Advertisement

ಜನಪದ ಸಂಸ್ಕೃತಿ ಉಳಿಸಿ, ಬೆಳೆಸಿ

09:05 PM Oct 14, 2019 | Lakshmi GovindaRaju |

ರಾಮನಾಥಪುರ: ಆಧುನಿಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಅಳಿಯಲು ಅವಕಾಶ ನೀಡಬಾರದು ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು. ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿರುವ ವೆಂಕಟೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಜನಪದ ಮೂಲ ಸೊಗಡು: ಜನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ, ಜನಪದ ಸೊಗಡಿನಲ್ಲೇ ಭಾರತೀಯ ಮೂಲ, ಪರಂಪರೆಯ ಸತ್ವ ಅಡಗಿದೆ. ಹಾಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂತಹ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು. ಜನಪದ ಸಂಸ್ಕೃತಿ ಉಳಿಸಿ ಪೋಷಿಸಬೇಕು ಎಂದರು.

ಮಕ್ಕಳಿಗೆ ಜೀವನ ಮೌಲ್ಯ ಕಲಿಸಿ: ರಾಮಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿ ದೇಶಕ್ಕೆ ಮಾತ್ರವಲ್ಲದೇ ಜಗತ್ತಿನ ಮೆಚ್ಚುಗೆಗೆ ಪಾತ್ರವಾದ ಮಹಾಕವಿ. ಶಿಕ್ಷಕರು ಮಕ್ಕಳಿಗೆ ವಿದ್ಯೆ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸಬೇಕು. ಜ್ಞಾನ ಸಂಪಾದಿಸಿದರೆ ಸಕಲ ಸಂಪತ್ತುಗಳನ್ನು ಗಳಿಸಲು ಸಾಧ್ಯ. ಗಿರಿಜನರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳು ಪ್ರಾಮಾಣಿಕವಾಗಿ ಅರ್ಹ ಫ‌ಲಾನುಣವಿಗಳಿಗೆ ತಲುಪುವಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಂಡರೆ ಮಾತ್ರ ಗಿರಿಜನರ ಬದುಕು ಹಸನಾಗಲು ಸಾಧ್ಯ ಎಂದು ಎ.ಟಿ.ರಾಮಸ್ವಾಮಿ ಅವರು ಅಭಿಪ್ರಾಯಪಟ್ಟರು.

ವಾಲ್ಮೀಕಿ ಶ್ರೇಷ್ಠ ಜ್ಞಾನಿ: ಸಾನ್ನಿಧ್ಯ ವಹಿಸಿದ್ದ ತುಮಕೂರು ಶಿಡ್ಲಕೋಣದ ಶ್ರೀ ಸಂಜಯ ಕುಮಾರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಮಹರ್ಷಿ ವಾಲ್ಮೀಕಿ ಅವರೊಬ್ಬ ಮಹನ್‌ ಜ್ಞಾನಿ ಎಂದು 2010 ರಲ್ಲಿ ಪಂಜಾಬ್‌ – ಹರಿಯಾಣ ಹೈಕೋಟ್‌ನಲ್ಲಿ ಮಹತ್ವದ ತಿರ್ಪು ನೀಡಿದೆ. ವಾಲ್ಮೀಕಿ ಮಹರ್ಷಿ ಜೀವನದ ಆರಂಭದಲ್ಲಿ ಕಳ್ಳನಾಗಿರಲಿಲ್ಲ, ಸುಸಂಸ್ಕೃತ ಮನೆತನದಲ್ಲೇ ಹುಟ್ಟಿ ಬೆಳೆದು ದೈವಾಂಶ ಸಂಭೂತರೆನಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿ ವಿಶ್ವವೇ ಬೆರಗಾಗುವಂತೆ ರಾಮಾಯಣ ಮಹಾಕಾವ್ಯ ರಚಿಸಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿನಲ್ಲೆಡೆ ಎತ್ತಿಡಿದ ಮಹಾನ್‌ ಚೇತನ ಎಂದರು. ರಾಜ್ಯ ಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿದ ಅರಕಲಗೂಡು ತಾಲೂಕು ಹೆಗ್ಗಡಿಹಳ್ಳಿಯ ವಿದ್ಯಾರ್ಥಿಗಳಾದ ಎಚ್‌.ಎಸ್‌. ತನುಶ್ರೀ, ಪ್ರೀತಂ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಎಸ್‌.ಆರ್‌. ನಾಗರಾಜ್‌, ಸದಸ್ಯರಾದ ವೀರಾಜ್‌, ದೇವಿಕಾ, ತಹಸೀಲ್ದಾರ್‌ ಶಿವರಾಜ್‌, ಅರಕಲಗೂಡು ಪಪಂ ಮುಖ್ಯಾಧಿಕಾರಿ ಸುರೇಶ್‌ಬಾಬು, ಮುಖಂಡರಾದ ಬಸವನಾಯಕ, ನಾಗಣ್ಣ ನಾಯಕ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ತಿಮ್ಮರಾಜು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಾಧಿಕ್‌ಸಾಬ್‌, ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್‌.ಕುಂಬಾರ, ಮತ್ತಿತರರು ಕಾರ್ಯಕ್ರಮದಲ್ಲಿು ಉಪಸ್ಥಿತರಿದ್ದರು. ಶಿಕ್ಷಕ ಮನು ಸ್ವಾಗತಿಸಿ ವಂದಿಸಿದರು.

Advertisement

ಜನಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ವಿದ್ಯಾರ್ಥಿಗಳು ಗಿರಿಜನ ನೃತ್ಯ ಪ್ರದರ್ಶಿಸಿ ರಂಜಿಸಿದರು. ವಿವಿಧ ಕಲಾವಿದರ ತಂಡಗಳು ಪ್ರಸ್ತುತ ಪಡಿಸಿದ ವಚನ ಗಾಯನ, ಜನಪದ ಗೀತೆಗಳು, ಸುಮಗ ಸಂಗೀತ, ಭರತ ನಾಟ್ಯ, ಭಜನೆ ಮತ್ತು ತತ್ವಪದ, ಗೀಗಿ ಪದಗಳು ಜನಮನ ಸೂರೆಗೊಂಡವು. ಇದಕ್ಕೂ ಮುನ್ನಕಾವೇರಿ ನದಿ ದಂಡೆ ಮೇಲಿರುವ ರಾಮೇಶ್ವರ ದೇವಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಶ್ರೀ ಸಂಜಯಕುಮಾರಾನಂದ ಸ್ವಾಮೀಜಿ ಅವರನ್ನು ಹೊತ್ತ ರಥವು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು. ಡೊಳ್ಳುಕುಣಿತ, ವೀರಗಾಸೆ, ಗಾರುಡಿಗೊಂಬೆ, ನಾಸಿಕ್‌ ಡೋಲು, ಕೀಲು ಕುದುರೆ, ಚಿಟ್ಟಿಮೇಳ, ಪೂಜಾಕುಣಿತ ಮೆರವಣಿಗೆಗೆ ಮೆರಗು ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next