ತಿರುವನಂತಪುರಂ: ವೀರ ಸಾವರ್ಕರ್ ವಿರುದ್ಧ ಸದಾ ಕಿಡಿಕಾರುತ್ತಾ ಬಂದಿರುವ ಕಾಂಗ್ರೆಸ್ ಈಗ ಅದೇ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದಿದೆ!
ಹೌದು. ಕೇರಳದ ಎರ್ನಾಕುಳಂನ ಅಲುವಾ ನಗರದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ಹಾಕಲಾಗಿದ್ದು, ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳೊಂದಿಗೆ ಸಾವರ್ಕರ್ ಫೋಟೋವೂ ಇದ್ದಿದ್ದು, ಹಲವು ಚರ್ಚೆಗೆ ಕಾರಣವಾಗಿದೆ.
ಈ ಪೋಸ್ಟರ್ ವಿಚಾರ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಅದನ್ನು ಮುಚ್ಚಿಡುವ ಪ್ರಯತ್ನ ಮಾಡಿದೆ. ಸಾವರ್ಕರ್ ಫೋಟೋ ಇದ್ದ ಜಾಗಕ್ಕೆ ಮಹಾತ್ಮ ಗಾಂಧಿ ಫೋಟೋ ಹಚ್ಚಿ, ಅದೂ ಸರಿಹೋಗದ ಹಿನ್ನೆಲೆ ಪೋಸ್ಟರ್ ಅನ್ನೇ ತೆರವುಗೊಳಿಸಿದೆ. ಮುದ್ರಣದಲ್ಲಾದ ದೋಷದಿಂದ ಈ ಸಮಸ್ಯೆಯಾಗಿದೆ. ಸ್ಥಳೀಯ ಕಾರ್ಯಕರ್ತರು ಆನ್‌ಲೈನ್ ಫೋಟೋಗಳನ್ನು ತೆಗೆದುಕೊಂಡು ಅದನ್ನು ಮರುದೃಢೀಕರಿಸದೇ ಪೋಸ್ಟರ್ ಮಾಡಿಸಿದ್ದರಿಂದ ಹೀಗಾಗಿದೆ ಎಂದು ಪಕ್ಷ ಹೇಳಿದೆ.
ಈ ವಿಚಾರದಲ್ಲಿ ಬಿಜೆಪಿ ಪ್ರತಿಕ್ರಿಯಿಸಿದ್ದು, “ಈಗಲಾದರೂ ರಾಹುಲ್‌ಗೆ ಬುದ್ಧಿ ಬಂದಿತಲ್ಲ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎನ್ನುವ ವಿಚಾರ ತಡವಾಗಿಯಾದರೂ ಅರ್ಥವಾಯಿತಲ್ಲ’ ಎಂದು ಹೇಳಿದೆ.
ಸಚಿನ್ ಪೈಲೆಟ್ ಸಾಥ್
ರಾಹುಲ್ ಗಾಂಧಿ ಅವರ 14ನೇ ದಿನದ ಭಾರತ್ ಜೋಡೋ ಯಾತ್ರೆ ಬುಧವಾರ ಬೆಳಗ್ಗೆ ಕೇರಳದ ಕೊಚ್ಚಿಯ ಮದವನದಿಂದ ಆರಂಭವಾಗಿ, ಪರವೂರು ಜಂಕ್ಷನ್ ಬಳಿ ಅಂತ್ಯವಾಯಿತು. ರಾಹುಲ್‌ಗೆ ಪಕ್ಷದ ಹಿರಿಯ ನಾಯಕ ಸಚಿನ್ ಪೈಲಟ್ ಕೂಡ ಸಾಥ್ ಕೊಟ್ಟಿದ್ದರು.