Advertisement
ಸಾಮಾಜಿಕ ದುಡಿಮೆಯ ಪ್ರಾರಂಭ2022ರ ಜೂನ್ 9ರಂದು ಜನ್ಮ ದಿನದ ಅಮೃತೋತ್ಸವ ಆಚರಿಸಿಕೊಳ್ಳುತ್ತಿರುವ ಸವಣೂರ ಶಿಲ್ಪಿ ರೊಟೇರಿಯನ್ ಕಲ್ಕಾರು ಸೀತಾರಾಮ ರೈ ಸವಣೂರು ಅವರ ಸಾಧನೆಯ ಪಯಣವನ್ನು ಮೆಲುಕು ಹಾಕುವ ಕಾರ್ಯವೇ ಜನ್ಮ ದಿನದ ಅಮೃತ ಮಹೋತ್ಸವದ ಸಡಗರ, ಸಂಭ್ರಮದ ಕಾರ್ಯಕ್ರಮ. ಬಹುಮುಖೀ ಸಾಧಕ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅವರ ದುಡಿಮೆಯ ದಿಟ್ಟ ಹೆಜ್ಜೆಗಳು ಇಡೀ ಸಮಾಜಕ್ಕೆ ಆದರ್ಶ.
ಶೀಂಟೂರು ನಾರಾಯಣ ರೈ ಹಾಗೂ ಯಮುನಾ ದಂಪತಿಯ ಏಳು ಮಕ್ಕಳಲ್ಲಿ 3ನೇಯವರಾದ ಸೀತಾರಾಮ ರೈಗಳು 1948ರಲ್ಲಿ ಜನಿಸಿದವರು. ತಂದೆ ಯೋಧನಾಗಿ ದೇಶಸೇವೆಗೆ ಟೊಂಕ ಕಟ್ಟಿದವರು. ಬಳಿಕ ಶಿಕ್ಷಕನಾಗಿ ಪಾಠ ಬೋಧಿಸುವ ಮೂಲಕ ನೂರಾರು ಮಕ್ಕಳಿಗೆ ಜ್ಞಾನದ ಬೆಳಕು ನೀಡಿದವರು. ಸಂಸ್ಕಾರ, ಸಂಸ್ಕೃತಿಗಳನ್ನು ಆಳವಾಗಿ ಗೌರವಿಸುತ್ತಿದ್ದ ತಂದೆಯ ಶಿಸ್ತು, ಕರ್ತವ್ಯ ಪ್ರಜ್ಞೆಯ ಲೆಕ್ಕಾಚಾರದ ನಿರ್ದಿಷ್ಟ ಬದುಕಿನ ಸಾಧಕ ಗುಣ
ಗಳು ರಕ್ತಗತವಾಗಿ ಅವರಿಗೆ ಬಂದ ಬಳುವಳಿಯಾಗಿದೆ.
ಸವಣೂರಿನ ಯುವಕ ಮಂಡಲದ ಅಧ್ಯಕ್ಷರಾಗಿ ಊರಿನ ಯುವಕರಿಗೆ ಮಾರ್ಗದರ್ಶನ ಮಾಡಿದ್ದರು. ಒಂದು ಊರು ಅಭಿವೃದ್ಧಿಯಾಗುವಲ್ಲಿ ಯುವಕರು ವಹಿಸಬೇಕಾದ ಮಹತ್ವದ ಪಾತ್ರ ಏನು ಎಂಬುದರ ಬಗೆಗೆ ಪಾಠ ಹೇಳಿಕೊಟ್ಟರು. ಯುವಕರ ಸಾಮಾಜಿಕ ಸೇವಾ ಚಟುವಟಿಕೆಗಳ ಜೊತೆಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊದಗಿಸಿ ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣಕ್ಕೂ ಅವಕಾಶ ಕಲ್ಪಿಸಿದರು.
ಹಲವಾರು ದೇವಾಲಯಗಳ ಜೀಣೊìàದ್ಧಾರ, ಬ್ರಹ್ಮಕಲಶ ಕಾರ್ಯಗಳು ರೈಗಳ ಸಾರಥ್ಯದಲ್ಲಿ ಯಶಸ್ವಿ ಯಾಗಿ ನಡೆದಿದ್ದು, ದೈವಗಳಿಗೆ ಗುಡಿ ಗೋಪುರಗಳೂ ನಿರ್ಮಾಣವಾಗಿದೆ. ಸ್ವಂತ ಹಣವನ್ನು ಧಾರ್ಮಿಕ ಕೆಲಸಗಳಿಗೆ ಕೊಡುವ ದಾನಶೂರನಾಗಿ ರೈಗಳು ನಾಡಿನ ಸಂಸ್ಕೃತಿಯ ಸಂರಕ್ಷಣೆಗೆ ಬೊಗಸೆ ತುಂಬ ಪರಿಶ್ರಮವನ್ನೂ ಧಾರೆಯೆರೆದಿದ್ದಾರೆ. ಸವಣೂರಿನ ಯುವಕ, ಯುವತಿ ಮಂಡಲಗಳು ಮತ್ತು ಅಂಬೇಡ್ಕರ್ ಸಂಘಗಳಿಗೆ ಸ್ವಂತ ಕಟ್ಟಡಗಳ ಕೊಡುಗೆ ಕೂಡ ರೈಗಳ ಪರಿಶ್ರಮದ ಫಲವಾಗಿ ದೊರಕಿತ್ತು.
Related Articles
ಡಾ| ಶಿವರಾಮ ಕಾರಂತರ ಆಡೊಂಬಲ ವಾಗಿದ್ದ ಪುತ್ತೂರಿನ ಬಾಲವನದಲ್ಲಿ ಮಕ್ಕಳ ಖುಷಿಗಾಗಿ ಬಾಲವನದ ಅಧ್ಯಕ್ಷರಾಗಿ ರೈಗಳು ಸಾಕಷ್ಟು ಬದಲಾವಣೆಗಳನ್ನು ತಂದ ಸಾಧಕರು. ಅಲ್ಲಿ ನಿರ್ಮಾಣವಾದ ಈಜುಕೊಳ ಅವರ ಕನಸಿನ ಕೂಸು. ಅದರ ನಿರ್ಮಾಣ ಕಾಯಕದಲ್ಲೂ ಅವರು ಮಹತ್ತರ ಪಾತ್ರ ವಹಿಸಿದ್ದರು. ವರ್ಷಕ್ಕೊಂದು ಜನಪದ ಕಲಾವಿದರ ಸಮಾವೇಶವನ್ನು ನಡೆಸಿದ್ದಾರೆ.
Advertisement
ಸತತ 8 ವರ್ಷಗಳ ಕಾಲ ಪುತ್ತೂರಿನ ಬಂಟರ ಸಂಘದ ಅಧ್ಯಕ್ಷರಾಗಿ, ಸಂಘಕ್ಕೆ ಸುಸಜ್ಜಿತ, ಭವ್ಯ ಸಭಾಭವನ ನಿರ್ಮಿಸಿದ್ದು ರೈಗಳ ಸಾಧನೆಯ ಹೆಗ್ಗುರುತು. ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ನೂತನ ಕಟ್ಟಡಗಳ ಕೊಡುಗೆ ನೀಡಿದ್ದು ರೈಗಳ ಪ್ರಾಮಾಣಿಕ ಸೇವಾ ಕಳಕಳಿಗೊಂದು ನಿದರ್ಶನ. ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸ್ವಂತ ನಿವೇಶನ ಮತ್ತು ಕಟ್ಟಡಗಳ ಕೊಡುಗೆಗೂ ಕಾರಣರಾದರು.
ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಪುತ್ತೂರಿನಲ್ಲಿ ಪ್ರಶಾಂತ್ ಮಹಲ್, ಸವಣೂರಿನಲ್ಲಿ ಪದ್ಮಾಂಬ ಸಂಕೀರ್ಣ, ಸಿಂಧೂರ ಸಂಕೀರ್ಣ ಮತ್ತು ಪದ್ಮಾಂಬಾ ಸರ್ವೀಸ್ ಸ್ಟೇಶನ್‌ಗಳ ಸ್ಥಾಪನೆಯ ಮೂಲಕವೂ ಊರಿನ ವಾಣಿಜ್ಯ ಅಭಿವೃದ್ಧಿಯ ಜತೆಗೆ ನೂರಾರು ಮಂದಿಗೆ ಉದ್ಯೋಗದಾತರಾಗಿಯೂ ಗುರುತಿಸಿಕೊಂಡಿದ್ದಾರೆ.ಸವಣೂರು ಪಂಚಾಯತ್ ಸದಸ್ಯನಾಗಿ ನಿಜವಾದ ಗ್ರಾಮಾಭಿವೃದ್ಧಿ ಎಂದರೆ ಹೇಗಿರಬೇಕೆಂಬ ಕಲ್ಪನೆಗೆ ರೈಗಳು ಹೊಸ ಭಾಷ್ಯ ಬರೆದರು. ಸ್ವತ್ಛ ಗ್ರಾಮದ ನಿರ್ಮಾಣಕ್ಕೆ ನೂತನ ಆಯಾಮ ನೀಡಿದ ರೈಗಳು ಶೌಚಾಲಯ ನಿರ್ಮಾಣದಲ್ಲಿ ದಾಖಲೆ ಬರೆದರು. ಸುಗಮವಾದ ರಸ್ತೆಯಿಲ್ಲದ ಒದ್ದಾಡುತ್ತಿದ್ದವರ ಮನೆ ಮನೆಗೂ ಹೊಸ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದರು. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆಗಳ ಮೂಲಕವೂ ಜನರ ಹೃದಯಕ್ಕೆ ಹತ್ತಿರವಾಗಿ ಕುಗ್ರಾಮವನ್ನು ಸುಗ್ರಾಮವಾಗಿ ಬದಲಾಯಿಸಿಬಿಟ್ಟರು. ಅವರು ಯೋಜಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಮ್ಮೇಳನ ದಲ್ಲಿ ಜಾತಿ, ಮತ, ಭೇದವಿಲ್ಲದೆ ಜನ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕಲೆತರು. ಕುಟ್ಟಿ ದೊಣ್ಣೆಯಂತಹ ಜನಪದೀಯ ಕ್ರೀಡೆಗಳಿಗೆ ಮರುಹುಟ್ಟು ನೀಡುವ ಮೂಲಕವೂ ಜನಮನವನ್ನು ಬೆಸೆಯುವ ಮಹತ್ಕಾರ್ಯ ಅವರಿಂದಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಹೊಸ ಸ್ಥಳ ನಿರ್ಮಾಣದಲ್ಲಿಯೂ ಅವರ ದುಡಿಮೆ ಸಂದಿದೆ. ಕೌಟುಂಬಿಕ ಜೀವನ
ಸವಣೂರು ಕೆ. ಸೀತಾರಾಮ ರೈ ಅವರದ್ದು ಸಂತೃಪ್ತ ಕೌಟಂಬಿಕ ಜೀವನ. ಇವರ ಸಹಧರ್ಮಿಣಿ ಕಸ್ತೂರಿಕಲಾ ರೈ ಅವರ ಪ್ರೇರಣೆ ಸೀತಾರಾಮ ರೈಗಳ ಜೀವನ ಸಾಧನೆಯ ಹಿಂದೆ ಇದೆ. ಕಂಪ್ಯೂಟರ್ ಎಂಜಿನಿಯರ್ ಓದಿರುವ ಪುತ್ರ ಮಹೇಶ್ ರೈ, ಸೊಸೆ ಪಲ್ಲವಿ ರೈ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಡಾ| ರಾಜೇಶ್ ರೈ, ಸೊಸೆ ಅಶ್ವಿತಾ ರಾಜೇಶ್ ರೈ, ಮಗಳು ರಶ್ಮಿ ಅಶ್ವಿನ್ ಶೆಟ್ಟಿ, ಅಳಿಯ ಅಶ್ವಿನ್ ಶೆಟ್ಟಿ ವಿದ್ಯಾರಶ್ಮಿ ಸಮೂಹ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಹಾಗೂ ಮೊಮ್ಮಕ್ಕಳಾದ ಇಶಾನ್, ಅಥರ್ವ ಶೆಟ್ಟಿ,ಅವಿ ಎ. ಶೆಟ್ಟಿಯೊಂದಿಗಿನ ಸುಖ ಸಂಸಾರ ಇವರದು. ಕೃಷಿ ಸಾಧಕನಾಗಿ ರೈಗಳು
ಸೀತಾರಾಮ ರೈಗಳು ಸಂಪನ್ನ ಕೃಷಿಕನೂ ಹೌದು. ಇಸ್ರೇಲ್ ದೇಶದ ವಿಶಿಷ್ಟ ಹನಿ ನೀರಾವರಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಹಸಿರಿನ ಮಂದಹಾಸ ಮೂಡಿಸಿ ಫಸಲಿನಲ್ಲೂ ಗೆಲುವು ಸಾಧಿಸಿದವರು. ಅವರ ಕೃಷಿಭೂಮಿಯಲ್ಲಿ ಅಡಕೆ, ತೆಂಗು, ಕಾಳುಮೆಣಸು, ರಬ್ಬರು ಸೇರಿ ಎಲ್ಲ ಬೆಳೆಗಳನ್ನೂ ಬೆಳೆಯುತ್ತಾರೆ. ನಾನು ಊಟ ಮಾಡಲು ಬೇಕಾದಷ್ಟು ಭತ್ತವನ್ನು ನಾನೇ ಬೆಳೆಯಬೇಕು ಎಂಬ ಆಶಯವೂ ಅವರಲ್ಲಿದೆ. ಹಾಗಾಗಿ ತುಳುನಾಡಿನ ಸಾಂಪ್ರದಾಯಿಕ ಭತ್ತದ ವ್ಯವಸಾಯವನ್ನು ಕೈ ಬಿಡಲಿಲ್ಲ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಮಾಡಿ ತಾನು ಕಟ್ಟಿದ ಊರಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರಂತರ ಹಾಲು ಪೂರೈಸಿದ್ದಾರೆ. ಕುರಿ ಸಾಕಣೆಯೂ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ಆಗಸ್ಟ್ 14 ಅವರ ತಂದೆಯವರ ಜನ್ಮದಿನ. ಅಂದು ಜನ್ಮದಾತರ ಸಂಸ್ಮರಣೆಗಾಗಿ ಒಬ್ಬ ಶಿಕ್ಷಕರಿಗೆ ಒಂದು ವರ್ಷ, ಮರು ವರ್ಷ ಒಬ್ಬ ಯೋಧರಿಗೆ ಹೀಗೆ ಸರದಿ ಪ್ರಕಾರ ಗೌರವಾರ್ಪಣೆ ಮಾಡುವ ಸಂಪ್ರದಾಯವನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ. ಶಿಕ್ಷಣ ಶಿಲ್ಪಿಯ ಅತ್ಯಮೋಘ ಸಾಧನೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಶ್ರೇಷ್ಠ ಸಹಕಾರಿ, ಗಡಿನಾಡ ಪ್ರಶಸ್ತಿ ಹೀಗೆ ಸನ್ಮಾನ, ಗೌರವಗಳ ಸರಮಾಲೆಯೇ ಅವರನ್ನು ಅರಸಿ ಬಂದಿವೆ. ಸವಣೂರಿನ ಜನರಿಗಾಗಿ ಒಂದು ಆಸ್ಪತ್ರೆ ತೆರೆಯಬೇಕೆಂಬ ಅವರ ಮನದಾಸೆಗೆ ವಿದೇಶದಲ್ಲಿರುವ ಅವರ ವಿದ್ಯಾಸಂಸ್ಥೆಗಳಲ್ಲಿ ಕಲಿತು ಜೀವನದ ಉನ್ನತಿಗೇರಿದವರೇ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ವಿದ್ಯಾಸಂಸ್ಥೆಗಳ ಕೀರ್ತಿ ಹಿಮಾಚಲದೆತ್ತರ ತಲುಪಿದ್ದರೂ ಅದರ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ಸರಕಾರ ಯಾವುದೇ ನೆರವು ನೀಡಿಲ್ಲವೆಂಬ ವಿಷಾದವೂ ಅವರಲ್ಲಿದೆ. ಆದರ್ಶ ಸಹಕಾರಿಯ ಸ್ಥಾಪನೆ
ತಾನು ಸ್ವತಂತ್ರವಾಗಿ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತನ್ನದೇ ಸ್ವಂತಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪನೆಯನ್ನು 2002ರಲ್ಲಿ ಪುತ್ತೂರಿನಲ್ಲಿ ಮಾಡಿದರು. ಈ ಮೂಲಕ ಒಂದೇ ಸೂರಿನಡಿ ಗ್ರಾಹಕ ಸದಸ್ಯರಿಗೆ ಬಹು ವಿಧದ ಸೌಲಭ್ಯಗಳನ್ನು ದೊರಕಿಸುವಲ್ಲಿ ಸೀತಾರಾಮ ರೈಗಳು ಸಾಧನೆಯ ಗುರಿ ತಲುಪಿದ್ದಾರೆ. ಈಗ ಈ ಸಂಘದ 12 ಶಾಖೆಗಳು ಹರಡಿಕೊಂಡಿವೆ. ರೂ. 100 ಕೋಟಿ ಠೇವಣಿ ಸಂಗ್ರಹದ ದಾಖಲೆ ನಿರ್ಮಿಸಿದೆ. ಅವರೇ ಸ್ಥಾಪನೆ ಮಾಡಿದ ಆದರ್ಶ ವಿವಿದೋದ್ದೇಶ ಸಹಕಾರ ಸಂಘ ಇಂದು ಪುತ್ತೂರಿನಲ್ಲಿ ಆಡಳಿತ ಕಚೇರಿ ಹೊಂದಿಕೊಂಡು ಬೊಳುವಾರು, ಕುಂಬ್ರ, ಪಂಜ, ಸುಳ್ಯ, ವಿಟ್ಲ, ಕಡಬ, ಸುಬ್ರಹ್ಮಣ್ಯ, ಉಜಿರೆ, ಸವಣೂರು, ಸಾಲೆತ್ತೂರು, ಬೆಳ್ಳಾರೆ ಮೊದಲಾದೆಡೆಗಳಲ್ಲಿ ಶಾಖೆಗಳನ್ನು ತೆರೆದಿದೆ. 50 ಮಂದಿಗೆ ನೌಕರಿ ನೀಡಿದೆ. 48 ಕೋಟಿ ರೂ.ಗಳ ಸಾಲ ನೀಡಿದೆ. ನೂರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದೆ. ಮಕ್ಕಳ ಮದುವೆ, ಶಿಕ್ಷಣ ಎಂದು ಬಂದವರಿಗೂ ಕೂಡ ಎರಡು ಲಕ್ಷದ ತನಕ ಶೀಘ್ರವಾಗಿ ಸಾಲ ಕೊಡುವ ಈ ಜನೋಪಯೋಗಿ ಸಂಘದ ಸ್ಥಾಪನೆಯಿಂದ ರೈಗಳು ಅದನ್ನು ಜನರಿಗೆ ಆಪ್ತಗೊಳಿಸಿದ್ದಾರೆ. ಸಹಕಾರ ಕ್ಷೇತ್ರದ
ಸೆಳೆಮಿಂಚು ಸೀತಾರಾಮ ರೈಗಳು
ಸಹಕಾರ ಕ್ಷೇತ್ರ ರೈಗಳ ನೆಚ್ಚಿನ ಕ್ಷೇತ್ರವಾಗಿದೆ. ಅಂತೆಯೇ ಈ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅವರಿಗೆ ಅಚ್ಚಳಿಯದ ಹೆಸರು ತಂದುಕೊಟ್ಟಿದೆ. ಮಡಿಕೇರಿಯ ಸಹಕಾರಿ ತರಬೇತಿ ಕೇಂದ್ರದಲ್ಲಿ ಸೇರಿ ಒಬ್ಬ ಸಹಕಾರಿ ನೌಕರನಾಗಿ ಈ ರಂಗಕ್ಕೆ ಪದಾರ್ಪಣೆ ಮಾಡಿದ ಅವರು ಹಿರಿಯ ಸಹಕಾರಿಯಾಗಿ ಸಾಧನೆಯ ಶಿಖರವೇರಿದ್ದು ಕೌತುಕದ ಕಥೆ. ಸ್ವತಂತ್ರವಾಗಿ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸಬೇಕು ಎಂಬ ಆಕಾಂಕ್ಷೆಯೇ ಅವರನ್ನು ಹುದ್ದೆಗೆ ರಾಜೀನಾಮೆ ನೀಡಿ ಹೊರಬರಲು ಪ್ರೇರಣೆಯೊದಗಿಸಿತು. ರೈಗಳು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸೂಪರ್‌ವೈಸರ್ ಆಗಿ ವೃತ್ತಿರಂಗಕ್ಕೆ ಕಾಲಿಟ್ಟು ದುಡಿದದ್ದು ಹದಿನೆಂಟು ವರ್ಷ. ಸಹಕಾರಿ ಸಂಘಗಳ ಹಲವು ಸಮಸ್ಯೆಗಳಿಗೂ ಅವರು ಆಗ ಲೀಲಾಜಾಲವಾಗಿ ಪರಿಹಾರದ ಉತ್ತರ ಹುಡುಕಿದ್ದು, ಬಳಿಕ ನೌಕರಿಗೆ ರಾಜೀನಾಮೆ ನೀಡಿ ಹೊರಬಂದರು. ಕೆಲವು ಕಾಲ ಬಾವ ಎ.ಜೆ.ಶೆಟ್ಟಿಯವರ ಉದ್ಯಮ ಮತ್ತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆದರೆ ಅವರ ಹೃದಯದಲ್ಲಿ ಸುಪ್ತವಾಗಿದ್ದ ಜನ ಸೇವೆಯ ಆಕಾಂಕ್ಷೆ ಸುಮ್ಮನಿರಲು ಬಿಡಲಿಲ್ಲ. ಅದರಲ್ಲೂ ನಾಲ್ಕಾರು ಗೂಡಂಗಡಿಗಳಿದ್ದ ಸವಣೂರಿನ ಅದೃಷ್ಟರೇಖೆಯನ್ನು ತಾನೇ ಬರೆಯಬೇಕೆಂಬ ಆತುರ, ಕಾತರ ಕೂಡ ಅವರಲ್ಲಿ ಗಾಢವಾಗಿತ್ತು. ಸಮಾಜ ಸೇವೆ ಮಾಡಬೇಕೆಂಬವನಿಗೆ ಸಹಕಾರ ಕ್ಷೇತ್ರಕ್ಕಿಂತ ಹೆಚ್ಚು ಅವಕಾಶ ಬೇರೆಲ್ಲಿದೆ ಎಂಬ ಯೋಚನೆ ಬಂದದ್ದೇ ತಡ ತಾನು ಆಡಳಿತಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸವಣೂರು ಸಿ.ಎ.ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆ ಗೊಂಡು ಸತತ 25 ವರ್ಷಗಳ ಅಧಿಕ ಕಾಲ ಬ್ಯಾಂಕಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು. ಬ್ಯಾಂಕಿನ ಆರ್ಥಿಕ ವ್ಯವಹಾರವನ್ನು ಪ್ರಗತಿಯ ತುತ್ತ ತುದಿಗೇರಿಸಿದರಷ್ಟೇ ಅಲ್ಲ, ಸ್ವಂತ ಕಟ್ಟಡ ಹೊಂದಿ ಅದು ಪೂರ್ಣ ಪ್ರಮಾಣದ ವ್ಯವಹಾರ ಮಾಡು ವಷ್ಟು ಸಬಲಗೊಳಿಸಿದರು. ದ. ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹನ್ನೊಂದು ವರ್ಷ ನಿರ್ದೇಶಕರಾಗಿ ಎರಡು ದಶಕಕ್ಕಿಂತ ಹೆಚ್ಚು ಕಾಲ ಅಧ್ಯಕ್ಷರಾಗಿ ಪರಿವರ್ತನೆಯ ಹರಿಕಾರರಾದರು. ರಾಜ್ಯಮಟ್ಟದಲ್ಲಿ ಅದರ ಪ್ರಗತಿ ಕಣ್ಸೆಳೆಯುವಂತೆ ಮಾಡಿದರು. ಹಾಲು ಉತ್ಪಾದನಾ ಮಹಾಮಂಡಳಿಯ ನಿರ್ದೇಶಕರಾಗಿ ಜಿಲ್ಲೆಯ ಹಳ್ಳಿಹಳ್ಳಿಯಲ್ಲೂ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ತೆರೆಯಲು ಕಾರಣಕರ್ತರಾಗಿ ಜಿಲ್ಲೆಯನ್ನು ಕ್ಷೀರ ವಾರಿಧಿಯಾಗಿ ಮಾಡಿಬಿಟ್ಟರು. ರೈಗಳ ಮುತುವರ್ಜಿಯಿಂದ ಕೈಗೂಡಿದ ಸವಣೂರಿನಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘದ ಹೊಸ ಕಟ್ಟಡ, ನಾಲ್ಕೂವರೆ ಎಕರೆಗಳಲ್ಲಿ ಮೇವಿನ ಬೆಳೆ ವ್ಯವಸಾಯ ಕ್ಷೇತ್ರ ಸವಣೂರಿನ ಇತಿಹಾಸವನ್ನೇ ಬದಲು ಮಾಡಿತು. ರೈಗಳ ಸಹಕಾರ ಕ್ಷೇತ್ರದ ಅನುಭವಗಳ ಕಾಣಿಕೆ ಅವರು ನಿರ್ದೇಶಕರಾಗಿ ಶ್ರಮಿಸಿದ ಪುತ್ತೂರಿನ ಟಿಪಿಸಿಎಂಎಸ್ ಸೇರಿ ಎಲ್ಲ ಸಂಘಗಳ ಜನಹಿತ ಕಾರ್ಯಕ್ರಮಗಳ ಮೂಲಕ ಸಹಕಾರಿ ಕ್ಷೇತ್ರದ ಸಾಫಲ್ಯಕ್ಕೆ ಸಾಕ್ಷ್ಯವಾಯಿತು. ಸೀತಾರಾಮ ರೈಗಳು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ 18 ವರ್ಷಗಳ ಕಾಲ ನಿರ್ದೇಶಕರಾಗಿದ್ದ ಅವಧಿಯಲ್ಲಿ, ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಸ್ಥೆಯನ್ನು ರಾಜ್ಯದಲ್ಲಿ ಮಾದರಿಯಾಗಿ ಗುರುತಿಸುವಂತೆ ಮಾಡಿ ಕೀರ್ತಿ ತಂದರು. ಅನಂತರ ಕರ್ನಾಟಕ ರಾಜ್ಯ ಹಾಲು ಉತ್ಪಾದನಾ ಮಹಾಮಂಡಳಿಯ ನಿರ್ದೇಶಕರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ಜಿಲ್ಲೆಯಲ್ಲಿ ಹಲವು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಆರಂಭಕ್ಕೆ ನಾಂದಿ ಹಾಡಿದರು, ಮಂಗಳೂರಿನ ಕೆಎಂಎಫ್ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಬಹುಕಾಲದ ಸೇವೆ ಕರಾವಳಿಯ ಹೈನುಗಾರರಿಗೆ ಸಾಕಷ್ಟು ಅನುಕೂಲಗಳ ಹೆಬ್ಟಾಗಿಲನ್ನೇ ತೆರೆಯಿತು.
1988ರಿಂದ ಹತ್ತು ವರ್ಷಗಳ ಕಾಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿದ್ದಾಗ ಆರು ವರ್ಷ ಉಪಾಧ್ಯಕ್ಷರಾಗಿಯೂ ಸೀತಾರಾಮ ರೈಗಳು ಗಮನಾರ್ಹ ಸಾಧನೆ ಮಾಡಿದ್ದರು. ಸವಣೂರಿನ ರಬ್ಬರ್ ಸೊಸೈಟಿಯ ಅಧ್ಯಕ್ಷರಾಗಿ ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹವಷ್ಟೇ ಅಲ್ಲ, ಸರಕಾರದ ಗರಿಷ್ಠ ಸಹಾಯಗಳೂ ಲಭಿಸಲು ಕಾರಣರಾದರು. ಸವಣೂರು ಮತ್ತು ಪುತ್ತೂರುಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಸ್ವಂತ ನಿವೇಶನ ದೊರಕಿಸಲು ರೈಗಳು ವಹಿಸಿದ ಪಾತ್ರ ಗಮನಾರ್ಹವಾಗಿದೆ. ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕಳೆದ 25 ವರ್ಷಗಳಿಂದ ನಿರ್ದೇಶಕರಾಗಿ, ಮಂಗಳೂರಿನ ಮಾಸ್ ಸಹಕಾರಿ ಸಂಸ್ಥೆಯ ನಿರ್ದೇಶಕರಾಗಿ, ಎಸ್‌ಕೆಎಸಿಎಂಎಸ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆಡಳಿತ ಚತುರರಾಗಿ ಸಹಕಾರಿ ಕ್ಷೇತ್ರದ ಸಮಸ್ಯೆಗಳನ್ನು ತನ್ನ ಕರ್ತವ್ಯ ನೈಪುಣ್ಯತೆಯಿಂದ ಯಶಸ್ವಿಯಾಗಿ ನಿಭಾಯಿಸಿಕೊಂಡು, ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬಂದ ಅವರಿಗೆ ಸಹಕಾರಿ ಕ್ಷೇತ್ರಕ್ಕೆ ಧಾರೆಯೆರೆದ ಗಣನೀಯ ಸೇವೆ ಮತ್ತು ಸಾಧನೆಗಾಗಿ ಕರ್ನಾಟಕ ಸರಕಾರ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.