ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಕಳೆದ ವರ್ಷದಿಂದ ಬಂಧನದಲ್ಲಿರುವ ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಬಾತ್ ರೂಂನಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ವಾರದಲ್ಲಿ ಇದು ಎರಡನೇ ಬಾರಿಗೆ ಜೈನ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಜೈಲಿನ ಬಾತ್ ರೂಂನಲ್ಲಿ ಬಿದ್ದು ಬೆನ್ನುಮೂಳೆಯ ಗಾಯಕ್ಕಾಗಿ ಸೋಮವಾರ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನಿಶ್ಶಕ್ತರಾಗಿ ಕಾಣುವ ಜೈನ್ ಅವರು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಆಸ್ಪತ್ರೆಯಲ್ಲಿ ಕಾಣಿಸಿಕೊಂಡರು, ಅವರ ಆರೋಗ್ಯದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಬಂಧನದ ನಂತರ ಸುಮಾರು 35 ಕೆಜಿ ತೂಕವನ್ನು ಕಳೆದುಕೊಂಡಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರು ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿದ್ದಾರೆ. ಮಲಗುವಾಗ ಬಿಪಿಎಪಿ ಯಂತ್ರದ ಅಗತ್ಯವಿದೆ ಎಂದು ಎಎಪಿ ಹೇಳಿದೆ.
ಇದನ್ನೂ ಓದಿ:ಹೋಟೆಲ್‌ನಲ್ಲಿಟ್ಟಿದ್ದ ಬಾಟಲಿಯಲ್ಲಿ ನೀರೆಂದು ಆ್ಯಸಿಡ್ ಕುಡಿದ ಗ್ರಾಹಕ!
Related Articles
ಕಳೆದ ಶನಿವಾರ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಿಟಿ ಸ್ಕ್ಯಾನ್ ಮತ್ತು ಎಂಆರ್ಐ ಸೇರಿದಂತೆ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ, ಆದರೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.