Advertisement

ಸೌತಡ್ಕ: ಸೇವಾಧಾಮ ಉದ್ಘಾಟನೆ

01:20 AM Sep 18, 2018 | Karthik A |

ನೆಲ್ಯಾಡಿ: ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ಅಂಗ ಸಂಸ್ಥೆಯಾಗಿ, ಬೆನ್ನು ಮೂಳೆ ಮುರಿತಕ್ಕೊಳಗಾದವರ ಸಾಮಾಜಿಕ ಪುನಶ್ಚೇತನ ಕೇಂದ್ರವಾದ ಸೇವಾಧಾಮ ಇದರ ಉದ್ಘಾಟನೆಯು ಕೊಕ್ಕಡದ ಶ್ರೀಕ್ಷೇತ್ರ ಸೌತಡ್ಕ ದೇವಸ್ಥಾನದ ಎದುರಿನಲ್ಲಿರುವ ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್‌ ನ ಕಟ್ಟಡದಲ್ಲಿ ಸೆ.16ರಂದು ನೆರವೇರಿತು.

Advertisement

ವ್ಹೀಲ್‌ ಚೆಯರ್‌ ಇಂಡಿಯಾ – 2014 ಸಂಸ್ಥೆಯ ದಂತ ವೈದ್ಯರಾದ ಡಾ| ರಾಜಲಕ್ಷ್ಮೀ ಸೇವಾಧಾಮವನ್ನು ಉದ್ಘಾಟಿಸಿ ಮಾತನಾಡಿ, ಕಷ್ಟಗಳು ಮನುಷ್ಯ ಜೀವನದಲ್ಲಿ ಎದುರಾದಾಗ ಅದನ್ನು ಬಗೆ ಹರಿಸುವ ಬಗ್ಗೆ ಯೋಚಿಸಬೇಕೆ ವಿನಾ ಕಷ್ಟಗಳ ಬಗ್ಗೆ ಚಿಂತಿಸುತ್ತ ಕೊರಗಬಾರದು. ಅಪಘಾತಕ್ಕೊಳಗಾಗಿ ಅಂಗವೈಫ‌ಲ್ಯವನ್ನು ಹೊಂದಿದ್ದರೂ ಧೃಢವಾದ ಸಂಕಲ್ಪದೊಂದಿಗೆ ಮತ್ತೆ ಹೊಸ ಜೀವನ ಪಡೆಯಬಹುದು ಅನ್ನುವುದಕ್ಕೆ ನಾನೇ ಸಾಕ್ಷಿ. ಸೇವಾಭಾರತಿ ಸಂಸ್ಥೆಯ ಮೂಲಕ ಸಮಾಜದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಲಗಿದಲ್ಲೇ ಇರುವ ಅಶಕ್ತರಿಗಾಗಿ ಸೇವಾಧಾಮವನ್ನು ಇಂದು ಇಲ್ಲಿ ಆರಂಭಿಸುತ್ತಿರುವುದು ಅವರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸುವಂತಾಗಿದೆ ಎಂದರು.

ಮಾದರಿ
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಸೇವಾಭಾರತಿ ಸಂಸ್ಥೆಯು ಸೌತಡ್ಕ ದಂತಹ ಪುಣ್ಯ ಭೂಮಿಯಲ್ಲಿ ಸೇವಾಕಾರ್ಯದಂತಹ ಪುಣ್ಯ ಕಾರ್ಯಗಳನ್ನು ನಡೆಸಿ ಮಾದರಿಯಾಗಿದೆ ಎಂದರು. ಕರ್ನಾಟಕ ಸರಕಾರದ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಫಿಸಿಯೋಥೆರಪಿ ವಿಭಾಗ ಉದ್ಘಾಟಿಸಿ ಮಾತನಾಡಿ, ವಿನಾಯಕ ರಾವ್‌ ರವರ ನೇತೃತ್ವದಲ್ಲಿ ನಡೆಯುತ್ತಿರುವ ಇಂತಹ ಸೇವಾಕಾರ್ಯಗಳು ದೇವರಿಗೆ ಪ್ರೀತಿ ತರುವ ಪುಣ್ಯ ಕಾರ್ಯಗಳಾಗಿ ರೂಪುಗೊಂಡಿವೆ. ಈ ಭಾಗದ ಹಲವು ಜಿಲ್ಲೆಗಳ ಬೆನ್ನು ಮೂಳೆ ಮುರಿತಕ್ಕೊಳಗಾದ ಸಂತ್ರಸ್ತರಿಗೆ ಈ ಕೇಂದ್ರವು ಆಸರೆಯಾಗಲಿದೆ ಅನ್ನುವುದೇ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಆತ್ಮಸ್ಥೈರ್ಯ
ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ವಿನಾಯಕ ರಾವ್‌ ಕನ್ಯಾಡಿ ಪ್ರಾಸ್ತಾವಿಕ ಮಾತನಾಡಿ, ತ್ಯಾಗ ಮತ್ತು ಸೇವೆ ಭಾರತದ ಆತ್ಮ ಎನ್ನುವ ವಿವೇಕಾನಂದರ ನುಡಿಯ ಆಶಯಗಳನ್ನು ಅಳವಡಿಸಿಕೊಂಡು ಹಲವು ಸಂಘಟನೆಗಳ ಒಗ್ಗೂಡುವಿಕೆಯಿಂದ ಈ ಐದಾರು ಜಿಲ್ಲೆಗಳ ಸುಮಾರು 2,000ಕ್ಕಿಂತಲೂ ಹೆಚ್ಚಿನ ಬೆನ್ನುಮೂಳೆ ಮುರಿತಕ್ಕೊಳಗಾದವರ ಆತ್ಮಸ್ಥೈರ್ಯ ಹಾಗೂ ಧೈಹಿಕ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸೇವೆ ನೀಡುವ ಈ ಸೇವಾಧಾಮವನ್ನು ಸೌತಡ್ಕದಲ್ಲಿ ಆರಂಭಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಹಲವು ತರಬೇತಿಗಳ ಮೂಲಕ ಸಂತ್ರಸ್ತರಿಗೆ ಸಶಕ್ತವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಈ ಸಂಸ್ಥೆಯ ಮೂಲಕ ಪ್ರೇರಣೆ ನೀಡಲಾಗುತ್ತದೆ. ಈ ಸಂಸ್ಥೆಯು ಇಲ್ಲಿ ಕಾರ್ಯ ನಿರ್ವಹಿಸಲು ನಮ್ಮ ಸೇವಾ ಭಾರತಿಯೊಂದಿಗೆ ಇನ್ನಿತರ ಹತ್ತಾರು ಸಂಘ-ಸಂಸ್ಥೆಗಳು ಕೈಜೋಡಿಸಿರುತ್ತವೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಸೌತಡ್ಕದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ, ಫಿಸಿಯೋಥೆರಪಿ ವಿಭಾಗದ ಡಾ| ಸೆಂಥಿಲ್‌ ಕುಮಾರ್‌, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ ನ ಅಧ್ಯಕ್ಷ ಕೆ. ಕೃಷ್ಣ ಭಟ್‌, ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್‌ ಉಪಸ್ಥಿತರಿದ್ದರು. ಪುರಂದರ ರಾವ್‌ ಸ್ವಾಗತಿಸಿ, ಹರೀಶ್‌ ರಾವ್‌ ವಂದಿಸಿದರು. ಡಾ| ಎ. ಜಯರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

ಹೆಮ್ಮೆಯ ವಿಷಯ
ಲೋಕಸಭಾ ಸದಸ್ಯ ನಳಿನ್‌ ಕುಮಾರ್‌ ಕಟೀಲು ಅವರು ವಸತಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಭವಿಷ್ಯತ್‌ ಕಾಲದ ನಿರ್ಮಾಣ  ಕಾರ್ಯವನ್ನು ಸೇವಾಭಾರತಿ ಸಂಸ್ಥೆ ಮಾಡುತ್ತಿದೆ. ತ್ಯಾಗ-ಸೇವಾ ಮನೋಭಾವದಿಂದ ಕೂಡಿದ ಸೇವೋಹೀ ಪರಮೋಧರ್ಮ ಅನ್ನುವ ಸ್ವಾಮೀ ವಿವೇಕಾನಂದರ ತತ್ವದಡಿಯಲ್ಲಿ ಸ್ವಾರ್ಥರಹಿತ ಚಿಂತನೆಗಳೊಂದಿಗೆ ಬೆನ್ನುಮೂಳೆ ಮುರಿದವರ ಬಾಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಜಿಲ್ಲೆಯ ಶಾಸಕ ಹಾಗೂ ಸಂಸದರಿಗೆ ಇದು ಹೆಮ್ಮೆಯ ವಿಷಯವಾಗಿದ್ದು, 5-6 ಜಿಲ್ಲೆಗಳ ಸಂತ್ರಸ್ತರಿಗೆ ಈ ಸೇವಾಧಾಮವು ಆಶ್ರಯವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next