Advertisement

Savanur: ಸರಕಾರಿ ಶಾಲೆಯ 2 ಎಕ್ರೆ ಜಾಗ ಅಡಿಕೆ ತೋಟ

12:47 PM Dec 17, 2024 | Team Udayavani |

ಸವಣೂರು: 1927ರಲ್ಲಿ ಸ್ಥಾಪನೆ ಗೊಂಡು ಇದೀಗ ಶತಮಾನೋತ್ಸವವನ್ನು ಎದುರು ನೋಡುತ್ತಿರುವ ಕಡಬ ತಾಲೂಕಿನ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಎಕ್ರೆ ಜಾಗವೀಗ ಅಡಕೆ ತೋಟವಾಗಿದೆ ಪರಿವರ್ತನೆಯಾಗಿದೆ. ನೆಲವನ್ನು ಸಮತಟ್ಟುಗೊಳಿಸಿ, ಗುಂಡಿ ತೋಡಿ, 751 ಗಿಡಗಳನ್ನು ನೆಡಲಾಗಿದೆ ಮತ್ತು ಅದಕ್ಕೆ ಬೇಕಾದ ನೀರಾವರಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉತ್ತಮ ಆದಾಯ ತರುವ ತೋಟವಾಗಿ ಇದು ಬೆಳೆಯಲಿದೆ.

Advertisement

ಶಾಲೆಯ ಜಾಗದಲ್ಲಿ ತೋಟ ನಿರ್ಮಿಸಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದು ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ. ಶತಮಾನೋತ್ಸವಕ್ಕೆ ಶಾಲೆಗೆ ಏನಾದರೂ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಕೊಡುಗೆ ನೀಡಬೇಕು ಎನ್ನುವ ಉದ್ದೇಶ ಅವರದಾಗಿತ್ತು. ಅದಕ್ಕಾಗಿ ಶಾಲೆಯ ಸ್ವಾವಲಂಬನೆಗೆ ಪೂರಕ ಎಂಬ ನೆಲೆಯಲ್ಲಿ ಅಡಿಕೆ ತೋಟವನ್ನು ರಚಿಸಿ ನೀಡುವ ಸಂಕಲ್ಪ ಮಾಡದ್ದರು.

ಇದು ಸಾವಿರಾರು ಜನರ ದೇಣಿಗೆ ಫ‌ಲ
ಇದು ಯಾರೋ ಹಣ ಕೊಟ್ಟು ಇನ್ಯಾರೋ ನಿರ್ಮಿಸಿದ ಅಡಿಕೆ ತೋಟವಲ್ಲ. ನೂರಾರು ಹಳೆ ವಿದ್ಯಾರ್ಥಿಗಳು ಸೇರಿಕೊಂಡು, ಸಣ್ಣ ಮೊತ್ತದ ಜತೆಗೆ ಪ್ರೀತಿಯನ್ನೂ ಧಾರೆ ಎರೆದು ಕಟ್ಟಿದ, ಈ ಶಾಲೆಯ ಈಗಿನ ಮಕ್ಕಳೂ ಕೈಜೋಡಿಸಿ ನಿರ್ಮಿಸಿದ ತೋಟ.

ಶಾಲೆಯ ಎರಡು ಎಕ್ರೆ ಜಾಗವನ್ನು ಹಸಿರುಗೊಳಿ ಸುವ ಕನಸು ಹೊತ್ತ ಊರ ಜನ ಒಂದೊಂದು ಅಡಿಕೆ ಗಿಡ ನೆಡಲು ತಲಾ ನೂರು ರೂಪಾಯಿಯಂತೆ ಹಸಿರು ದಾನದ ಯೋಜನೆ ಹಾಕಿ ಇದೀಗ 751 ಗಿಡಗಳ ಅಡಿಕೆ ತೋಟವನ್ನು ನಿರ್ಮಾಣ ಮಾಡಿದ್ದಾರೆ.

ಮಕ್ಕಳ ಸಂಖ್ಯೆ ಹೆಚ್ಚಳಕ್ಕೂ ಪ್ರಯತ್ನ
ಈ ಶಾಲೆಯಲ್ಲಿ ಪ್ರಸಕ್ತ 48 ವಿದ್ಯಾರ್ಥಿಗಳಿದ್ದು, ಇಬ್ಬರು ಖಾಯಂ ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲೂ ಹಿರಿಯ ವಿದ್ಯಾರ್ಥಿಗಳ ಸಂಘ ಕಾರ್ಯೋನ್ಮುಖವಾಗಲಿದೆ.

Advertisement

ಹಿರಿಯ ವಿದ್ಯಾರ್ಥಿಗಳ ಮುಂದಾಳತ್ವ
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಡಿ. ಕೃಷ್ಣ ಕುಮಾರ್‌ರೈ, ಊರ ಹಿರಿಯರಾದ ಕೃಷ್ಣ ರೈ ಪುಣcಪ್ಪಾಡಿ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತ್‌ ಸದಸ್ಯ ಗಿರಿಶಂಕರ ಸುಲಾಯ ಇವರ ಮುಂದಾಳತ್ವ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಹರೀಶ್‌ ತೋಟತ್ತಡ್ಕ ನೇತೃತ್ವದಲ್ಲಿ ತೋಟ ನಿರ್ಮಾಣ ನಡೆದಿದೆ.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಎಸ್‌.ಆರ್‌., ಎಸ್‌ಡಿಎಂಸಿ ಅಧ್ಯಕ್ಷರಾದ ರಾಧಾಕೃಷ್ಣ ದೇವಸ್ಯ ಮತ್ತು ಎಲ್ಲ ಸದಸ್ಯರು, ಮುಖ್ಯ ಗುರುಗಳಆದ ರಶ್ಮಿತಾ ನರಿಮೊಗರು ಹಾಗೂ ಶಿಕ್ಷಕರು, ಹಿರಿಯ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರು, ಪೋಷಕರು, ಊರಿನ ಜನರ ಸಹಕಾರದಿಂದ ಈ ಕೆಲಸ ನಡೆದಿದೆ.

ಆರ್ಥಿಕ ಸ್ವಾವಲಂಬನೆಯ ಧ್ಯೇಯ
ಎಲ್ಲ ವಿದ್ಯಾ ಸಂಸ್ಥೆಗಳಿಗೆ ಮಾದರಿಯಾಗುವ, ಶಾಲೆಗೆ ದೀರ್ಘ‌ಕಾಲಿಕ ಪ್ರಯೋಜನವಾಗಬಲ್ಲ ಯೋಜನೆಯನ್ನು ಯಶಸ್ವಿಗೊಳಿಸಿರುವುದು ಸಂತೋಷ ಮತ್ತು ಹೆಮ್ಮೆ ತಂದಿದೆ ಎನ್ನುತ್ತಾರೆ ಪುಣ್ಚಪ್ಪಾಡಿ ತಳಮನೆ ಕೃಷ್ಣ ರೈ. ಪುಣ್ಚಪ್ಪಾಡಿ ಶಾಲೆಗೆ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಬೇಕೆಂಬ ನಿಟ್ಟಿನಲ್ಲಿ ಊರಿನ ಎಲ್ಲರ ಸಹಕಾರದಿಂದ ಅಡಿಕೆ ತೋಟ ನಿರ್ಮಾಣವಾಗಿದೆ ಎಂದು ಗಿರಿಶಂಕರ ಸುಲಾಯ ಹೇಳಿದ್ದಾರೆ. ಇತರ ಶಾಲೆಗಳಿಗೂ ಮಾದರಿಯಾಗಿ ಇರಬೇಕೆಂಬ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ನಡೆಯುತ್ತಿದೆ. ಮುಂದೆಯೂ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹರೀಶ್‌ ತೋಟತ್ತಡ್ಕ ಹೆಮ್ಮೆ ಪಡುತ್ತಾರೆ.

ಶ್ರಮದಾನ ಮತ್ತು ನೀರಿನ ವ್ಯವಸ್ಥೆ
ಜಾಗ ಸಮತಟ್ಟು, ಗುಂಡಿ ತೋಡುವಿಕೆ ಮತ್ತು ಗಿಡಗಳ ನಾಟಿ ಕಾರ್ಯವನ್ನು ಶ್ರಮದಾನದ ಮೂಲಕ ನಡೆಸಲಾಗಿದೆ. ಊರಿನ ಜನರು ಇದರಲ್ಲಿ ಅವಿತರವಾಗಿ ದುಡಿದಿದ್ದಾರೆ. ನೆಟ್ಟಿರುವ ಗಿಡಗಳಿಗೆ ಸವಣೂರು ಗ್ರಾಮ ಪಂಚಾಯತ್‌ ವತಿಯಿಂದ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ. ತಾತ್ಕಾಲಿಕವಾಗಿ ಹಿರಿಯ ವಿದ್ಯಾರ್ಥಿ, ಕಡಬ ಪೊಲೀಸ್‌ ಠಾಣೆಯ ಸಿಬ್ಬಂದಿ ಹರೀಶ್‌ ತೋಟತ್ತಡ್ಕ ಅವರು ನೀರಾವರಿ ವ್ಯವಸ್ಥೆಯ ಸಹಕಾರ ನೀಡುತ್ತಿದ್ದಾರೆ.

ನಮ್ಮೂರ ಶಾಲೆ ಬೆಳಗಬೇಕು
ನಮ್ಮೂರಿನ ಶಾಲೆಯು ಇನ್ನಷ್ಟು ಬೆಳಗಲು ಹಸಿರು ತೋಟದ ಯೋಜನೆ ಹಾಕಿಕೊಂಡು ಸರ್ವರ ಸಹಕಾರದಿಂದ ಯಶಸ್ವಿಯಾಗಿ ನಡೆಸಿದ್ದೇವೆ. ಶಾಲೆಯ ಶತಮಾನೋತ್ಸವದ ನೆನಪಿನಲ್ಲಿ ನಡೆಯಲಿರುವ ಮುಂದಿನ ಎಲ್ಲಾ ಯೋಜನೆಗಳಿಗೆ ಎಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.
-ಕೃಷ್ಣ ಕುಮಾರ್‌ರೈ ಪಿ.ಡಿ., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು

ಇನ್ನಷ್ಟು ಅಭಿವೃದ್ಧಿ ಕೆಲಸ
ಹಸಿರು ತೋಟದ ಯೋಜನೆಯು ಯಶಸ್ಸು ಕಂಡಿದ್ದು ಶತಮಾನೋತ್ಸವದ ನೆನಪಿನಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಯೋಜನೆ ಜಾರಿಯಲ್ಲಿದೆ.
-ರಾಧಾಕೃಷ್ಣ ದೇವಸ್ಯ, ಎಸ್‌.ಡಿ.ಎಮ್‌.ಸಿ. ಅಧ್ಯಕ್ಷರು

ಹೆಮ್ಮೆಯ ಸಂಗತಿ
ಗ್ರಾಮಸ್ಥರ ವಿದ್ಯಾಭಿಮಾನದ ಪುಣ್ಚಪ್ಪಾಡಿ ಜ್ಞಾನ ದೇಗುಲವು ತನ್ನ ಸೃಜನಶೀಲ ಚಟುವಟಿಕೆಗಳೊಂದಿಗೆ ಬೆಳಗುತ್ತಿದೆ. ಇದೀಗ ಶೈಕ್ಷಣಿಕ ಪ್ರೀತಿಯ ಊರವರ ಸಹಕಾರದಿಂದ ಶತಮಾನೋತ್ಸವದ ನೆನಪಿನಲ್ಲಿ ಅಡಿಕೆ ತೋಟ ನಿರ್ಮಾಣಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ.
-ರಶ್ಮಿತಾ ನರಿಮೊಗರು, ಮುಖ್ಯಗುರುಗಳು

-ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next