Advertisement

ಫಿಫಾ ವಿಶ್ವಕಪ್‌ನಲ್ಲಿ ದೊಡ್ಡ ಏರುಪೇರು: ಸೌದಿಗೆ ಸೋತಿತು ಮೆಸ್ಸಿಯ ಆರ್ಜೆಂಟೀನಾ!

10:47 PM Nov 22, 2022 | Team Udayavani |

ಲುಸೈಲ್‌: 2018ರ ಫಿಫಾ ವಿಶ್ವಕಪ್‌ನಲ್ಲಿ ಲಯೋನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನ ಪ್ರೀಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿದ್ದಿತ್ತು. ಆ ಆಘಾತವನ್ನೇ ಅದಿನ್ನೂ ಮರೆತಿಲ್ಲ. ಅದರ ನಡುವೆ ಮಂಗಳವಾರ ತನಗಿಂತ ವಿಶ್ವ ರ್‍ಯಾಂಕಿಂಗ್‌ನಲ್ಲಿ ಬಹಳ ಕೆಳಗಿರುವ ಸೌದಿ ಅರೇಬಿಯ ವಿರುದ್ಧ ಸೋತುಹೋಗಿದೆ!

Advertisement

ಇದು ಅದರ ಮುಂದಿನ ಹಾದಿಯನ್ನೇ ದುರ್ಭರಗೊಳಿಸಿದೆ. ಇನ್ನುಳಿದ ಎರಡೂ ಪಂದ್ಯವನ್ನು ಅದು ಗೆಲ್ಲಲೇಬೇಕಿದೆ. ಇನ್ನೊಂದು ಪಂದ್ಯವನ್ನು ಸೋತರೂ ಗುಂಪು ಹಂತದಲ್ಲೇ ಕೂಟದಿಂದ ಹೊರ ಬೀಳಬಹುದು.

“ಸಿ’ ವಿಭಾಗದ ಮುಖಾಮುಖಿಯಲ್ಲಿ ಸೌದಿ ಅರೇಬಿಯ, ಬಲಿಷ್ಠ ಅರ್ಜೆಂಟೀನವನ್ನು 2-1 ಗೋಲುಗಳಿಂದ ಹೊಡೆದುರುಳಿಸಿ ಇತಿಹಾಸ ನಿರ್ಮಿಸಿದೆ. ಪಂದ್ಯದ ಮೊದಲ ಗೋಲು ಮೆಸ್ಸಿ ಅವರಿಂದಲೇ ಸಿಡಿಯಲ್ಪಟ್ಟಿತ್ತು. 10ನೇ ನಿಮಿಷದಲ್ಲೇ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಮುನ್ನಡೆ ಒದಗಿಸಿದ್ದರು. ವಿರಾಮದ ತನಕ ಅರ್ಜೆಂಟೀನ ಈ ಮುನ್ನಡೆಯನ್ನು ಕಾಯ್ದುಕೊಂಡು ಬಂತು.

ಆದರೆ ಬ್ರೇಕ್‌ ಬಳಿಕ ಮೂರೇ ನಿಮಿಷದಲ್ಲಿ (48) ಸಲೇಹ್‌ ಅಲ್‌ಶೆಹ್ರಿ ಆಕರ್ಷಕ ಗೋಲ್‌ ಮೂಲಕ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಐದೇ ನಿಮಿಷದಲ್ಲಿ ಸಲೇಂ ಅಲ್‌ ದವಾÕರಿ ಇನ್ನೊಂದು ಗೋಲು ಸಿಡಿಸಿದಾಗ ಅರ್ಜೆಂಟೀನಕ್ಕೆ ಮರ್ಮಾಘಾತ. ಸೌದಿ ಪಾಳೆಯದಲ್ಲಿ ಮಹಾಸಂಭ್ರಮ!

ಅರ್ಜೆಂಟೀನ ಈ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಪಂದ್ಯವನ್ನು ಸಮಬಲಕ್ಕೆ ತರುವ ಯಾವ ಯತ್ನವೂ ಫ‌ಲಿಸಲಿಲ್ಲ. ವಿಶ್ವಕಪ್‌ ಪಂದ್ಯದ ಪ್ರಥಮಾರ್ಧದಲ್ಲಿ ಮುನ್ನಡೆ ಸಾಧಿಸಿಯೂ ಅರ್ಜೆಂಟೀನ ಸೋಲಿನ ಆಘಾತಕ್ಕೆ ಸಿಲುಕಿದ ಕೇವಲ 2ನೇ ನಿದರ್ಶನ ಇದಾಗಿದೆ. ಕೊನೆಯ ಸಲ ಸೋತದ್ದು 1930ರಷ್ಟು ಹಿಂದೆ. ಅಂದಿನ ಎದುರಾಳಿ ಉರುಗ್ವೆ. ಅರ್ಜೆಂಟೀನ ಈ ಸೋಲು 1990ರ ಕೂಟದ ಆರಂಭಿಕ ಪಂದ್ಯವನ್ನು ನೆನಪಿಸಿತು. ಅಂದು ಡಿಯಾಗೊ ಮರಡೋನಾ ಪಡೆಯನ್ನು ಕೊಲಂಬಿಯ 1-0 ಅಂತರದಿಂದ ಮಣಿಸಿತ್ತು.

Advertisement

36ಕ್ಕೆ ನಿಂತಿತು ಅಜೇಯ ಓಟ: ಈ ಫ‌ಲಿತಾಂಶದೊಂದಿಗೆ ಅರ್ಜೆಂಟೀನದ ಸತತ 36 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್‌ ಬಿದ್ದಿದೆ (25 ಜಯ, 11 ಡ್ರಾ). ಈ ಪಂದ್ಯವನ್ನೂ ಗೆದ್ದು ಇಟಲಿಯ ಸತತ 37 ಪಂದ್ಯಗಳ ಅಜೇಯ ದಾಖಲೆಯನ್ನು ಸರಿದೂಗಿಸುವುದು ಅರ್ಜೆಂಟೀನದ ಯೋಜನೆ ತಲೆಕೆಳಗಾಯಿತು. 2019ರಲ್ಲಿ ಅರ್ಜೆಂಟೀನ ತನ್ನ ಅಜೇಯ ಅಭಿಯಾನ ಆರಂಭಿಸಿತ್ತು. ಅದು ಕೊನೆಯ ಸಲ ಸೋತದ್ದು 2019ರ ಜುಲೈ 3ರಂದು. ಅಂದು ಅರ್ಜೆಂಟೀನವನ್ನು ಕೆಡವಿದ ತಂಡ ಬ್ರೆಝಿಲ್‌.

1978 ಮತ್ತು 1986ರ ಚಾಂಪಿಯನ್‌ ತಂಡವಾದ ಅರ್ಜೆಂಟೀನ, 2014ರ ಫೈನಲ್‌ನಲ್ಲಿ ಜರ್ಮನಿಗೆ ಶರಣಾಗಿತ್ತು. ಕಳೆದ ಸಲ ಫ್ರಾನ್ಸ್‌ಗೆ ಸೋತು ಪ್ರೀಕ್ವಾರ್ಟರ್‌ ಫೈನಲ್‌ನಲ್ಲೇ ಹೊರಬಿದ್ದಿತ್ತು. 5ನೇ ಹಾಗೂ ಕೊನೆಯ ವಿಶ್ವಕಪ್‌ನಲ್ಲಿ ಆಡುತ್ತಿರುವ ಲಯೋನೆಲ್‌ ಮೆಸ್ಸಿ ಈ ಸಲ ಅದೃಷ್ಟವನ್ನು ನಂಬಿಕೊಂಡು ಬಂದಿದ್ದರು. ಆದರೆ ಆರಂಭದಲ್ಲೇ ಇದು ಕೈಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next