Advertisement

ಸರ್ಕಾರಿ ಶಾಲೆ, ಕಾಲೇಜಿಗೆ ಜೀವಕಳೆ

01:38 PM Mar 15, 2022 | Team Udayavani |

ಮಂಡ್ಯ: ವಾರಪೂರ್ತಿ ಕೆಲಸ ಮಾಡಿ ವಾರದ ಎರಡು ದಿನ ರಜೆಯಲ್ಲಿ ಮೋಜು-ಮಸ್ತಿ ಬಿಟ್ಟು ಸರ್ಕಾರಿ ಶಾಲೆ ಉಳಿಸುವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisement

ಮಂಡ್ಯ ತಾಲೂಕಿನ ತಗ್ಗಹಳ್ಳಿ ಹಾಗೂ ಟಿ.ಮಲ್ಲಿಗೆರೆ ಗ್ರಾಮಗಳ ಸರ್ಕಾರಿ ಶಾಲಾ-ಕಾಲೇಜಿಗೆ ಹೊಸ ರೂಪ ನೀಡಿದ್ದು ಕಣ್ಮನ ಸೆಳೆಯುತ್ತಿವೆ. ಹೂವಿನ ಹೊಳೆ ಪ್ರತಿಷ್ಠಾನ ಹಾಗೂ ಕನ್ನಡ ಮನಸ್ಸುಗಳು ಪ್ರತಿಷ್ಠಾನದಿಂದ ಬೆಂಗಳೂರಿನ ವಿವಿಧ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ ಮಂಜು ಹಾಗೂ ಚಿನ್ಮಯ್‌ ಭಟ್‌ ನೇತೃತ್ವದ 150ಕ್ಕೂ ಹೆಚ್ಚು ಜನರ ಸ್ವಯಂ ಸೇವಕರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಈ ತಂಡದಲ್ಲಿ ಕಲಾವಿದರು, ಪ್ರಾಧ್ಯಾಪಕರು, ಉಪನ್ಯಾಸಕರು ಕೈಜೋಡಿಸಿರುವುದು ವಿಶೇಷ. ತಗ್ಗಹಳ್ಳಿ ಗ್ರಾಮದ ಸರ್ಕಾರಿ ಪಿಯು ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ, ಟಿ.ಮಲ್ಲಿಗೆರೆ ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆ ಅಭಿವೃದ್ಧಿಗೆ ದತ್ತು ಪಡೆದುಕೊಂಡಿದ್ದಾರೆ. ಈಗಾಗಲೇ ಎರಡು ಶಾಲಾ- ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿ ದ್ದಾರೆ. ಶೌಚಾಲಯ, ಕುಡಿವ ನೀರು ಪೂರೈಕೆ, ವಿದ್ಯುತ್‌, ಶಿಥಿಲಗೊಂಡಿರುವ ಕಟ್ಟಡ ದುರಸ್ತಿಗೊಳಿಸಿದ್ದಾರೆ. ಅಲ್ಲದೆ, ಬಣ್ಣದ ಕಾರ್ಯವೂ ಭರದಿಂದ ಸಾಗಿದೆ.

ಹಳೆ ವಿದ್ಯಾರ್ಥಿ ಮಂಜು ಮಾದರಿ: ಟಿ.ಮಲ್ಲಿಗೆರೆ ಗ್ರಾಮದ ಮಂಜು ಎಂಬ ವಿದ್ಯಾರ್ಥಿ ತನ್ನ ಹುಟ್ಟೂರು ಶಾಲೆ ಅಭಿವೃದ್ಧಿಗೆ ತಾನು ಕೆಲಸ ಮಾಡುತ್ತಿರುವ ಇಸಿಐ ಕಂಪನಿಯಿಂದಲೇ ಸುಮಾರು 11 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿ ಶಾಲೆ ಅಭಿವೃದ್ಧಿಗೆ ಮುಂದಾಗಿದ್ದಾರೆ. ಮಂಜು ಟಿ.ಮಲ್ಲಿಗೆರೆ ಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ತಗ್ಗಹಳ್ಳಿ ಗ್ರಾಮದ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ. ಅದರಂತೆ ಹುಟ್ಟೂರಿನ ಋಣ ತೀರಿಸಲು ಶಾಲೆಯನ್ನು ಅಭಿವೃದ್ಧಿಪಡಿಸಲು ಕಂಕಣ ತೊಟ್ಟಿದ್ದಾರೆ.

ಕಾಲೇಜಿಗೆ ಲ್ಯಾಬ್‌: ತಗ್ಗಹಳ್ಳಿ ಪಿಯು ಕಾಲೇಜಿಗೆ ಇದುವರೆಗೂ ವಿಜಾnನ ವಿಭಾಗಕ್ಕೆ ಲ್ಯಾಬ್‌ ಇರಲಿಲ್ಲ. ಆದರೆ, ಸ್ವಯಂ ಸೇವಕರ ತಂಡ ಮೂರು ಲ್ಯಾಬ್‌ ನಿರ್ಮಾಣ ಮಾಡಿದ್ದು, ಅಗತ್ಯ ಪರಿಕರ ಒದಗಿಸಿದ್ದಾರೆ. ಅಲ್ಲದೆ, ಕಾಲೇಜಿಗೆ ಬೇಕಾದ ಪೀಠೊಪಕರಣ, ವಿದ್ಯುತ್‌, ಕೊಳವೆ ಬಾವಿಗೆ ಮೋಟಾರ್‌ ಅಳವಡಿಕೆ, ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ದುರಸ್ತಿ, ಹಳೆಯದಾಗಿದ್ದ ಕಿಟಕಿ, ಬಾಗಿಲು ತೆಗೆದು ಹೊಸದಾಗಿ ಅಳವಡಿಸಿದ್ದಾರೆ. ಶಾಲಾ-ಕಾಲೇಜಿನ ಕಾಂಪೌಂಡ್‌, ಗೇಟ್‌ ಸೇರಿದಂತೆ ಎಲ್ಲಾ ಕಟ್ಟಡಕ್ಕೂ ಸಂಪೂರ್ಣ ಬಣ್ಣ ಹಚ್ಚಲಾಗಿದ್ದು, ಹೊಸತರಂತೆ ಕಂಗೊಳಿಸುವಂತೆ ಮಾಡಿದ್ದಾರೆ.

Advertisement

ಗೋಡೆಗಳ ಮೇಲೆ ಚಿತ್ರಕಲೆ: ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಶಾಲಾ-ಕಾಲೇಜಿನ ಗೋಡೆಗಳ ಮೇಲೆ ವಿವಿಧ ಗಣ್ಯರ ನಾಯಕರು, ಕವಿಗಳು, ಶಿಕ್ಷಣಕ್ಕೆ ಸಂಬಂ ಸಿದಂತೆ ಚಿತ್ರಕಲೆ ಬಿಡಿಸಿದ್ದಾರೆ. ಇದರಿಂದ ಎರಡು ಶಾಲಾ-ಕಾಲೇಜುಗಳ ಸೌಂದರ್ಯ ಇಮ್ಮಡಿಯಾಗಿದೆ. 22ಕ್ಕೂ ಹೆಚ್ಚು ಶಾಲೆ ಅಭಿವೃದ್ಧಿ: ಇದುವರೆಗೂ ಈ ತಂಡ ರಾಜ್ಯಾದ್ಯಂತ 12 ಅಭಿಯಾನ ನಡೆಸಿ ಸುಮಾರು 22ಕ್ಕೂ ಹೆಚ್ಚು ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿವೆ. ಮಂಡ್ಯ ಜಿಲ್ಲೆಯಲ್ಲಿ 4 ಶಾಲೆ ಅಭಿವೃದ್ಧಿಪಡಿಸಿವೆ. ತಗ್ಗಹಳ್ಳಿ ಹಾಗೂ ಟಿ.ಮಲ್ಲಿಗೆರೆ ಗ್ರಾಮದ ಶಾಲಾ-ಕಾಲೇಜಿಗೆ ಇದುವರೆಗೂ 13 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಿದ್ದು ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯಾವುದೇ ಅನುದಾನ ನೀಡಿರಲಿಲ್ಲ : ತಗ್ಗಹಳ್ಳಿ ಹಾಗೂ ಟಿ.ಮಲ್ಲಿಗೆರೆ ಶಾಲಾ-ಕಾಲೇಜು ದುರಸ್ತಿಗೆ ಸರ್ಕಾರ ಅನುದಾನ ನೀಡಿರಲಿಲ್ಲ. ಆದರೆ ಕನ್ನಡ ಮನಸುಗಳು ಹಾಗೂ ಹೂವಿನ ಹೊಳೆ ಪ್ರತಿಷ್ಠಾನದಿಂದ ವಿವಿಧ ಕಂಪನಿಗಳ ಉದ್ಯೋಗಿಗಳು ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಟಿ.ಮಲ್ಲಿಗೆರೆಯ ಹಳೆ ವಿದ್ಯಾರ್ಥಿ ಮಂಜು ಕಂಪನಿ ಹಣ ಹಾಗೂ ತಮ್ಮ ಸ್ವಂತ ದುಡಿಮೆ ಹಣದಲ್ಲಿ ಶಾಲೆ ಅಭಿವೃದ್ಧಿಗೆ ಪಣತೊಟ್ಟಿರುವುದು ಶ್ಲಾಘನೀಯ. ಜತೆಗೆ ಗ್ರಾಮಸ್ಥರು, ಶಾಲಾ-ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆಂದು ಜಿಪಂ ಮಾಜಿ ಅಧ್ಯಕ್ಷರಾದ ತಗ್ಗಹಳ್ಳಿ ವೆಂಕಟೇಶ್‌ ತಿಳಿಸಿದರು.

ನಾನು ಓದಿದ ಶಾಲೆ ಅಭಿವೃದ್ಧಿ ಪಡಿಸಲು ನಾನು ಕೆಲಸ ಮಾಡುತ್ತಿರುವ ಕಂಪನಿಯಿಂದಲೇ ಹಣ ಬಿಡುಗಡೆ ಮಾಡಿಸಿದ್ದೇನೆ. ಅಲ್ಲದೇ, ನನ್ನ ಗ್ರಾಮ ಟಿ. ಮಲ್ಲಿಗೆರೆ ಗ್ರಾಮದ ಶಾಲೆಗೆ ಸ್ವಂತ ಹಣ 1.50 ಲಕ್ಷ ರೂ. ವೆಚ್ಚ ಮಾಡಿದ್ದು ಶಾಲೆಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. – ಮಂಜು, ಟಿ.ಮಲ್ಲಿಗೆರೆ ಗ್ರಾಮ, ಬೆಂಗಳೂರಿನ ಇಸಿಐ ಕಂಪನಿಯ ಉದ್ಯೋಗಿ

ವಾರದ ರಜಾದಿನಗಳಲ್ಲಿ ಮೋಜು, ಮಸ್ತಿ ಮಾಡುವುದನ್ನು ಬಿಟ್ಟು ಸುಮಾರು 150ಕ್ಕೂ ಹೆಚ್ಚು ಜನರ ಸ್ವಯಂ ಸೇವಕರ ತಂಡದೊಂದಿಗೆ ಸರ್ಕಾರಿ ಶಾಲೆ ಉಳಿಸುವ ಅಭಿಯಾನ ಕೈಗೊಂಡಿದ್ದೇವೆ. ಇದುವರೆಗೂ 22ಕ್ಕೂ ಹೆಚ್ಚು ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿ ಮಾಡಿದ್ದೇವೆ. ಈ ಕಾರ್ಯಕ್ಕೆ ಯಾರೂ ಬೇಕಾದರೂ ಕೈಜೋಡಿಸಬಹುದು. ಚಿನ್ಮಯ್‌ ಭಟ್‌, ಕನ್ನಡ ಮನಸುಗಳು ಪ್ರತಿಷ್ಠಾನದ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next