Advertisement

ಸವಣೂರು ಜಂಕ್ಷನ್‌: ಸಾರ್ವಜನಿಕ ಶೌಚಾಲಯಕ್ಕೆ ಜಾಗವೇ ಇಲ್ಲ !

06:29 AM Feb 15, 2019 | Team Udayavani |

ಸವಣೂರು : ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮ ವ್ಯಾಪ್ತಿಯನ್ನೊಳಗೊಂಡ ಸವಣೂರು ಗ್ರಾಮ ಪಂಚಾಯತ್‌ನ
ಪ್ರಮುಖ ಪೇಟೆ ಸವಣೂರು ಜಂಕ್ಷನ್‌ ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇಲ್ಲಿ ಶೌಚಾಲಯ ನಿರ್ಮಿಸಲು ಸರಕಾರಿ ಜಾಗವೇ ಇಲ್ಲ ಎನ್ನಲಾಗುತ್ತಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸವಣೂರಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ.

Advertisement

ಸವಣೂರು ಸುತ್ತಮುತ್ತಲ ಊರಿನವರಿಗೆ ಕೇಂದ್ರ ಸ್ಥಾನವಾಗಿದೆ. ದರ್ಬೆ-ಮಂಜೇಶ್ವರ ಹೆದ್ದಾರಿ ಸವಣೂರಿನಿಂದಲೇ ಹಾದು ಹೋಗಿದೆ. ಮಾಡಾವು, ಕುಂಬ್ರ, ಬೆಳ್ಳಾರೆ ಕಡೆಯಯಿಂದ ಆಲಂಕಾರು ಮೊದಲಾದೆಡೆ ತೆರಳಲು, ಪುಣ್ಚಪ್ಪಾಡಿ, ಪಾಲ್ತಾಡಿ ಭಾಗದದಿಂದ ಪುತ್ತೂರು, ಆಲಂಕಾರು, ಕಾಣಿಯೂರು, ಕಡಬ ಪ್ರದೇಶಗಳಳಿಗೆ ಹೋಗಲು ಸವಣೂರು ಜಂಕ್ಷನ್‌ ಆಗಿದೆ. ಪುರುಷರಕಟ್ಟೆ ಮಾರ್ಗವಾಗಿ ಬೆಳ್ಳಾರೆಗೆ ಹೋಗಲು ಸವಣೂರಿಗೆ ಬರಲೇ ಬೇಕು. ಹೀಗೆ ವಿವಿಧೆಡೆಗಳಿಗೆ ಸಂಪರ್ಕ ಕಲ್ಪಿಸುವ ಸವಣೂರು ಜಂಕ್ಷನ್‌ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎನ್ನುವ ಹಲವು ದಶಕಗಳ ಬೇಡಿಕೆ ಈಡೇರಿಲ್ಲ.

ನಿರ್ಮಾಣಕ್ಕೇನು ತೊಡಕು?
ಸವಣೂರು ಮುಖ್ಯಪೇಟೆಗೆ ಹೊಂದಿಕೊಂಡಂತೆ ಕೆಲವೊಂದು ಆಯಕಟ್ಟಿನ ಸ್ಥಳಗಳಲ್ಲಿ ಸರಕಾರಿ ಜಾಗ ಇಲ್ಲದೇ ಇರುವುದು ಶೌಚಾಲಯ ನಿರ್ಮಾಣ ಬಾಕಿಯಾಗಲು ಕಾರಣ ಎನ್ನುವ ಮಾಹಿತಿ ಇದೆ. ಸವಣೂರು ಪೇಟೆಯ ರಸ್ತೆಯ ಬದಿ ಲೋಕೋಪಯೋಗಿ ಇಲಾಖೆಗೆ ಒಳಪಡುತ್ತಿರುವುದರಿಂದ ಅಲ್ಲೂ ಶೌಚಾಲಯ ಕಟ್ಟಿಸುವಂತಿಲ್ಲ. ರಸ್ತೆ ಬದಿಯಲ್ಲಿ ಸರಕಾರಿ ಜಾಗದ ಕೊರತೆ ಇದೆ. ಈ ಕಾರಣಕ್ಕೆ ಶೌಚಾಲಯ ನಿರ್ಮಾಣ ಕಾರ್ಯ ನಡೆದಿಲ್ಲ ಎಂದು ಗ್ರಾ.ಪಂ.
ಮೂಲಗಳು ಮಾಹಿತಿ ನೀಡಿದೆ.

ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡಲು ಸರಕಾರ ಸಿದ್ಧವಿದ್ದು, ಜಾಗಕ್ಕೆ ಕೊರತೆ ಇದೆ ಎನ್ನುವುದು ಗ್ರಾ.ಪಂ. ಅಧಿಕಾರಿಗಳ ಉತ್ತರ.

ಗ್ರಾ.ಪಂ. ಬಳಿ ಶೌಚಾಲಯ
ನಿರ್ಮಲ ಗ್ರಾಮ ಪುರಸ್ಕಾರದ ಅಡಿಯಲ್ಲಿ ಗ್ರಾ.ಪಂ. ಕಚೇರಿ ಹಿಂಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದನ್ನು ಸಾರ್ವಜನಿಕರು ಬಳಸುತ್ತಿಲ್ಲ. ಈ ಶೌಚಾಲಯವನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು ಎಂದು ಗ್ರಾ.ಪಂ.
ಹೇಳಿದೆ.

Advertisement

ಜಂಕ್ಷನ್‌ನಲ್ಲಿ ಅಗತ್ಯ
ಸವಣೂರು ಜಂಕ್ಷನ್‌ಗೆ ಹೊಂದಿಕೊಂಡಂತೆ ಸಾರ್ವಜನಿಕ ಶೌಚಾಲಯ ಆಗಬೇಕೆನ್ನುವುದು
ಸಾರ್ವಜನಿಕರ ಬೇಡಿಕೆ. ಜತೆಗೆ ಸುಸಜ್ಜಿತ ಬಸ್‌ತಂಗುದಾಣದ ಬೇಡಿಕೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಬಸ್‌ ತಂಗುದಾಣ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ. ಉತ್ಸುಕತೆ ತೋರಿದ್ದರೂ ಜಾಗದ ಕೊರತೆಯಿಂದ ಮೂಲಸೌಕರ್ಯ ಕನಸಾಗಿಯೇ ಉಳಿದುಕೊಂಡಿದೆ.

ಜಾಗದ ಕೊರತೆ ಇದೆ
ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಜಾಗ ಸಿಗುತ್ತಿಲ್ಲ. ಎರಡು ಕಡೆಗಳಲ್ಲಿ ಶೌಚಾಲಯಕ್ಕಾಗಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಆಕ್ಷೇಪ ವ್ಯಕ್ತವಾಗಿದ್ದರಿಂದ ತಟಸ್ಥ ನಿಲುವಿಗೆ ಬರಲಾಗಿದೆ. ಸೂಕ್ತ ಜಾಗ
ದೊರಕಿದರೆ ಶೌಚಾಲಯ ನಿರ್ಮಾಣ ಮಾಡಲಾಗುವುದು.
-ಇಂದಿರಾ ಬಿ.ಕೆ.,
ಅಧ್ಯಕ್ಷರು, ಸವಣೂರು ಗ್ರಾ.ಪಂ.

ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next