ರಿಯಾದ್: ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ 20 ಮಂದಿ ಪ್ರಯಾಣಿಕರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿರುವ ಘಟನೆ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್‌ನ ಅಕಾಬಾ ಶಾರ್ ನಲ್ಲಿ ಸೋಮವಾರ ( ಮಾ.27 ರಂದು) ನಡೆದಿರುವುದು ವರದಿಯಾಗಿದೆ.
ಉಮ್ರಾ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್‌ನ ಅಕಾಬಾ ಶಾರ್ ನಲ್ಲಿ ಬ್ರಿಡ್ಜ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ, ಪಲ್ಟಿಯಾದ ಕಾರಣ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕನಿಷ್ಠ 20 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಉಳಿದ 29 ಮಂದಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಸ್ಸಿನ ಬ್ರೇಕ್ ಫೇಲ್ ಆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಸ್ ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಪ್ರಾಥಮಿಕ ಮಾಹಿತಿಯ ಪ್ರಕಾರ ಓರ್ವ ಭಾರತೀಯ ಇದ್ದರೆಂದು ತಿಳಿದು ಬಂದಿದೆ.
ಇತ್ತೀಚೆಗೆ ಉಮ್ರಾ ಯಾತ್ರೆಗೆ ತೆರಳಿದ್ದ ರಾಯಚೂರು ಮೂಲದ ಕುಟುಂಬದ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಟೂರಿಸ್ಟ್ ಬಸ್ ಹಾಗೂ ಕಂಟೇನರ್ ನಡುವೆ ಈ ಅಪಘಾತ ಸಂಭವಿಸಿತ್ತು.