Advertisement

ಸಾವನದುರ್ಗದತ್ತ ಬಾರದ ಚಾರಣಿಗರು

02:51 PM Jul 01, 2018 | |

ಮಾಗಡಿ: ಚಾರಣಿಗರ ಸ್ವರ್ಗಾ ಎಂದೇ ಕರೆಯಲ್ಪಡುವ ಸಾವನದುರ್ಗದ ಏಕಶಿಲಾ ಬೆಟ್ಟ ಹಾಗೂ ಕೆಂಪೇಗೌಡ ವನಧಾಮ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಪ್ರಾಕೃತಿಕ ಸಂಪತ್ತಿನಿಂದ ಕೂಡಿರುವ ವನಧಾಮದಲ್ಲಿ ಮೂಲ ಸೌಕರ್ಯ ಇಲ್ಲದಿರುವುದರಿಂದ ಅರಣ್ಯ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಹ ಪ್ರವಾಸಿ ತಾಣ ಸಾವನದುರ್ಗ ದಿನೇ ದಿನೇ ಸೊರಗುತ್ತಿದೆ. ವನ್ಯ ಸಂರಕ್ಷಣಾ ಸಮಿತಿ ನಿರ್ದೇಶಿಸಿರುವ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಣ್ಯ ಇಲಾಖೆ ಕಾರ್ಯ ಪ್ರವೃತ್ತರಾಗಬೇಕಿದೆ.

Advertisement

ಈ ಭಾರೀ ಮುಂಗಾರು ಪೂರ್ವ, ಮುಂಗಾರು ಮಳೆಯಾಗುತ್ತಿರುವುದರಿಂದ ಬೆಟ್ಟಗುಡ್ಡಗಳಲ್ಲಿ ನೀರು ಜೋಗ್‌ಫಾಲ್ಸ್‌ ರೀತಿ ಜಿನುಗುತ್ತಿದೆ. ಅದನ್ನು ನೋಡಿ ಆನಂದ ಅನುಭವಿಸಲು ಆಗಮಿಸುವವರಿಗೇನು ಕಡಿಮೆ ಇಲ್ಲ. ಆದರೆ ಇಲ್ಲಿ ಆನಂದದ ಜತೆಗೆ ಅಪಾಯವೂ ಇರುವುದರ ಬಗ್ಗೆ ಅರಿವೂ ಮೂಡಿಸದಿರುವುದು ದುರಂತಗಳಿಗೆ ಎಡೆಮಾಡಿ ಕೊಟ್ಟಿದೆ. ಚಾರಣಿಗರು ಬೆಟ್ಟ ಏರಿ ಕೆಳಗಿಳಿದ ನಂತರ ವಿಶ್ರಾಂತಿ ಪಡೆಯಲು ವನಧಾಮಕ್ಕೆ ತೆರಳುತ್ತಿದ್ದರು. ಆದರೆ ಇಲ್ಲಿ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲದಿರುವುದರಿಂದ ಪ್ರವಾಸಿಗರ ಮತ್ತು ಚಾರಣಿಗರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ.

ಐತಿಹಾಸಿಕ ಹಿನ್ನೆಲೆ: ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗ ಹೆಸರೇ ಹೇಳುವಂತೆ ಈ ನೆಲ ನಿಜಕ್ಕೂ ದುರ್ಗಮಯವಾಗಿಯೇ ಗೋಚರಿಸದೆ ಇರದು. ಎಲ್ಲಿ ನೋಡಿದರೂ ಬೆಟ್ಟಗುಡ್ಡಗಳ ಸಾಲು, ಪ್ರಕೃತಿದತ್ತ ಗಿಡಮರಗಳ ರಮ್ಯ ತಾಣ. ಸುಮಾರು 7 ರಿಂದ 8 ಸಾವಿರ ಎಕರೆ ಪ್ರದೇಶ ಇರುವ ಈ ಕಾನನ ನಡುವೆ ಸಾವನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ.

ಹಲವು ವಿಸ್ಮಯ, ವೈಶಿಷ್ಟ್ಯಗಳನ್ನು ಒಳಗೊಂಡಿರುವ ಏಕಶಿಲಾ ಬೆಟ್ಟಗಳಿಂದ ಕೂಡಿದೆ. ಬಿಳಿ ಬೆಟ್ಟ ಮತ್ತು ಕಪ್ಪು ಕಲ್ಲಿನ ಬೆಟ್ಟ ಎಂದೇ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 4024 ಸಾವಿರ ಅಡಿ ಎತ್ತರವಿರುವ ಈ ಬೆಟ್ಟ ಚಾರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಈ ದುರ್ಗದ ಮಡಿಲಲ್ಲಿ ಶ್ರೀಗಂಧ, ಬೀಟೆ, ತ್ಯಾಗ, ಇತರೆ ಜಾತಿಗಳ ಮರಳು, ಗಿಡಮೂಲಿಕೆಗಳ ವನ ಹೇರಳವಾಗಿದೆ.

ಬೆಟ್ಟದ ಮೇಲೆ ನಂದಿ ವಿಗ್ರಹ: ನಾಡಪ್ರಭು ಕೆಂಪೇಗೌಡ ಸೇರಿದಂತೆ ರಾಜವಂಶಸ್ಥರು ಈ ನೆಲವನ್ನು ಆಳಿದ್ದಾರೆ. ಇಲ್ಲಿನ ನಾಯಕನಪಾಳ್ಯದ ಪಾಳೇಗಾರ ಸಾವನದುರ್ಗದ ಬೆಟ್ಟದ ಮೇಲೆ ಏಳು ಸುತ್ತಿನ ಕಲ್ಲಿನ ಕೋಟೆ ಕಟ್ಟಿದ್ದಾರೆ. ಬೆಟ್ಟದ ಮೇಲೆ ಸುಂದರವಾದ ನಂದಿ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜತೆಗೆ ಗುಡಿ, ಗೋಪುರಗಳು, ಗುರುಮನೆ, ಅರಮನೆಗಳ ಕಟ್ಟಿ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಇಲ್ಲಿನ ಅವಶೇಷಗಳೇ ಕಥೆ ಹೇಳುತ್ತವೆ.

Advertisement

ಉಯ್ನಾಲೆ ಕಂಬ: ಸಾವನದುರ್ಗದಲ್ಲಿನ ಭವರೋಗ ನಿವಾರಕ ಲಕ್ಷ್ಮೀನರಸಿಂಹಸ್ವಾಮಿ ಆಕರ್ಷಣೀಯವಾಗಿದ್ದು, ವೀರಭದ್ರಸ್ವಾಮಿ ದೇವಾಲಯದ ಮುಂದೆ ಬೃಹತ್‌ ದೀಪಸ್ತಂಭ ಮತ್ತು ಉಯ್ನಾಲೆ ಕಲ್ಲು ಕಂಬ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಚೋಳರ ಪ್ರಸಿದ್ಧ ದೊರೆ ಚೋಳರಾಜ ಇಲ್ಲಿನ ಪ್ರಸಿದ್ಧ ಶ್ರೀ ವೀರಭದ್ರಸ್ವಾ ದೇವಾಲಯ ಮತ್ತು ಕಾಶೀಶ್ವೇಶ್ವ ರಸ್ವಾಮಿ ಹಾಗೂ ವೈದ್ಯನಾಥೇಶ್ವರ ಸ್ವಾಮಿ ದೇವಾಲಯ ನಿರ್ಮಿಸಿದ್ದಾರೆ. 

 ಇಮ್ಮಡಿ ಕೆಂಪೇಗೌಡ ಇಲ್ಲಿನ ಕೋಟೆಕೊತ್ತಲುಗಳನ್ನು ದುರಸ್ತಿಪಡಿಸಿ, ದರ್ಬಾರ್‌ ಹಾಲ್‌ ನಿರ್ಮಿಸಿದ್ದರು. ಮೈಸೂರಿನ ಯದುಕುಲವಂಶದ ನಾಲ್ವಡಿ ಕೃಷ್ಣರಾಜು ಒಡೆಯರ್‌ ಶ್ರೀಲಕ್ಷ್ಮೀನರಸಿಂಹಸ್ವಾಮಿ ಮತ್ತು ಪರಕಾಲ ಮಠ ಸೇರಿದಂತೆ ಇನ್ನಿತರ ದೇಗುಲಗಳನ್ನು ಜೀರ್ಣೋದ್ದಾರಗೊಳಿಸಿ ದಾನ,ದತ್ತಿ ನೀಡಿದ್ದಾರೆ. ಒಟ್ಟಾರೆ ಪ್ರವಾಸೋದ್ಯಮ ಇಲಾಖೆ ಇನ್ನು ಮುಂದಾದರೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದ ನೋಡಬೇಕು.  

ಪ್ರವಾಸೋದ್ಯಮ ಇಲಾಖೆ ಸಾವನದುರ್ಗದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಏನೊಂದು ಅಭಿವೃದ್ಧಿಪಡಿಸಿಲ್ಲ. ಇರುವ ಸುಂದರ ತಾಣ ನಿರ್ವಹಣೆ ಇಲ್ಲದೇ ಪ್ರವಾಸಿಗರಿಲ್ಲದೇ ಸೊರಗುತ್ತಿದೆ. ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿಗೆ ಸೂಕ್ತ ಕ್ರಮ ಕೈಕೊಳ್ಳಲುಇ ಮುಂದಾಗಬೇಕಿದೆ.
ನವೀನ್‌, ಮಹೇಶ್‌ ಮತ್ತು ಪರಿಸರ ರಾಮಚಂದ್ರು, ಚಾರಣಿಗರು

ಇಲ್ಲಿನ ಕೆಂಪೇಗೌಡ ವನಧಾಮ ಅಭಿವೃದ್ಧಿಪಡಿಸಿ, ಕಾಡು ಪ್ರಾಣಿ, ಪಕ್ಷಿ ಸಂಕುಲ, ಮಕ್ಕಳ ಆಟಿಕೆಗಳನ್ನು ಅಳವಡಿಸಿ
ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಪ್ರವಾಸೋದ್ಯಮ ಇಲಾಖೆ ಹಾಗೂ ಅಧಿಕಾರಿಗಳು ಗಮನ ಹರಿಸಬೇಕು. 
ಕೃಷ್ಣಮೂರ್ತಿ, ಪರಿಸರ ಪ್ರೇಮಿ ಬೆಂಗಳೂರು

ಸಾವನದುರ್ಗ ಕಾಯಿಟ್ಟ ಅರಣ್ಯ ಪ್ರದೇಶ. ಇಲ್ಲಿ ಅನೇಕ ಜಾತಿಯ ಪ್ರಾಣಿ ಪಕ್ಷಿಗಳ ಸಂಕುಲ ಹಾಗೂ ಗಿಡಮೂಲಿಕೆಗಳ ವನವಿದೆ. ಅನುಮತಿ ಇಲ್ಲದೇ ಕಾಡು ಪ್ರವೇಶ ಮಾಡುವಂತಿಲ್ಲ. ಮೋಜು ಮಸ್ತಿ ಮಾಡಿದರೆ ಶಿಕ್ಷೆಗೆ ಗುರಿಪಡಿಸ ಲಾಗು ವುದು.ದೇವಸ್ಥಾನ ಇರುವುದರಿಂದ ಭಕ್ತರು ಬರುತ್ತಾರೆ. ಅರಣ್ಯ ರಕ್ಷಣೆ ನಮ್ಮ ಕರ್ತವ್ಯಯಾಗಿದ್ದು, ನಾಗರಿಕರ ಪಾತ್ರವು ಮುಖ್ಯವಾಗಿರುತ್ತದೆ.
ತಿಮ್ಮರಾಯಪ್ಪ, ಅರಣ್ಯಾಧಿಕಾರಿ

ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next