Advertisement

ಸೌಖ್ಯಳ ಯಕ್ಷಪ್ರಶ್ನೆ ಮತ್ತು ಜಾಹೀರಾತು ದುನಿಯಾ

10:25 AM Nov 06, 2017 | |

ಜಾಹೀರಾತುಗಾರರು ಮನುಷ್ಯನ ಮನಸ್ಥಿತಿಯನ್ನು ಅಧ್ಯಯನ ಮಾಡಿದಷ್ಟು ಯಾವುದೇ ಸೈಕಾಲಜಿಸ್ಟ್‌ ಸಹ ಮಾಡಿರಲಾರನೇನೋ. ಮನುಷ್ಯನ ಗ್ರಹಿಸುವ ಕ್ರಿಯೆ ಯಾವ ರೀತಿ ನಡೆಯುತ್ತದೆ, ಎಲ್ಲೆಲ್ಲಿ ಆತ ಎಡವುತ್ತಾನೆ, ಆತ ನಿರ್ಧರಿ ಸುವ ರೀತಿ ಹೇಗೆ? ಆತ ನಮ್ಮ ಉತ್ಪನ್ನ ಖರೀದಿ ಮಾಡುವಂತೆ ಮಾಡುವುದು ಹೇಗೆ? ಹೀಗೆ ಬರೇ ಇದೇ ಯೋಚನೆಯಲ್ಲೇ ಜಾಹೀರಾತುಗಾರರು ಹಲ ವಾರು ತಂತ್ರಗಳನ್ನು ಬಳಸುತ್ತಾರೆ. 

Advertisement

ಬೆಂಗಳೂರಿನಿಂದ ಸೌಖ್ಯ ಎಂಬವರು ಈ ಜಯದೇವ ಸರ್‌ ಅವರು ಕಾಸು-ಕುಡಿಕೆ ಅಂತ ಬೋರ್ಡ್‌ ಹಾಕ್ಕೊಂಡು ಊರಿಗೆಲ್ಲ ಬುದ್ಧಿ ಹೇಳ್ತಾರಲ್ಲ.. ಸ್ವತಃ ಅವರಿಗೆ ಬುದ್ಧಿ ಎಷ್ಟಿದೆ ಅಂತ ನೋಡ್ಲೆ ಬೇಕು ಎಂಬ ತುಂಟತನದಿಂದ ಈ ಕೆಳಗಿನ ಪ್ರಶ್ನೆಗಳನ್ನು ಇ-ಮೇಲ್‌ ಮುಖಾಂತರ ಕಳಿಸಿದ್ರು.

ಒಂದು ರೇಸ್‌ ಇದೆ ಅಂತ ತಿಳ್ಕೊಳ್ಳಿ. ಅದ್ರಲ್ಲಿ ನೀವು ಹುಚ್ಚು­ನಾಯಿ ಅಟ್ಟಿಸ್ಕೊಂಡು ಬಂದ ಹಂಗೆ ಓಡ್ತೀರಾ, ಅದೇನೋ ಚಿನ್ನಾನೋ, ಬೆಳ್ಳಿನೋ ಪದ್ಕಾ ಗೆಲ್ಲೋಕೆ. ಹಂಗೇ ಓಡೀ ಓಡೀ ಒಬ್ಬೊಬ್ರನ್ನೇ ಹಿಂದಕ್ಕೆ ಹಾಕಿ ರೇಸ್ನಲ್ಲಿ ಮುಂದಕ್ಕೆ ಬರ್ತೀರಾ. ಕೊನೆಗೊಮ್ಮೆ ಏದುಸಿರು ಬಿಡ್ತಾ ಸೆಕೆಂಡ್‌ ಪ್ಲೇಸ್ನಲ್ಲಿ ಇದ್ದೋನನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಬರ್ತೀರಾ. ಈಗ ಹೇಳಿ ನೀವು ಯಾವ ಪ್ಲೇಸಲ್ಲಿ ಗೆದ್ರಿ? ಕೂಡ್ಲೆà ಹೇಳಿ. ಹೆಚ್ಚು ಯೋಚ್ನೆ ಮಾಡ್ದೆ ಮನಸ್ಸಿಗೆ ಬಂದ ಉತ್ತರವನ್ನು ಥಟ್‌ ಅಂತ ಹೇಳಿ…

ಇದಕ್ಕೇನಾದ್ರೂ ನೀವು ಫ‌ಸ್ಟ್‌ ಪ್ಲೇಸ್‌ ಅಂತ ಉತ್ತರ ಕೊಟ್ರೋ.. ನಿಮ್ಮ ಕತೆ ಮುಗ್ಧಾಂಗೆ. ಯಾಕೆಂದ್ರೆ ಸೆಕೆಂಡ್‌ ಪ್ಲೇಸ್‌ನನ್ನ ಹಿಂದೆ ಹಾಕಿದ್ರೆ ನೀವು ಆತನ ಸೆಕೆಂಡ್‌ ಪ್ಲೇಸ್‌ ತಗೋತೀರಾ.. ಫ‌ಸ್ಟ್‌ ಬಬೇìಕಂದ್ರೆ ಫ‌ಸ್ಟ್‌ ಇದ್ದೋನನ್ನ ಹಿಂದಕ್ಕೆ ಹಾಕ್ಬೇಕು.

ಅದ್ಯಾಕೋ ಗೊತ್ತಿಲ್ಲ. ನೂರರಲ್ಲಿ ತೊಂಬತ್ತಕ್ಕೂ ಮೀರಿ ಜನ ಈ ಪ್ರಶ್ನೆಗೆ ಫ‌ಸ್ಟ್‌ ಅಂತಾನೇ ಉತ್ತರ ಕೊಡ್ತಾರೆ.  ಸೆಕೆಂಡ್‌ ಅಂತ ಉತ್ತರ ಕೊಡುವವರು ಬಹಳ ವಿರಳ. ತಪ್ಪಾದ ಉತ್ತರ ಕೊಟ್ಟವರು ದಡ್ಡರೇನೂ ಅಲ್ಲ. ಮನುಷ್ಯನ ಮೆದುಳಿನ ಶಿಲ್ಪವೇ ಹಾಗಿದೆ. ಕೆಲವು ವಿಷಯಗಳನ್ನು ಮೆದುಳು ತಪ್ಪಾಗಿಯೇ ಗ್ರಹಿಸುತ್ತವೆ.

Advertisement

ಅದಿರಲಿ. ಈಗ ಸೌಖ್ಯ ಮೇಡಮ್‌ ಅವರ ಎರಡನೇ ಪ್ರಶ್ನೆ:
ಅದೇ ರೇಸಲ್ಲಿ ಲಾಸ್ಟ್‌ನಲ್ಲಿ ಇಧ್ದೋನನ್ನ ನೀವು ಹಿಂದಕ್ಕೆ ಹಾಕಿ ಮುಂದೆ ಬಂದ್ರಿ ಅಂತಿಟ್ಕೊಳ್ಳಿ. ಈಗ ನೀವು ಪಂದ್ಯದಲ್ಲಿ ಯಾವ ಪ್ಲೇಸ್‌? ಲಾಸ್ಟಿಂದ ಸೆಕೆಂಡ್‌ ಅಂತ ಉತ್ತರ ಕೊಟ್ರೋ.. ಮುಗೀತು. ಯಾಕೆಂದ್ರೆ, ಲಾಸ್ಟ್‌ ಇ¨ªೋನನ್ನ ನಿಮ್ಗೆ ಓವಟೇìಕ್‌ ಮಾಡಿ ಹಿಂದಕ್ಕೆ ಹಾಕೋಕ್ಕೆ ಆಗೋದೇ ಇಲ್ಲ. ಅಲ್ವೇ?

ಈ ಉತ್ತರ ಅರ್ಥ ಆಗ್ಲಿಕ್ಕೇ ತಲೆ ಸುಮಾರು ಖರ್ಚು ಮಾಡ್ಬೇಕಾಗುತ್ತೆ.  ಖರ್ಚು ಮಾಡ್ತಾ ಇರಿ, ಆಲ್‌ದಿ ಬೆಸ್ಟ್‌. ಆದ್ರೆ ವಾಸ್ತವ ಏನಂದ್ರೆ ನೂರಕ್ಕೆ ತೊಂಬತ್ತೂಂಬತ್ತು ಮಂದಿಯೂ ಕೂಡಾ ಈ ಪ್ರಶ್ನೆಗೆ ಲಾಸ್ಟಿನಿಂದ ಸೆಕೆಂಡ್‌’ ಎಂಬ ಉತ್ತರವನ್ನೇ ಕೊಡ್ತಾರೆ. ಇದೂ ಕೂಡಾ ನಮ್ಮ ಮೆದುಳಿನ ಶಿಲ್ಪವನ್ನು ಹೊಂದಿಕೊಂಡಿರುವಂತಹ ಒಂದು ವಿಷಯ. ಇದೇ ರೀತಿ ಸೌಖ್ಯ ಮೇಡಮ್‌ ಇನ್ನೂ ಮೂರು ಪ್ರಶ್ನೆಗಳನ್ನು ಕೇಳಿದ್ದರು. ಈ ವಿಷಯವನ್ನು  ನಾನು ಯಾಕೆ ಹೇಳ್ತಾ ಇದ್ದೇನೆ ಅಂದ್ರೆ, ಒಂದು ವಾಸ್ತವ ಸ್ಥಿತಿಗೂ, ಮೆದುಳು ಅದನ್ನು ಗ್ರಹಿಸುವ ರೀತಿಗೂ ಕೆಲವೊಮ್ಮೆ ಭಾರೀ ವ್ಯತ್ಯಾಸವಿರುತ್ತದೆ. ಆಪ್ಟಿಕಲ್‌ ಇಲ್ಯೂಶನ್‌ ರೀತಿಯ ಹಲವಾರು ಚಿತ್ರಗಳನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಎಷ್ಟೋ ಶಬ್ದಗಳು ಕೂಡಾ ಕೇಳುವಾಗ ಇನ್ನು ಯಾವುದೋ ಬೇರೆಯೇ ಶಬ್ದಗಳಂತೆ ಕೇಳುತ್ತವೆ. ಅದೇ ರೀತಿಯಲ್ಲಿ ಎಷ್ಟೋ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಾಗಲೂ ಬೇರೆ ಏನೋ ಒಂದು ರೀತಿಯಲ್ಲಿ ಅಪಾರ್ಥ ಮಾಡಿಕೊಳ್ಳುತ್ತೇವೆ.

ಒಂದು ವಿಷಯವನ್ನು ಅಥವಾ ಹೇಳಿಕೆಯನ್ನು ಬಹಳಷ್ಟು ಜನರು ಒಂದು ನಿರ್ದಿಷ್ಟ ರೀತಿಯಲ್ಲಿ ತಪ್ಪಾಗಿ ಗ್ರಹಿಸುತ್ತಾರೆ ಅಂತ ಪೂರ್ವಭಾವಿಯಾಗಿ ಗೊತ್ತಿದ್ದರೆ ಅಂತಹ ತಪ್ಪುಗ್ರಹಿತ್ವವನ್ನೇ ಬಂಡವಾಳವಾಗಿ ಮಾಡಿಕೊಂಡು ಕೋಟಿಗಟ್ಟಲೆ ಸಂಪಾದಿಸುವ ಒಂದು ದೊಡ್ಡ ಉದ್ಯಮವೇ ಇದೆ. ಅದೇ ಜಾಹೀರಾತು ಉದ್ಯಮ. ಮನುಷ್ಯನ ಮೆದುಳಿನಲ್ಲಿ ಆಗುವಂತಹ ಇಂತಹ ತಪ್ಪು ಗ್ರಹಿಕೆಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದೇ ಇವರ ಮೂಲ ಮಂತ್ರ.

ಜಾಹೀರಾತಿನವರು ಮನುಷ್ಯನ ಸೈಕಾಲಜಿಯನ್ನು ಅಧ್ಯಯನ ಮಾಡಿದಷ್ಟು ಯಾವುದೇ ಸೈಕಾಲಜಿಸ್ಟ್‌ ಮಾಡಿರಲಾರ. ಮನುಷ್ಯನ ಗ್ರಹಿಸುವ ಕ್ರಿಯೆ ಯಾವ ರೀತಿ ನಡೆಯುತ್ತದೆ, ಎಲ್ಲೆಲ್ಲಿ ಆತ ಎಡವುತ್ತಾನೆ, ಆತ ನಿರ್ಧಾರ ತೆಗೆದುಕೊಳ್ಳುವ ರೀತಿ ಹೇಗೆ? ಆತ ನಮ್ಮ ಉತ್ಪನ್ನ ಖರೀದಿ ಮಾಡುವಂತೆ ಮಾಡುವುದು ಹೇಗೆ? ಹೀಗೆ ಬರೇ ಇದೇ ಯೋಚನೆಯಲ್ಲೇ ಕಾರ್ಯಸಾಧಿಸುವ ಜಾಹೀರಾತುಗಾರರು ಹಲವಾರು ತಂತ್ರಗಳನ್ನು ಬಳಸುತ್ತಾರೆ. ಅದರಲ್ಲಿ ಅತಿ ಮುಖ್ಯವಾದದ್ದು ಮನುಷ್ಯನ ಗ್ರಹಿಕೆಯಲ್ಲಿರುವ ತಪ್ಪುಗಳು.

ನೀವೆಲ್ಲಾ ಓದಿರಬಹುದು Highets NAv in the last 7 years D Years itch’ ಯಾರಿಗೆ ಯಾವಾಗ ಅದು ಹೇಗೆ ಶುರುವಾಯಿತೋ ಗೊತ್ತಿಲ್ಲ. ಆದ್ರೆ ಮಾರುಕಟ್ಟೆಯಲ್ಲಿ ಈ ರೀತಿಯ ಹಲವಾರು ಸ್ಕೀಂಗಳು ಗರಿಷ್ಠ NAV ಯ ಗ್ಯಾರಂಟಿ ಎಂಬ ಮಂತ್ರ ಪಠಿಸಿ ಕೋಟ್ಯಾಂತರ ರೂಪಾಯಿಗಳನ್ನು ಕೂಡಿ ಹಾಕಿವೆ. ಗರಿಷ್ಟ NAV ಉತ್ತಮವಾಗಿರಬೇಕೆಂದೇನೂ ಇಲ್ಲವಲ್ಲ. ಗರಿಷ್ಠ ಕಳಪೆಯೂ ಆಗಿರಬಹುದಲ್ಲವೇ? ಇರುವುದರಲ್ಲಿ ಗರಿಷ್ಠ ಅಂದರೆ ಕೇವಲ ಶೇ.4 ಕೂಡಾ ಅದೀತು ಎಂಬ ಸರಳ ಸತ್ಯ ನಮಗೇಕೆ ಜ್ಞಾನೋದಯವಾಗುವುದಿಲ್ಲ? ಯಾಕೆಂದರೆ ನಮ್ಮ ಮೆದುಳು ಗರಿಷ್ಠ ಎಂಬ ಪದವನ್ನು ಮಾತ್ರ ಗ್ರಹಿಸಿ ಅದರ ಸಂದರ್ಭವನ್ನು ಬಿಟ್ಟು ಬಿಡುತ್ತದೆ. ಗರಿಷ್ಠ ಪದಕ್ಕೂ ಆ ಸ್ಕೀಂಗೂ ನಂಟು ಹಾಕಿ ಬಿಡುತ್ತದೆ. ಇದು ಮನುಷ್ಯನ ಗ್ರಹಿಕಾ ಕ್ರಮಕ್ಕೆ ಸಂಬಂಧಪಟ್ಟದ್ದು.

ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಫ‌ಂಡು ಶೇ.40 ರಷ್ಟು  ಪ್ರತಿಫ‌ಲ ಕೊಟ್ಟಿದೆ ಎಂದಾಕ್ಷಣ ಅದು ಮುಂದೆ ಕೂಡಾ ಹಾಗೆಯೇ ಕೊಡಬಹುದು ಎನ್ನಲು ಏನು ಆಧಾರವಿದೆ ಎಂದೇನೂ ನೀವು ಕೇಳುವುದಿಲ್ಲ. ಧನ್ಯೋಸ್ಮಿ ಅನ್ನುತ್ತಾರೆ ಫ‌ಂಡ್‌ ಪ್ರಾಯೋಜಕರು. ಅವರಿಗೆ ಅದೇ ಬೇಕಾಗಿರುತ್ತದೆ. ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದದ್ದು ಮುಂದೆಯೂ ನಡೆದೀತು ಎನ್ನುವುದು ನಮ್ಮ ಪ್ಯಾಟರ್ನ್ ಗುರುತಿಸುವ ಚಾಳಿಯಿಂದ ಬರುವಂತಹ ತೊಂದರೆ. ಮಾನವ ಯಾವತ್ತೂ ಎಲ್ಲಾ ವಿಷಯಗಳಲ್ಲೂ ಪ್ಯಾಟರ್ನ್ ಗುರುತಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ. ಈ ಸೈಕಾಲಜಿ ಅರಿತವರು ಈ ರೀತಿ ಚಾರಿತ್ರಿಕ ಸಾಧನೆಗಳ ಕೋಷ್ಟಕ ಕೊಟ್ಟು ಮನುಷ್ಯನ ಗ್ರಹಿಕಾ ಕ್ರಮದ ಲಾಭ ಪಡೆದು ಕೋಟಿಗಟ್ಟಲೆ ಬಾಚುತ್ತಾರೆ. ಜನ ದುಡ್ಡು ಹೂಡುತ್ತಲೇ ಹೋಗುತ್ತಾರೆ, ಶಾಸನ ವಿಧಿಸಿದ ಎಚ್ಚರಿಕೆ ಅಲ್ಲೇ ಬದಿಯಲ್ಲೇ ಬರೆದಿದ್ದರೂ ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ಆದ್ದರಿಂದಲೇ ಇದು ಇಂದಿಗೂ ಪ್ರಚಾರದ ಅತ್ಯಂತ ಪರಿಣಾಮಕಾರಿ ತಂತ್ರ.

ನೀವು ಯಾವುದಾದರೂ ಕನ್ನಡ ಪಂಡಿತರ ಕಾವ್ಯ ಮೀಮಾಂಸೆ ಕ್ಲಾಸಿನಲ್ಲಿ ಕುಳಿತರೆ (ನಾನು ಕುಳಿತಿಲ್ಲ, ಬಿಡಿ) ಅವರು ಕಾವ್ಯದ ಶಬಾœರ್ಥ’ ಹಾಗೂ ಧ್ವನ್ಯಾರ್ಥ’ ಅಂತ ಪಾಠ ಮಾಡುತ್ತಾರೆ. ಒಂದು ಶಬ್ದಕ್ಕೆ ನಿಘಂಟಿನ ಪ್ರಕಾರದ ಶಬ್ಧಾರ್ಥ ಅಲ್ಲದೆ ಅದು ಧ್ವನಿಸುವ ಇನ್ನೊಂದು ಬೇರೆಯೇ ಆದ ಧ್ವನ್ಯಾರ್ಥವಿರುತ್ತದೆ ಎಂದು ಹೇಳುತ್ತಾರೆ. ಉದಾ: ನನಗೆ ಹಸಿವಾಗುತ್ತದೆ ಎಂದರೆ ಹಸಿವಾಗುತ್ತದೆ ಎಂದಷ್ಟೇ ಶಬ್ದಾರ್ಥ. ಆದರೆ ತಿನ್ನಲು ಏನಾದರು ಬೇಕು ಅನ್ನುವುದು ಅದರ ಧ್ವನ್ಯಾರ್ಥ.

ಮಾಸಿಕ ಆದಾಯದ ಮಂಥಿ ಇನ್ಕಮ್‌ ಪ್ಲಾನ್‌ ಎಂಬ ನಾಮಾಂಕಿತ ಫ‌ಂಡುಗಳು ಪ್ರತಿ ತಿಂಗಳೂ ನಿಮಗೆ ಆದಾಯವನ್ನು ಕೊಡುತ್ತದೆ ಎಂಬ ಧ್ವನ್ಯಾರ್ಥವನ್ನು ಪೂರಕ ವಿಶುವಲ್‌ಗ‌ಳ ಜೊತೆಗೆ ನೀಡುತ್ತವೆ. ಆದರೆ, ವಾಸ್ತವದಲ್ಲಿ ಅವಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಆ ವಿಚಾರ ನೀವು ಕೇಳಿಲ್ಲ, ಅವರು ಹೇಳಿಲ್ಲ. ನಿರಂತರವಾಗಿ ಆದಾಯವು ಖಂಡಿತವಾಗಿ ಬರುತ್ತದೆ ಎಂದು ನೀವು ಅಸ್ಸೂಮ್‌ ಮಾಡಿದ್ದೀರಿ. ಅದು ನಿಮ್ಮ ತಪ್ಪು. ನಿಮ್ಮಿಂದ ಅಂತಹ ತಪ್ಪನ್ನು ಮಾಡಿಸಲಾಗುತ್ತದೆ. ನನ್ನದು ಟ್ರಿಪಲ್‌ ಟಾಕ್ಸ್ ಬೆನಿಫಿಟ್‌ ಎಂದು ಒಂದು ಫ‌ಂಡು ಚೀರಿ ಹೇಳುತ್ತದೆ. ಆಹಾ, ಮೂರು ಮೂರು ಬಗೆಯ ಬೆನಿಫಿಟ್ಟಾ..! ಎಂದು ಬಾಯಿ ತೆರೆದು, ಪರ್ಸ್‌ ತೆರೆದು ಇದ್ದದ್ದನ್ನೆಲ್ಲ ಸುರಿಯುತ್ತೀರಿ. ಬಳಿಕ ತಿಳಿಯುತ್ತದೆ, ಅಂತಹ ಟ್ರಿಪಲ್‌ ಬೆನಿಫಿಟ್‌ ಆ ವರ್ಗದ ಎಲ್ಲಾ ಫ‌ಂಡುಗಳಲ್ಲೂ ಸಿಗುತ್ತದೆ, ಆ ಸ್ಕೀಂನಲ್ಲಿ ಮಾತ್ರವೇನಲ್ಲ. ಅಷ್ಟೇ ಅಲ್ಲದೆ, ಅಸಲಿಗೆ ಆ ಸ್ಕೀಮ್ನಲ್ಲಿ ರಿಟರ್ನ್ ಕಡಿಮೆಯೇ ಆಗಿರುತ್ತದೆ. ನೋ ಫ‌ಂಡ್‌ ಅಲೋಕೇಶನ್‌ ಚಾರ್ಜ್‌ ಅನ್ನುತ್ತದೆ ಇನ್ನೊಂದು ಜಾಹೀರಾತು. ಆ ಚಾರ್ಜನ್ನು ಇನ್ನೆಲ್ಲೂ ಸೇರಿಸಿ ಬೇರೆ ಹೆಸರಿನಡಿ ಕಸಿದುಕೊಳ್ಳುತ್ತಿಲ್ಲ ತಾನೆ? ಶೇ.50- ಶೇ.100 ಡಿವಿಡೆಂಡುಗಳ ಕತೆ ನಾನು ಈ ಮೊದಲೇ ಹೇಳಿದ್ದೇನೆ. ಅವು ಮುಖಬೆಲೆಯ ಮೇಲೆ ಎಂದು ಜಾಹೀರಾತು ಎಲ್ಲೂ ಹೇಳುವುದಿಲ್ಲ. ನಿಮ್ಮ ಇಂದಿನ ಹೂಡಿಕೆಯ ಮೇಲೆ ಅಷ್ಟೊಂದು ಪ್ರತಿಫ‌ಲ ಬರುತ್ತದೆ ಎಂಬ ಧ್ಯನ್ಯಾರ್ಥಕ್ಕೆ ಒಳಗಾದರೆ ಅದು ಅವರ ತಪ್ಪಲ್ಲ. ನೆನಪಿರಲಿ, ಕಾವ್ಯದ ಧ್ವನ್ಯಾರ್ಥ ಲೋಕವನ್ನು ಜಾಹೀರಾತು ಪ್ರಪಂಚದವರು ಅರಗಿಸಿಕೊಂಡಷ್ಟು ಯಾವ ಕನ್ನಡ ಪಂಡಿತನೂ ಕಲಿತುಕೊಂಡಿರಲಾರ. ನಾವೂ ನಮ್ಮ ಉಳಿವಿಗಾಗಿ ಇನ್ನು ಮುಂದಾದರೂ ಕಲಿತುಕೊಳ್ಳುವುದೊಳ್ಳೆಯದು.

ಹಲವಾರು ವಿಷಯಗಳಲ್ಲಿ ಪುರುಷರಿಗೂ ಮಹಿಳೆಯರಿಗೂ ವ್ಯತ್ಯಾಸ ಇರುತ್ತದೆ. ಸರ್ವೇ ಸಾಮಾನ್ಯವಾಗಿ ಧಿರಿಸು, ಬಟ್ಟೆಬರೆ, ಪಾದರಕ್ಷೆ, ಬ್ಯಾಗು, ಛತ್ರಿ, ಇತ್ಯಾದಿ ವಿಷಯಗಳಲ್ಲಿ ಹಾಗೂ ಅವನ್ನು ಅದೇ ರೀತಿಯಲ್ಲಿ ಪ್ರಚಾರ ಕೂಡಾ ಮಾಡಲಾಗುತ್ತದೆ. ಲೇಡೀಸ್‌ ಡ್ರೆಸ್‌, ಲೇಡೀಸ್‌ ಬ್ಯಾಗ್‌, ಲೇಡೀಸ್‌ ಅಂಬ್ರೆಲ್ಲಾ ಇತ್ಯಾದಿ. ಇದು ಈಗ ವಿತ್ತ ಕ್ಷೇತ್ರವನ್ನೂ ಪ್ರವೇಶಿಸಿದೆ. ಮಹಿಳೆಯರಿಗಾಗಿ ಪ್ರತ್ಯೇಕವಾದ ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಇದೆ ಅಂದರೆ ನಂಬುತ್ತೀರಾ? ಆದರೆ ಇದೆ. ಮಹಿಳೆಯರಿಗಾಗಿ ಸ್ಪೆಷಲ್‌ ಫ‌ಂಡ್‌ ಎಂಬ ಜಾಹೀರಾತಿನೊಂದಿಗೆ ಬರುತ್ತಾ ಕೋಟಿ ಕೋಟಿ ಬಾಚಿ ಹೋಗುತ್ತದೆ. ಎತ್ತಣ ಕೋಗಿಲೆ ಎತ್ತಣ ಮಾಮರವಯ್ಯ? ಲಿಂಗಕ್ಕೂ ಹೂಡಿಕೆಗೂ ಯಾವ ಸಂಬಂಧವಯ್ಯ? ಬಲ್ಲಿದವರು ತಿಳಿಯಪಡಿಸಬೇಕು! ಈ ರೀತಿ ಪುರುಷರಿಗೆ ಸರಿಸಾಟಿಯಾಗಿ ನಿಲ್ಲುವ ಆಧುನಿಕ ದಿಟ್ಟ ಮಹಿಳೆಗೆ ಎಂದೆಲ್ಲ ಹೇಳಿ ಅವರ ಈಗೋ ಅಥವ ಅಹಂಗೆ ಮಸಾಜ್‌ ಮಾಡಿದರೆ ಅವರ ಪರ್ಸ್‌ ತೆರೆಯುತ್ತೆ. ಅದೇ ರೀತಿ ಇದು ನಿಮ್ಮಂತಹ High Networth Individuals’ ಅಥವಾ ಶ್ರೀಮಂತ ಗ್ರಾಹಕರಿಗಾಗಿ ಮಾತ್ರವೇ ಪ್ರತ್ಯೇಕವಾಗಿ ತಯಾರಿಸಿದ ವಿಶೇಷ ಹೂಡಿಕೆ ಎಂದಾಕ್ಷಣ ಪೂರಿಯಂತೆ ಉಬ್ಬದ ಗಂಡಸರಾರು? ನಿಮ್ಮ ಮುದ್ದಿನ ಮಕ್ಕಳಿಗಾಗಿ ಈ ಸ್ಕೀಂ ಎಂದಾಕ್ಷಣ ಹೆತ್ತವರು ಬೇಸಗೆಯಲ್ಲಿ ಹೊರಗಿಟ್ಟ ಐಸ್ಕ್ರೀಮಿನಂತೆ ಕರಗಿ ನೀರಾಗುತ್ತಾರೆ. ವಾಸ್ತವದಲ್ಲಿ, ದುಡ್ಡು ಇದಾವುದನ್ನೂ ಗಮನಿಸುವುದಿಲ್ಲ. ಪುರುಷ, ಮಹಿಳೆ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಎಲ್ಲಿಂದ ಬಂದರೂ, ಯಾರಿಗಾಗಿ ಬಂದರೂ, ಯಾಕಾಗಿ ಬಂದರೂ, ದುಡ್ಡು ದುಡ್ಡೇ. (ಅರ್ಥಶಾಸ್ತ್ರದಲ್ಲಿ ಇದನ್ನು Fungibility ಅನ್ನುತ್ತಾರೆ. ಕನ್ನಡದಲ್ಲಿ ಅದಕ್ಕೆ ಏನನ್ನುತ್ತಾರೋ ಗೊತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ತಿಳಿಸಿ).  ದುಡ್ಡು ದುಡ್ಡೇ ಆದ್ದರಿಂದ ಹೂಡಿಕೆ ಒಂದೇ. ಕೋಯೀ ಫ‌ರಖ್‌ ನಹೀ ಪಡ್ತಾ! ಆದರೂ ಈ ಎಲ್ಲಾ ಭಾವನಾತ್ಮಕ ಪ್ರಚಾರಗಳು ಮಾರುಕಟ್ಟೆಗಿಳಿದು ದುಡ್ಡು ಬಾಚುವುದು ಮಾತ್ರ ಸತ್ಯ. ನಾವು, ನೀವು, ಅವರು, ಎಲ್ಲರೂ ಇಂತಹ ಆಧುನಿಕ ಮೌಡ್ಯಕ್ಕೆ ಮಾರುಹೋಗುವ ಕಟ್ಟೆಯೇ ಇಂದಿನ ಮಾರುಕಟ್ಟೆ!

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next