Advertisement
ಬೆಂಗಳೂರು: ವೀರ ಸಾವರ್ಕರ್ ಕುರಿತು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕರು ಖಂಡನೆ ಮುಂದುವರಿಸಿದ್ದಾರೆ. ಇದೇ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಸಚಿವ ಸಿ.ಟಿ.ರವಿ ನಡುವೆ ಶನಿವಾರ ಟ್ವೀಟ್ ಸಮರದ ಮೂಲಕ ಜಟಾಪಟಿ ನಡೆಯಿತು.
Related Articles
Advertisement
“ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎನ್ನುವ ಮೂಲಕ ತಮಗೆ ಮಾನಸಿಕ ಅಸ್ವಸ್ಥತೆ ಇರುವುದನ್ನು ಸಿದ್ದರಾಮಯ್ಯನವರು ಸಾಬೀತುಪಡಿಸಿದ್ದಾರೆ. ಈ ಮಹಾನುಭಾವರು ಅಧಿಕಾರದಲ್ಲಿ ಮುಂದುವರಿದಿದ್ದರೆ ಕುಡುಕರಿಗೆ, ಕೊಲೆಗಡುಕರಿಗೆ ಮತ್ತು ಸಮಾಜಘಾತುಕರಿಗೆ ತಮ್ಮ ಕಯ್ನಾರೆ ರಾಜ್ಯೋತ್ಸವ ಪ್ರಶಸ್ತಿಯನ್ನು ದಯ ಪಾಲಿಸುತ್ತಿದ್ದರೋ ಏನೋ?’.
ಸಿದ್ದು ಪ್ರತಿ ಟ್ವೀಟ್: “ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತನಾಡುತ್ತೇವೆ’.
ಸಿದ್ದುಗೆ ಸಿ.ಟಿ.ರವಿ ಸವಾಲಿನ ಟ್ವೀಟ್: “ಕಂಠಪೂರ್ತಿ ಕುಡಿದು, ವಾಹನ ಚಲಾಯಿಸಿ ಕೊಲೆ ಮಾಡಿದವರ ಕುರಿತು ನೀವು ಇಷ್ಟೊಂದು ಮಾತನಾಡುತ್ತಿರುವುದನ್ನು ನೋಡಿದರೆ ಅವರು ನಿಮ್ಮ ಆಪ್ತ ಬಳಗವೇ ಇರಬೇಕು. ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತಹ ಮಹಾಕ್ರೂರಿಗಳ ಇತಿಹಾಸ ಓದುವುದರ ನಡುವೆ, ವಿದೇಶದಲ್ಲಿ ಕುಡಿದು ಸತ್ತವರ ಕುರಿತು ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ’.
“ಪ್ರೀತಿಯ ಸಿದ್ದರಾಮಯ್ಯ ಅವರೇ, ಗಾಂಧೀಜಿಯವರು ಸಾವರ್ಕರ್ ಅವರನ್ನು ಭಾರತದ ನಂಬಿಕಸ್ತ ಪುತ್ರ ಎಂದು ಕರೆದಿದ್ದು, “ಯಂಗ್ ಇಂಡಿಯಾ’ದಲ್ಲಿ ಈ ಪ್ರತಿಭೆಯನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಬರೆದಿದ್ದಾರೆ. ಸಾವರ್ಕರ್ ಅವರ ವಿಚಾರ ಕುರಿತು ಬಹಿರಂಗ ಚರ್ಚೆ ನಡೆಸಲು ನಿಮಗೆ ಸವಾಲು ಹಾಕುತ್ತೇನೆ. ಪಲಾಯನ ರಾಜಕಾರಣದ ಬದಲಿಗೆ ನನ್ನೊಂದಿಗೆ ಚರ್ಚಿಸುವ ಧೈರ್ಯ ತೋರಿಸಿ’.
ಹಿಂದೂ ಮಹಾಸಭಾ ಮೂಲಕ ದೇಶದಲ್ಲಿ ಹಿಂದುತ್ವ ಎಂಬ ಪದ ಹುಟ್ಟುಹಾಕಿದ ಸಾವರ್ಕರ್‌ಗೆ ಭಾರತ ರತ್ನ ಕೊಡಲು ಹೊರಟಿರುವುದು ಸರಿಯಲ್ಲ. ಸಾವರ್ಕರ್ ಜೈಲಿಗೆ ಹೋಗಿರಬಹುದು, ಇಲ್ಲ ಅನ್ನಲ್ಲ. ಆದರೆ, ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿದ್ದ ಅವರನ್ನು ಸಾಕ್ಷ್ಯ ಇಲ್ಲ ಎಂದು ಬಿಟ್ಟಿರಬಹುದು.-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ ಸಾವರ್ಕರ್ ಅವರನ್ನು 48 ವರ್ಷಗಳ ಕಠಿಣ ಶಿಕ್ಷೆ ನೀಡಿ ಜೈಲಿಗೆ ಹಾಕಲಾಗಿತ್ತು. ಬ್ರಿಟಿಷರೊಂದಿಗೆ ಕೈಜೋಡಿಸಿದ್ದರೆ ಇವರಿಗೆ ಒಳ್ಳೆಯ ಸತ್ಕಾರ ಮಾಡುತ್ತಿದ್ದರು.ಕ್ರಾಂತಿಕಾರಿ ಹೋರಾಟ ಮಾಡಿದವರನ್ನು ಅವಮಾನ ಮಾಡು ವುದು ಸಿದ್ದರಾಮಯ್ಯ ನವರಿಗೆ ಶೋಭೆ ತರಲ್ಲ. ಕಾಂಗ್ರೆಸ್‌ನವರು ಗಾಂಧಿ, ನೆಹರು ಮಾತ್ರ ಸ್ವಾತಂತ್ರ ತಂದು ಕೊಟ್ಟವರು ಎಂದು ಇತಿಹಾಸ ತೋರಿ ಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ, ಸಾವರ್ಕರ್ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ.
-ಸಿ.ಟಿ.ರವಿ ಸಚಿವ ಸಿದ್ದು “ಕೈ’ ತೊರೆದರೂ ಅಚ್ಚರಿಯಿಲ್ಲ: ರೇಣುಕಾಚಾರ್ಯ
ಹೊನ್ನಾಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೂ ಅಚ್ಚರಿಯಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯಗೆ ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಮೂಲ ಕಾಂಗ್ರೆಸ್ಸಿಗರು ಅವರನ್ನು ನಂಬುತ್ತಿಲ್ಲ. ಅವರ ಧೋರಣೆ, ಆಲೋಚನೆಗಳನ್ನು ವಿರೋ ಧಿಸುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಅಚ್ಚರಿ ಇಲ್ಲ ಎಂದರು. ಸಿದ್ದು ಕ್ಷಮೆಯಾಚಿಸಲಿ: ವೀರ ಸಾವರ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು. ಸಾವರ್ಕರ್ ದೇಶ ಭಕ್ತ. ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ. ಅಂಥ ಮಹನೀಯರ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಬೇಕು. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಧೀಮಂತ ವ್ಯಕ್ತಿಗಳನ್ನು ಬಿಜೆಪಿ ಗೌರವಿಸುತ್ತದೆ. ಆದರೆ, ಕಾಂಗ್ರೆಸ್ ಟಿಪ್ಪು ಜಯಂತ್ಯುತ್ಸವ ಆಚರಿಸಿ ಮತಾಂಧರನ್ನು ವಿಜೃಂಭಿಸುವಂತೆ ಮಾಡಿತ್ತು. ಆಗ ಇದೇ ಸಿದ್ದರಾಮಯ್ಯ ಏನು ಮಾಡುತ್ತಿದ್ದರು. ವೀರ ಸಾವರ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಸಿದ್ದಗಂಗಾ ಶ್ರೀಗಳಿಗೆ ಪ್ರಶಸ್ತಿ ಕೊಡಲಿ
ಕೊಪ್ಪಳ: ದೇಶದಲ್ಲಿ ವೀರ ಸಾವರ್ಕರ್‌ಗೆ “ಭಾರತ ರತ್ನ’ ಕೊಡುವ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಅವರಿಗೆ ಭಾರತ ರತ್ನ ಕೊಡೋದು, ಗೋಡ್ಸೆಗೆ ಕೊಡೋದು, ಎರಡೂ ಒಂದೇ ಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ನೀರಲಗಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, 110 ವರ್ಷಗಳ ಕಾಲ ಬಾಳಿ, ಮಕ್ಕಳಿಗಾಗಿಯೇ ಜೀವನ ಮುಡುಪಾಗಿಟ್ಟ, ಲಿಂ|ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡೋದು ಯೋಗ್ಯ. ಆದರೆ, ಸಾವರ್ಕರ್‌ಗೆ ಭಾರತ ರತ್ನ ಕೊಡುವ ವಿಚಾರ ಹೆಚ್ಚು ಪ್ರಸ್ತುತದಲ್ಲಿರುವುದು ನಿಜಕ್ಕೂ ವಿಷಾದನೀಯ ಸಂಗತಿ ಎಂದು ಹೇಳಿದರು. ಇತಿಹಾಸ ಓದಿ ಮಾತನಾಡಬೇಕೆಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ನಾಯಕರು ಇತಿಹಾಸ ಓದಿಯೇ ಪ್ರತಿಕ್ರಿಯಿಸಿದ್ದಾರೆ ಎಂದರು. ಸಿದ್ದು ಸಿಎಂ ಆಗಿದ್ದು ನಾಡಿನ ದೌರ್ಭಾಗ್ಯ
ಕಾರವಾರ: ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದು ಈ ನಾಡಿನ ದೌರ್ಭಾಗ್ಯ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕುಡಿಯಲ್ಲ. ವಾಹನ ಚಾಲನೆ ಬಿಟ್ಟು 20 ವರ್ಷಗಳಾದವು. ನಾನು ಅಪಘಾತ ಮಾಡಿದ್ದೇನೆಂದು ಅವರು ಹೇಳಿದ್ದರೆ ಅದು ಸರಿಯಲ್ಲ. ಅಪಘಾತ ಕೊಲೆಯಲ್ಲ, ಉದ್ದೇಶಪೂರ್ವಕವೂ ಅಲ್ಲ. ಚಾಲಕ ಮಾಡಿದ ತಪ್ಪಿಗೆ ಸಹ ಪ್ರಯಾಣಿಕ ಹೊಣೆಗಾರನಲ್ಲ’ ಎಂದರು. “ಸಿದ್ದರಾಮಯ್ಯ ಕಾನೂನು ಓದಿದ್ದು ವ್ಯರ್ಥ. ಅವರು ಕಾನೂನು ತಿಳಿಯಬೇಕು. ಟೋಲ್‌ಗೇಟ್ ಫೂಟೇಜಸ್ ತೆಗೆದು ನೋಡಲಿ. ಸುಮ್ಮನೆ ಆಪಾದನೆ ಮಾಡೋದು ಸರಿಯಲ್ಲ. ನಾನು ಚಲಿಸುತ್ತಿದ್ದ ವಾಹನದಲ್ಲಿದ್ದೆ. ಚಾಲಕ ಅಪಘಾತ ಮಾಡಿದ್ದಾನೆ. ಮಾನವೀಯತೆ ದೃಷ್ಟಿಯಿಂದ ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನೆರವು ನೀಡಿದ್ದೇನೆ’ ಎಂದು ಹೇಳಿದರು.