Advertisement

ಸುಸಜ್ಜಿತ ಗ್ರಂಥಾಲಯವನ್ನು ಎದುರು ನೋಡುತ್ತಿರುವ ಸವಣೂರು ಗ್ರಾ. ಪಂ.

11:43 AM Oct 14, 2018 | Team Udayavani |

ಸವಣೂರು: ಹಲವು ಜನ ಸಂಪರ್ಕಗಳ ಕೇಂದ್ರವಾಗಿರುವ ಸವಣೂರಿಗೆ ಸುಸಜ್ಜಿತ ಗ್ರಂಥಾಲಯ ಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈಗಿರುವ ಗ್ರಾ.ಪಂ. ಗ್ರಂಥಾಲಯವೂ ತೀರಾ ಚಿಕ್ಕದಾಗಿದ್ದು, ಓದುಗರಿಗೆ ಸಾಕಷ್ಟು ಸ್ಥಳಾವಕಾಶ ಇಲ್ಲ. ಈ ಗ್ರಂಥಾಲಯಕ್ಕೆ ನಿತ್ಯ ಹಲವರು ಭೇಟಿ ನೀಡುತ್ತಿದ್ದು, ಸಾಕಷ್ಟು ಸಂಖ್ಯೆಯ ಸದಸ್ಯರೂ ಇದ್ದಾರೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಗ್ರಂಥಾಲಯವನ್ನು ಸುಸಜ್ಜಿತವಾಗಿ ರೂಪಿಸಬೇಕಿದೆ. ರಾಜ್ಯದ ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ ನೀಡುವ ಪ್ರಸ್ತಾವವೂ ಗ್ರಂಥಾಲಯ ಇಲಾಖೆಯಿಂದ ಸಲ್ಲಿಕೆಯಾಗಿದೆ. ಗ್ರಂಥಾಲಯಗಳಲ್ಲಿ ಪುಸ್ತಕಗಳು ಆನ್‌ಲೈನ್‌ನಲ್ಲೂ ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ. ಗ್ರಾಮೀಣ ಭಾಗದ ಗ್ರಂಥಾಲಯಗಳೂ ಇದಕ್ಕೆ ಸಿದ್ಧಗೊಳ್ಳಬೇಕಿವೆ.

Advertisement

ಓದುಗರ ಸಂಖ್ಯೆ ಹೆಚ್ಚಳ
ಗ್ರಾ.ಪಂ.ನ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಸವಣೂರು, ಬೆಳಂದೂರಿನಲ್ಲಿರುವ ಪದವಿ ಕಾಲೇಜಿನ, ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸಹಿತ ಪುಸ್ತಕ ಪ್ರೇಮಿಗಳು ಈ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹತ್ತಿರದ ಗ್ರಾಮಗಳಾದ ಸರ್ವೆ, ಪುಣ್ಚಪ್ಪಾಡಿ, ಕುದ್ಮಾರು, ಪೆರುವಾಜೆ, ಪಾಲ್ತಾಡಿ, ಸವಣೂರು ಭಾಗಗಳ ಜನರೂ ಈ ಗ್ರಂಥಾಲಯಕ್ಕೆ ಬರುತ್ತಿದ್ದಾರೆ.

ಸಾಮಾನ್ಯನ ವಿಶ್ವವಿದ್ಯಾಲಯ
ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯನ ವಿಶ್ವವಿದ್ಯಾಲಯ. ಸರಕಾರ ಸಾರ್ವಜನಿಕರಲ್ಲಿ ವಿದ್ಯೆ, ಜ್ಞಾನ, ಓದಿನ ಬಗೆಗೆ ಅಭಿರುಚಿ ಬೆಳೆಸಲು ಉದ್ದೇಶಿಸಿ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಿದೆ. ಕರ್ನಾಟಕ ಸರ್ಕಾರ 1965ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ರೂಪಿಸಿ ಸಾರ್ವಜನಿಕ ಗ್ರಂಥಾಲಯಗಳ ಜಾಲದ ಬೆಳವಣಿಗೆಗೆ ಬುನಾದಿ ಹಾಕಿತು. ಈಗ ಎಲ್ಲ ಗ್ರಾ.ಪಂ.ಗಳಲ್ಲೂ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ.

ಏಕೆ ಗ್ರಂಥಾಲಯ?
ಸಾಹಿತ್ಯಾಭಿರುಚಿ, ರಾಜಕೀಯ, ಸಾಮಾಜಿಕ ಆರ್ಥಿಕಪ್ರಜ್ಞೆ ಇವುಗಳನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಈ ವ್ಯವಸ್ಥೆಯ ಮುಖ್ಯ ಗುರಿ. ಎಲ್ಲರಿಗೂ ಸುಲಭ ಮನೋರಂಜನೆ, ಜ್ಞಾನ ಪ್ರದಾನ ಮಾಡುವ ಸಾಮಾಜಿಕ ಶಿಕ್ಷಣವನ್ನು ಮುಂದುವರಿಸುವ ಮತ್ತು ಮಾಹಿತಿ ಪ್ರಸಾರ ಮಾಡುವ ಒಂದು ಜೀವಂತಶಕ್ತಿಯಾಗಿ, ಜನತೆಗೆ ಜ್ಞಾನ, ಸಾಮಾಜಿಕ ಶಿಕ್ಷಣ, ಮಾಹಿತಿ ಪ್ರಸಾರ ಹಾಗೂ ನಿರಂತರ ಕಲಿಕೆಗೆ ಒತ್ತಾಸೆ ನೀಡಿ ಸಾರ್ವಜನಿಕರಿಗೆ ಓದುವ ಸೌಲಭ್ಯ ಒದಗಿಸಿ ಅವರ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಲು ಗ್ರಂಥಾಲಯಗಳು ಕಾರ್ಯ ಮಾಡುತ್ತಿವೆ. ಓದುವ ಸಮುದಾಯದ ಬೇಡಿಕೆ ಗಳನ್ನು ಗಮನದಲ್ಲಿರಿಸಿ ಗ್ರಂಥಾಲಯ ಸಂಪನ್ಮೂಲಗಳನ್ನು ಕ್ರೋಡೀಕರಿಸಲಾಗುತ್ತದೆ.

ಅನುದಾನ ಲಭ್ಯವಿದೆ
ಹಲವು ಜನರಿಗೆ ಜ್ಞಾನಾಭಿವೃದ್ಧಿಗೆ ಪೂರಕವಾಗಿ, ವಿವಿಧ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿರುವ ಸವಣೂರಿನಲ್ಲಿ ಸುಸಜ್ಜಿತ ಗ್ರಂಥಾಲಯ ಅಗತ್ಯವಾಗಿ ನಿರ್ಮಾಣವಾಗಬೇಕೆಂಬುದು ಓದುಗರ ಆಶಯ. ಇದಕ್ಕೆ ಪೂರಕವಾಗಿ ಗ್ರಂಥಾಲಯ ನಿರ್ಮಾಣ ಮಾಡಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ 10 ಲಕ್ಷ ರೂ. ಅನುದಾನ ಲಭ್ಯವಿದೆ. ಇದಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಹೆಸರಿನಲ್ಲಿ ಗ್ರಾ.ಪಂ. ನಿವೇಶನ ಮಾಡಬೇಕು. ಇಲಾಖೆಯ ಹೆಸರಿನಲ್ಲಿ ಜಾಗದ ದಾಖಲೆ ಯಾದ ಬಳಿಕ ಗ್ರಂಥಾಲಯ ಇಲಾಖೆಯಿಂದ ಅನುದಾನ ದೊರಕಲಿದೆ ಎಂದು ಜಿಲ್ಲಾ ಗ್ರಂಥಾಲಯ ಇಲಾಖೆಯ ಅಧಿಕಾರಿ ತಿಳಿಸಿದರು.

Advertisement

ಜಾಗ ಕಾದಿರಿಸುತ್ತೇವೆ
ಸವಣೂರು ಗ್ರಾ.ಪಂ.ಗೆ ಗ್ರಂಥಾಲಯ ಇಲಾಖೆಯ ಹೆಸರಿನಲ್ಲಿ ಜಾಗ ಕಾದಿರಿಸುವಂತೆ ಬೇಡಿಕೆ ಬಂದಿದ್ದು, ಈ ಕುರಿತು ಸಾಮಾನ್ಯ ಸಭೆಯಲ್ಲೂ ಪ್ರಸ್ತಾವಿಸಲಾಗಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಪೂರಕವಾಗಿ ಅವಶ್ಯವಿರುವ ಎಲ್ಲ ಸಹಕಾರಗಳನ್ನು ನೀಡಲು ಗ್ರಾ.ಪಂ. ಬದ್ಧವಾಗಿದೆ.
– ಇಂದಿರಾ ಬಿ.ಕೆ.,
ಅಧ್ಯಕ್ಷರು, ಸವಣೂರು ಗ್ರಾ.ಪಂ

 ಡಿಜಿಟಲ್‌ ಗ್ರಂಥಾಲಯಗಳ ಪ್ರಸ್ತಾವ
ಓದುಗರಿಗೆ ಸುಲಭವಾಗಿ ಪುಸ್ತಕ ತಲುಪಿಸಲು ಗ್ರಾ.ಪಂ., ನಗರ, ಜಿಲ್ಲಾ ಹಾಗೂ ರಾಜ್ಯ ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲು ಬೇಕಾದ ಪ್ರಸ್ತಾವನೆ ಗ್ರಂಥಾಲಯ ಇಲಾಖೆಯಿಂದ ಸರಕಾರಕ್ಕೆ ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ. ಆನಂತರ ಡಿಜಿಟಲ್‌ ಪ್ರಕ್ರಿಯೆ ಆರಂಭವಾಗಲಿದೆ.. ಅನುಮತಿ ಸಿಕ್ಕ ಆರಂಭದಲ್ಲಿ ಇಲಾಖೆಯಲ್ಲಿ ಲಭ್ಯವಿರುವ ಪುಸ್ತಕಗಳನ್ನು ಕ್ಲೌಡ್ ಗೆ ಅಪ್‌ಲೋಡ್‌ ಮಾಡುತ್ತೇವೆ. ಆನಂತರ ಆನ್‌ಲೈನ್‌ನಲ್ಲೇ ಗ್ರಂಥಾಲಯದ ಸದಸ್ಯತ್ವ ನೀಡುವ ವ್ಯವಸ್ಥೆಗೂ ಚಾಲನೆ ನೀಡಲಿದ್ದೇವೆ.
– ಡಾ| ಸತೀಶ್‌ ಕುಮಾರ್‌ ಎಸ್‌.,
ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next