಾಡಿದರು.

ಸಂಸ್ಕೃತಿ ಸಂರಕ್ಷಿಸುವ ಅಗತ್ಯ
ಬಹುಭಾಷೆ, ಸಂಸ್ಕೃತಿ, ಜಾತಿ, ಧರ್ಮಗಳನ್ನು ಹೊಂದಿರುವ ಭಾರತಕ್ಕೆ ಹೋಲಿಕೆ ಮಾಡುವ ಮತ್ತೂಂದು ದೇಶವಿಲ್ಲ.  ಬಹು ಭಾಷಾ ಸಂಸ್ಕೃತಿಯ ಈ ನಾಡಿನಲ್ಲಿ ಭಾಷೆಯ ಬಳಕೆ ಇಲ್ಲದೆ ಹಲವಾರು ಭಾಷೆಗಳು ನಶಿಸಿಹೋಗಿವೆ. ಭಾಷೆ, ಅದರಲ್ಲಿನ ಜಾನಪದ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು. 

ಹಿಂದೆ ನಮ್ಮ ಮಾತೃ ಭಾಷೆಯನ್ನೇ ಉಪೇಕ್ಷಿಸ ಲಾಗುತ್ತಿತ್ತು. ಕ್ರಮೇಣ ಭಾಷಾ ಸಂಸ್ಕೃತಿಯ ಉಳಿವಿನ ಪ್ರಯತ್ನಗಳ ಫ‌ಲ ಸ್ವರೂಪವಾಗಿ ಅಕಾಡೆಮಿಗಳು ರಚನೆಯಾದವು. ಇದರಿಂದ ವಿವಿಧ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳು ಹೊರ ಬರಲು ಸಾಧ್ಯವಾಗಿದೆಯೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಅಪ್ಪಚ್ಚು ರಂಜನ್‌ ಅವರು ಅಕಾಡೆಮಿ ಹೊರ ತಂದಿರುವ 5 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,  ಅರೆಭಾಷಾ ಅಕಾಡೆಮಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 86 ಕಾರ್ಯಕ್ರಗಳನ್ನು ನಡೆಸಿರುವುದು ಶ್ಲಾಘನೀಯವೆಂದರು.  

Advertisement

ಅರಣ್ಯ ಸಚಿವ ರಮಾನಾಥ ರೈ ಅವರನ್ನು ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್‌ ಅವರು ಸಮ್ಮಾನಿಸುವ ಮೂಲಕ ಗೌರವ ಅರ್ಪಿಸಿದರು.

ಗೌರವ ಪ್ರಶಸ್ತಿ ಪ್ರದಾನ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ 2016-17ನೇ ಸಾಲಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿನ ಆರು ಮಂದಿ ಸಾಧಕರಿಗೆ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಗೌರವ ಪ್ರಶಸ್ತಿಗಳನ್ನು ಡಾ| ಪುರುಷೋತ್ತಮ ಬಿಳಿಮಲೆ, ಕುಲ್ಲಚನ ಕಾರ್ಯಪ್ಪ, ಎಂ.ಜಿ. ಕಾವೇರಮ್ಮ, ಅಮ್ಮಾಜಿರ ಪೊನ್ನಪ್ಪ, ಕೇಪು ಅಜಿಲ ಮತ್ತು ಪಟ್ಟಡ ಪ್ರಭಾಕರ್‌ ಪಡೆದುಕೊಂಡರು. 

ಸಮಾರಂಭದಲ್ಲಿ ಅಕಾಡೆಮಿಯಿಂದ ಹೊರತರಲಾಗಿರುವ ಅರೆಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಸಂಸ್ಕೃತಿ ಸಂಪತ್ತು, ಅರೆಭಾಷೆ ಸಂಪ್ರದಾಯದ ಅಡುಗೆಯ ಕುರಿತ ರುಚಿ, ಹೊದ್ದೆಟ್ಟಿ ಭವಾನಿ ಶಂಕರ್‌ ಅವರ ಕವನ ಸಂಕಲನ ಅನುಭವ ಧಾರೆ,  ಬೈತಡ್ಕ ಜಾನಕಿ ಬೆಳ್ಳಿಯಪ್ಪ ರಚಿಸಿರುವ ನಾಟಕ ಸಂಕಲನ ಬೆಳ್ಳಿ ಚುಕ್ಕೆಗ ಮತ್ತು ಅಕಾಡೆಮಿಯ ಪತ್ರಿಕೆ ಹಿಂಗಾರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಬಿಡುಗಡೆ ಮಾಡಿದರು.

ಅಕಾಡೆಮಿ ಅಧ್ಯಕ್ಷ ಸ್ಥಾನ ದಕ್ಷಿಣ ಕನ್ನಡಕ್ಕೆ ನೀಡಿ 
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧಿಕಾರದ ಅವಧಿ ಪೂರ್ಣಗೊಂಡಿದ್ದು, ಮುಂದಿನ ಅವಧಿಯ ಅಧ್ಯಕ್ಷ ಸ್ಥಾನವನ್ನು ದಕ್ಷಿಣ ಕನ್ನಡಕ್ಕೆ ನೀಡುವಂತೆ ಅರಣ್ಯ ಸಚಿವ ರಮಾನಾಥ ರೈ ಮನವಿ ಮಾಡಿದರು.
 
ಸಚಿವರು ತಮ್ಮ ಭಾಷಣದಲ್ಲಿ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಪ್ರಸ್ತುತ ಕೊಡಗಿನ ಕೊಲ್ಯ ಗಿರೀಶ್‌ ಅವರು ನಿರ್ವಹಿಸಿದ್ದು, ಮುಂದಿನ ಅವಧಿಯ ಅವಕಾಶವನ್ನು ದಕ್ಷಿಣ ಕನ್ನಡಕ್ಕೆ ನೀಡುವಂತೆ ಕೋರಿದರು.

ಸಮಾರಂಭದ ಅಧ್ಯಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಎಸ್‌.ಐ . ಭಾವಿ ಕಟ್ಟಿ, ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್‌, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಲೋಕೆೇಶ್‌ ಸಾಗರ್‌, ಹಿರಿಯ ಪತ್ರಿಕೋದ್ಯಮಿ ಜಿ. ರಾಜೇಂದ್ರ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರಸ್‌ ಕ್ಲಬ್‌  ಅಧ್ಯಕ್ಷರಾದ  ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಕಾರ್ಯಕ್ರಮದ ಸಮಚಾಲಕರಾದ ಮಂದ್ರೀರ ಮೋಹನ್‌ ದಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next